Justices H P Sandesh & P Sree Sudha 
ಸುದ್ದಿಗಳು

ಪ್ರಕ್ರಿಯೆ ದುರ್ಬಳಕೆ: ಹೇಬಿಯಸ್‌ ಕಾರ್ಪಸ್‌ ಅರ್ಜಿದಾರರಾದ ಪತಿ, ತಂದೆಗೆ ತಲಾ ₹25 ಸಾವಿರ ದಂಡ ವಿಧಿಸಿದ ಹೈಕೋರ್ಟ್‌

"ಪ್ರತಿದಿನ ಹೆಣ್ಣು ಮಕ್ಕಳು ಓಡಿ ಹೋಗುತ್ತಾರೆ. ಹುಡುಗರು ಸಹ ಹುಡುಗಿಯರ ಜೊತೆ ಓಡಿ ಹೋಗುತ್ತಾರೆ. ಇದಕ್ಕೆ ಇಲ್ಲಿ ಕುಳಿತು ಹೇಬಿಯಸ್‌ ಕಾರ್ಪಸ್‌ ನಿರ್ಧರಿಸಬೇಕೆ" ಎಂದು ಕಿಡಿಕಾರಿದ ಹೈಕೋರ್ಟ್‌.

Bar & Bench

ಪತ್ನಿ ಕರೆದೊಯ್ದಿರುವ ಮಗುವನ್ನು ಹಾಜರುಪಡಿಸಲು ಕೋರಿ ಪತಿ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ ಹಾಗೂ ಪುತ್ರಿಯನ್ನು ಅನಾಮಿಕರು ಒತ್ತೆಯಿಟ್ಟುಕೊಂಡಿದ್ದಾರೆ ಎಂದು ತಂದೆ ಸಲ್ಲಿಸಿದ್ದ ಪ್ರತ್ಯೇಕ ಹೇಬಿಯಸ್‌ ಕಾರ್ಪಸ್‌ ಅರ್ಜಿಗಳನ್ನು ಗುರುವಾರ ವಜಾಗೊಳಿಸಿರುವ ಕರ್ನಾಟಕ ಹೈಕೋರ್ಟ್‌, ತಲಾ ₹25,000 ದಂಡ ವಿಧಿಸಿದೆ.

ಅರ್ಜಿದಾರರು ಕಾನೂನು ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಎಚ್‌ ಪಿ ಸಂದೇಶ್‌ ಮತ್ತು ಪಿ ಶ್ರೀಸುಧಾ ಅವರ ವಿಭಾಗೀಯ ಪೀಠ ಕಿಡಿಕಾರಿದೆ.

"ಪತಿ ಎತ್ತಿರುವ ವಿಚಾರವು ಸಂಪೂರ್ಣವಾಗಿ ವೈವಾಹಿಕ ವಿವಾದಕ್ಕೆ ಸಂಬಂಧಿಸಿದ್ದು, ಮಗುವನ್ನು ಹಾಜರುಪಡಿಸಲು ಆದೇಶಿಸಬೇಕು ಎಂದು ಹೇಬಿಯಸ್‌ ಕಾರ್ಪಸ್‌ ಅರ್ಜಿ ಮೂಲಕ ಕೋರಲಾಗದು" ಎಂದು ಪೀಠ ಹೇಳಿದೆ.

“ಪ್ರಕರಣದ ವಿಚಾರ ಗಮನಿಸಿ, ಸರ್ಕಾರದ ವಕೀಲರ ವಾದವನ್ನು ಆಲಿಸಿದಾಗ ಇದು ಕಾನೂನು ಪ್ರಕ್ರಿಯೆ ದುರ್ಬಳಕೆಯಲ್ಲದೇ ಬೇರೇನೂ ಅಲ್ಲ. ಸೂಕ್ತ ಪರಿಹಾರ ಕೋರುವುದಕ್ಕೆ ಬದಲಾಗಿ ಪತಿಯು ಮಗುವನ್ನು ಹಾಜರುಪಡಿಸಲು ಕೋರಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದಾರೆ” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದ್ದು, ಅರ್ಜಿಯನ್ನು ವಜಾಗೊಳಿಸಿ ₹25,000 ದಂಡ ವಿಧಿಸಿತು.

ಒಂದು ವಾರದಲ್ಲಿ ಅರ್ಜಿದಾರರು ದಂಡ ಮೊತ್ತವನ್ನು ಹೈಕೋರ್ಟ್‌ ರಿಜಿಸ್ಟ್ರಿಯಲ್ಲಿ ಠೇವಣಿ ಇಡಬೇಕು, ಇಲ್ಲವಾದಲ್ಲಿ ರಿಜಿಸ್ಟ್ರಿಯು ಕಾನೂನಿನ ಪ್ರಕಾರ ದಂಡವನ್ನು ವಸೂಲಿ ಮಾಡಬಹುದು ಎಂದು ಪೀಠ ಆದೇಶಿಸಿದೆ.

ವಿಚಾರಣೆಯ ವೇಳೆ ಪತಿಯ ಪರ ವಕೀಲ “ಇದು ವೈವಾಹಿಕ ವಿವಾದವಲ್ಲ. ಪತ್ನಿಯು ಮಗುವನ್ನು ಕರೆದೊಯ್ದಿದ್ದು, ಇಲ್ಲಿ ಮಗುವಿನ ಸುರಕ್ಷತೆ ಮಹತ್ವದ್ದಾಗಿದೆ” ಎಂದರು.

ಇದಕ್ಕೆ ಆಕ್ಷೇಪಿಸಿದ್ದ ಸರ್ಕಾರದ ವಕೀಲೆ “ಇದು ಪತಿ-ಪತ್ನಿಯರ ವಿಚಾರವಾಗಿದ್ದು, ತಾಯಿಯ ಜೊತೆ ಮಗು ಇದೆ. ಪ್ರತಿದಿನ ಇವರು ವಿಡಿಯೊ ಕಾಲ್‌ನಲ್ಲಿ ಮಾತನಾಡುತ್ತಾರೆ” ಎಂದರು.

ಈ ಹಂತದಲ್ಲಿ ಅರ್ಜಿಯ ಊರ್ಜಿತತ್ವ ಪ್ರಶ್ನಿಸಿದ ಪೀಠವು “ಈ ವಿಚಾರದಲ್ಲಿ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ಹೇಗೆ ಸಲ್ಲಿಸಿದ್ದೀರಿ? ಗಂಡ-ಹೆಂಡತಿಯರ ನಡುವಿನ ವಿಚಾರ ಇದಾಗಿದ್ದು, ಪತ್ನಿ ಮಗು ಕರೆದೊಯ್ದಿದ್ದಾರೆ. ಹೀಗಿರುವಾಗ ಹೇಬಿಯಸ್‌ ಕಾರ್ಪಸ್‌ ಊರ್ಜಿತವಾಗುತ್ತದೆಯೇ” ಎಂದು ಕಿಡಿಕಾರಿತು.

ಎರಡನೇ ಪ್ರಕರಣದಲ್ಲಿ ಪುತ್ರಿಯು ಪ್ರೀತಿಸಿದ ಯುವಕನ ಜೊತೆ ಓಡಿ ಹೋಗಿದ್ದರೂ 25 ವರ್ಷದ ಮಗಳನ್ನು ಅಕ್ರಮವಾಗಿ ಅನಾಮಿಕರು ಒತ್ತೆ ಇಟ್ಟುಕೊಂಡಿದ್ದಾರೆ. ಹೀಗಾಗಿ, ಆಕೆಯನ್ನು ಹಾಜರುಪಡಿಸಲು ಪೊಲೀಸರಿಗೆ ನಿರ್ದೇಶಿಸಬೇಕು ಎಂದು ತಂದೆ ಕೋರಿದ್ದರು.

ರಾಜ್ಯ ಸರ್ಕಾರದ ಪರ ವಕೀಲೆಯು “ಯುವತಿಯು ತನ್ನ ರಕ್ಷಣೆಗೆ ಪೊಲೀಸರಿಗೆ ಮನವಿ ಮಾಡಿದ್ದಾಳೆ. ಏಪ್ರಿಲ್‌ 15ರಂದು ಸಮನ್ವಯ ಪೀಠವು ಯುವತಿಗೆ ರಕ್ಷಣೆ ನೀಡುವಂತೆ ಆದೇಶಿಸಿದೆ. ಏಪ್ರಿಲ್‌ 8ರಂದು ಪ್ರಕರಣ ದಾಖಲಿಸಲಾಗಿದೆ” ಎಂದರು.

"ಪುತ್ರಿ ಏಪ್ರಿಲ್‌ 6ರಂದು ಮನೆ ತೊರೆದಿದ್ದಾರೆ. ಆನಂತರ ಎರಡು ದಿನಗಳ ಬಳಿಕ ಪೊಲೀಸರ ರಕ್ಷಣೆ ಕೋರಿದ್ದಾರೆ. ಅದಾಗ್ಯೂ, ಒಂದು ತಿಂಗಳ ನಂತರ ತಂದೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದಾರೆ" ಎಂದು ಆದೇಶದಲ್ಲಿ ಉಲ್ಲೇಖಿಸಿದ ಪೀಠವು ಅರ್ಜಿ ವಜಾಗೊಳಿಸಿ, ತಂದೆಗೆ ₹25,000 ದಂಡ ವಿಧಿಸಿತು.

ಅಲ್ಲದೇ, ಇದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಿದೆ ಎಂದಿದ್ದು, ವಾರದಲ್ಲಿ ದಂಡದ ಮೊತ್ತವನ್ನು ರಿಜಿಸ್ಟ್ರಿಗೆ ಪಾವತಿಸಬೇಕು ಎಂದು ನಿರ್ದೇಶಿಸಿತು. ಇಲ್ಲವಾದಲ್ಲಿ ಸೂಕ್ತ ಕಾನೂನು ಪ್ರಕ್ರಿಯೆ ಮೂಲಕ ದಂಡ ವಸೂಲಿ ಮಾಡಲು ರಿಜಿಸ್ಟ್ರಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ತಂದೆಯ ಪರ ವಕೀಲ “ಪುತ್ರಿ ನಾಪತ್ತೆಯಾಗಿದ್ದು, ಮೇ 8ರವರೆಗೆ ಆಕೆ ಎಲ್ಲಿದ್ದಾಳೆ ಎಂಬ ಮಾಹಿತಿಯೇ ಇರಲಿಲ್ಲ. ಕುಟುಂಬದವರ ಭಯದಿಂದ ಆಕೆ ಪೊಲೀಸರ ರಕ್ಷಣೆ ಕೋರಿದ್ದಾಳೆ. ತಂದೆ ಮತ್ತು ಮಗಳ ನಡುವೆ ಕನಿಷ್ಠ ಒಂದು ಸಮಾಲೋಚನೆಗೆ ಅವಕಾಶ ಮಾಡಿಕೊಡಬೇಕು” ಎಂದು ಕೋರಿದರು.

ಇದಕ್ಕೆ ಆಕ್ಷೇಪಿಸಿದ ಸರ್ಕಾರದ ವಕೀಲೆ “ಏಪ್ರಿಲ್‌ 15ರಂದು ಸಮನ್ವಯ ಪೀಠವು ಯುವತಿಗೆ ರಕ್ಷಣೆ ಒದಗಿಸಿದೆ” ಎಂದರು.

ವಿಚಾರಣೆಯ ಒಂದು ಹಂತದಲ್ಲಿ ಪೀಠವು "ಓಡಿ ಹೋಗಿರುವ ಪ್ರಕರಣವಾಗಿದ್ದು, ಇದರಲ್ಲಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಏಕೆಂದರೆ ವಯಸ್ಕ ಮಹಿಳೆ ಸ್ವಇಚ್ಛೆಯಿಂದ ನಿರ್ಧಾರ ಮಾಡಿದ್ದಾರೆ" ಎಂದು ಹೇಳಿತು.

“25 ವರ್ಷದ ಮಹಿಳೆ ನಿರ್ಧಾರ ಮಾಡಿ ಹೋಗಿದ್ದು, ಆಕೆಯನ್ನು ಕುಟುಂಬದ ಜೊತೆ ಸೇರುವಂತೆ ಬಲವಂತ ಮಾಡಲಾಗದು. ಪ್ರತಿ ದಿನ ಹುಡುಗಿಯರು ಓಡಿ ಹೋಗುತ್ತಾರೆ. ಹುಡುಗರು ಹುಡುಗಿಯರನ್ನು ಕರೆದೊಯ್ಯುತ್ತಾರೆ. ಅದನ್ನು ಇಲ್ಲಿ ಕುಳಿತು ಹೇಬಿಯಸ್‌ ಕಾರ್ಪಸ್‌ ಅರ್ಜಿ ವಿಚಾರಣೆ ನಡೆಸಲಾಗುತ್ತದೆಯೇ?” ಎಂದು ಪೀಠ ಪ್ರಶ್ನಿಸಿತು.

ನ್ಯಾಯಾಲಯದ ಅಮೂಲ್ಯ ಸಮಯವನ್ನು ಪೋಲು ಮಾಡಲಾಗುತ್ತಿದೆ. ಪ್ರಕರಣ ನೈಜವಾಗಿದ್ದರೆ ಅದನ್ನು ಪರಿಗಣಿಸಬಹುದು. ಆದರೆ, ಹಾಲಿ ಪ್ರಕರಣ ನೈಜವಾದುದ್ದಲ್ಲ ಎಂದು ಹೇಳಿತು.