Justice K B Geetha & Karnataka HC-Dharwad 
ಸುದ್ದಿಗಳು

ಅಪಘಾತದಲ್ಲಿ ಕೋಳಿಗಳು ಸತ್ತರೆ ಅವನ್ನು ಜೀವಸಂಪತ್ತು, ಸರಕು ಎಂದೇ ಪರಿಗಣಿಸಬೇಕು: ಹೈಕೋರ್ಟ್‌

ಕರ್ನಾಟಕ ಮೋಟಾರು ವಾಹನ ನಿಯಮಗಳಲ್ಲಿ ಕೋಳಿಯನ್ನು ಉಲ್ಲೇಖಿಸಿಲ್ಲ. ಆದರೆ, ಮೋಟಾರು ವಾಹನ ಕಾಯಿದೆ-1988ರ ಸೆಕ್ಷನ್‌ 2(13) ಪ್ರಕಾರ ಸರಕು ಎಂಬ ಪದವು ಜೀವಸಂಪತ್ತನ್ನು ಒಳಗೊಂಡಿರುತ್ತದೆ ಎಂದಿರುವ ನ್ಯಾಯಾಲಯ.

Bar & Bench

ಅಪಘಾತದಲ್ಲಿ ಕೋಳಿಗಳು ಸಾವಿಗೀಡಾದರೆ, ಅವುಗಳನ್ನು ಜೀವಸಂಪತ್ತು ಹಾಗೂ ಸರಕು ಎಂದೇ ಪರಿಗಣಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ಪ್ರಕರಣವೊಂದರಲ್ಲಿ ಅಭಿಪ್ರಾಯಪಟ್ಟಿದೆ.‌

ಸರಕು ಸಾಗಣೆ ವಾಹನದಲ್ಲಿ ಸಾಗಿಸುತ್ತಿದ್ದ ಕೋಳಿಗಳು ಅಪಘಾತದಲ್ಲಿ ಸಾವೀಗಿಡಾದ ಹಿನ್ನೆಲೆಯಲ್ಲಿ ನೀಡಲಾಗಿರುವ ಪರಿಹಾರದ ಮೊತ್ತ ವಿಪರೀತವಾಗಿದೆ ಎಂದು ಆಕ್ಷೇಪಿಸಿ, ರಿಲಯನ್ಸ್‌ ಇನ್ಶೂರೆನ್ಸ್‌ ಕಂಪನಿ ಸಲ್ಲಿಸಿದ್ದ ಇತರೆ ಮೊದಲ ಮೇಲ್ಮನವಿಯನ್ನು (ಎಂಎಫ್‌ಎ) ನ್ಯಾಯಮೂರ್ತಿ ಕೆ ಬಿ ಗೀತಾ ಅವರಿದ್ದ ಏಕಸದಸ್ಯ ಪೀಠವು ಭಾಗಶಃ ಪುರಸ್ಕರಿಸಿದೆ.

ಮೋಟಾರು ವಾಹನ ಅಪಘಾತ (ಎಂವಿಸಿ) ಪ್ರಕರಣದ ವಿಚಾರಣೆ ನಡೆಸಿದ್ದ ಬಳ್ಳಾರಿಯ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ–12ರ (ಎಂಎಸಿಟಿ) ₹4,51,000 ಪರಿಹಾರ ನೀಡುವಂತೆ 2016ರ ಫೆಬ್ರುವರಿ 4ರಂದು ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದಿದೆ. ಆದರೆ, ಈ ಮೊತ್ತಕ್ಕೆ ವಿಧಿಸಲಾಗಿದ್ದ ವಾರ್ಷಿಕ ಶೇ 7ರಷ್ಟು ಬಡ್ಡಿ ದರವನ್ನು ಶೇ 6ಕ್ಕೆ ಇಳಿಸಿದ್ದು ಪರಿಹಾರದ ಮೊತ್ತವನ್ನು ಎಂಟು ವಾರಗಳಲ್ಲಿ ಪಾವತಿಸುವಂತೆ ನಿರ್ದೇಶಿಸಿದೆ.

ಕರ್ನಾಟಕ ಮೋಟಾರು ವಾಹನ ನಿಯಮಗಳಲ್ಲಿ ಕೋಳಿಯನ್ನು ಉಲ್ಲೇಖಿಸಿಲ್ಲ. ಆದರೆ, ಮೋಟಾರು ವಾಹನ ಕಾಯಿದೆ-1988ರ ಸೆಕ್ಷನ್‌ 2(13) ಪ್ರಕಾರ ಸರಕು ಎಂಬ ಪದವು ಜೀವಸಂಪತ್ತನ್ನು ಒಳಗೊಂಡಿರುತ್ತದೆ. ಕೋಳಿಗಳನ್ನೂ ಜೀವಸಂಪತ್ತು ಹಾಗೂ ಸರಕು ಎಂದು ಪರಿಗಣಿಸಬೇಕು ಎಂದು ಪೀಠ ವಿವರಿಸಿದೆ.

ಪ್ರಕರಣದ ಹಿನ್ನೆಲೆ: ಬಳ್ಳಾರಿಯ ಅಂದ್ರಾಳು ಗ್ರಾಮದ ಬಾಲಾಜಿ ಪೌಲ್ಟ್ರಿ ಫಾರ್ಮ್ ಮಾಲೀಕ ಕೆ ವೀರನಾರಾಯಣ ಸ್ವಾಮಿ 2013ರ ಜೂನ್ 18 ರಂದು ಚಳ್ಳಕೆರೆ ಪೌಲ್ಟ್ರಿ ಫಾರ್ಮ್‌ನಿಂದ 2,250 ಬ್ರಾಯ್ಲರ್ (ಮಾಂಸದ) ಕೋಳಿಗಳನ್ನು ಖರೀದಿಸಿ ಐಷರ್ ವಾಹನದಲ್ಲಿ ತಾಡಪತ್ರಿಗೆ ಸಾಗಿಸುತ್ತಿದ್ದರು. ಈ ವಾಹನ ಜೂನ್ 19ರಂದು ಬೆಳಗಿನ ಜಾವ 4 ಗಂಟೆಯಲ್ಲಿ ಅಯ್ಯಗಾರ್ಲಪಳ್ಳಿ-ಸೆಟ್ಟೂರು ರಸ್ತೆಯಲ್ಲಿ ಅಪಘಾತಕ್ಕೀಡಾಗಿ ಪಲ್ಟಿಯಾಗಿತ್ತು. ಪರಿಣಾಮ ಅದರಲ್ಲಿದ್ದ 2 ಸಾವಿರ ಕೋಳಿಗಳು ಸ್ಥಳದಲ್ಲೇ ಸಾವಿಗೀಡಾಗಿದ್ದವು ಮತ್ತು ಉಳಿದ ಕೋಳಿಗಳನ್ನು ಸ್ಥಳೀಯರು ತೆಗೆದುಕೊಂಡು ಹೋಗಿದ್ದರು ಎಂದು ಆರೋಪಿಸಲಾಗಿತ್ತು.

ಘಟನೆಯಲ್ಲಿ ಉಂಟಾಗಿರುವ ನಷ್ಟಕ್ಕಾಗಿ ₹5,90,000 ಪರಿಹಾರ ನೀಡಬೇಕು ಎಂದು ಕೋರಿ ವೀರನಾರಾಯಣ ಸ್ವಾಮಿ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ನ್ಯಾಯಮಂಡಳಿ ಮೃತ ಕೋಳಿಗಳ ಮಾಲೀಕರಿಗೆ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ನಿರ್ದೇಶಿಸಿತ್ತು.

ಘಟನೆಯಿಂದ ಅನುಭವಿಸಿದ ಮಾನಸಿಕ ನೋವನ್ನು ಪರಿಗಣಿಸಿ ಪರಿಹಾರ ಘೋಷಣೆ ಮಾಡಿಲ್ಲ. ಆದ್ದರಿಂದ, ಹೆಚ್ಚುವರಿ ಪರಿಹಾರ ಪಾವತಿಸಲು ನಿರ್ದೇಶಿಸಬೇಕು ಎಂದು ವೀರನಾರಾಯಣ ಸ್ವಾಮಿ ಕೋರಿದ್ದರು.

K Veera Narayana Swamy Vs Y Yankappa.pdf
Preview