Karnataka HC and Justice P S Dinesh Kumar
Karnataka HC and Justice P S Dinesh Kumar 
ಸುದ್ದಿಗಳು

ನ್ಯಾಯದಾನ ವ್ಯವಸ್ಥೆ ಕ್ರಾಂತಿಕಾರಗೊಳಿಸುವ ನಿಟ್ಟಿನಲ್ಲಿ ಹೈಕೋರ್ಟ್‌ನಿಂದ ವಿನೂತನ ಕ್ರಮ: ಸಿಜೆ ದಿನೇಶ್‌ ಕುಮಾರ್‌

Bar & Bench

“ನ್ಯಾಯಾಂಗ ವ್ಯವಸ್ಥೆಯಲ್ಲಿ ಮಾಹಿತಿ ಮತ್ತು ಸಂಹವನ ತಂತ್ರಜ್ಞಾನ ಸುಧಾರಿಸುವ ನಿಟ್ಟಿನಲ್ಲಿ ಕರ್ನಾಟಕ ಹೈಕೋರ್ಟ್‌ ಮುಂಚೂಣಿಯಲ್ಲಿದೆ. ಅಲ್ಲದೇ, ನ್ಯಾಯದಾನ ವ್ಯವಸ್ಥೆಯನ್ನು ಕ್ರಾಂತಿಕಾರಗೊಳಿಸುವ ನಿಟ್ಟಿನಲ್ಲಿ ಹಲವು ವಿನೂತನ ಕ್ರಮಕೈಗೊಂಡಿದೆ” ಎಂದು ನೂತನ ಮುಖ್ಯ ನ್ಯಾಯಮೂರ್ತಿ ಪಿ ಎಸ್‌ ದಿನೇಶ್‌ ಕುಮಾರ್‌ ಹೇಳಿದರು.

ಹೈಕೋರ್ಟ್‌ನ ಒಂದನೇ ಕೋರ್ಟ್‌ನಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ವತಿಯಿಂದ ನೂತನ ಸಿಜೆ ದಿನೇಶ್‌ ಕುಮಾರ್‌ ಅವರಿಗೆ ಆಯೋಜಿಸಲಾಗಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ತಾಂತ್ರಿಕ ಸುಧಾರಣೆಯು ನ್ಯಾಯದಾನ ವ್ಯವಸ್ಥೆಯಲ್ಲಿ ಅಪಾರ ಬದಲಾವಣೆ ತಂದಿದೆ. ಇ-ಕೋರ್ಟ್‌, ಕಾಗದರಹಿತ ನ್ಯಾಯಾಲಯ, ಪ್ರಕರಣಗಳ ಗಣಕೀಕರಣ, ಪ್ರಕರಣದ ಆರಂಭದಿಂದ ಕೊನೆಯವರೆಗಿನ ದತ್ತಾಂಶ ನಿರ್ವಹಣೆ, ವಿಡಿಯೊ ಕಾನ್ಫರೆನ್ಸ್‌ ವ್ಯವಸ್ಥೆಯಿಂದ ಸಾಕಷ್ಟು ಸಮಯ ಮತ್ತು ಹಣ ಉಳಿತಾಯವಾಗುತ್ತಿದೆ” ಎಂದು ಅಭಿಪ್ರಾಯಪಟ್ಟರು.

“ನ್ಯಾಯಾಂಗ ಅಧಿಕಾರಿಗಳನ್ನು ಹೆಚ್ಚಿಸಲಾಗಿದ್ದು, ವಿಷಯ ಪರಿಣತರಿಂದಾಗಿ, ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆಗಳಾದ ಲೋಕ ಅದಾಲತ್‌, ಮಧ್ಯಸ್ಥಿಕೆಯಿಂದಾಗಿ ಸಕಾರಾತ್ಮಕ ಫಲಿತಾಂಶಗಳು ಬರುತ್ತಿದೆ” ಎಂದರು.

“ಎಲ್ಲರ ಸ್ವಾತಂತ್ರ್ಯ ಕಾಪಾಡುವುದು, ನ್ಯಾಯದಾನ ನೀಡುವುದು ಮತ್ತು ಭ್ರಾತೃತ್ವ ವೃದ್ಧಿಸುವುದು ನಮ್ಮ ಗುರಿಯಾಗಬೇಕಿದೆ. ಕಾನೂನು ವೃತ್ತಿಯ ಅತ್ಯುತ್ತಮವಾದದ್ದನ್ನು ನೀಡುವ ಮೂಲಕ ತನ್ನ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ. ಈ ಅತ್ಯುನ್ನತ ಹುದ್ದೆ ದೊರೆತಿರುವುದಕ್ಕೆ ನಾನು ದೇವರಿಗೆ ಕೃತಜ್ಞನಾಗಿದ್ದೇನೆ” ಎಂದರು.

“ಕೆಲಸಕ್ಕೆ ದೊರೆಯುವ ಪ್ರತಿಫಲವೇ ನಿಮಗೆ ಪ್ರೇರಣೆಯಾಗದಿರಲಿ, ಅದೇ ವೇಳೆ, ಕರ್ತವ್ಯ ವಿಮುಖತೆಯಡೆಗೂ ನಿಮ್ಮ ಒಲವು ಹೋಗದಿರಲಿ” ಎಂಬ ಭಗದ್ಗೀತೆಯ ಶ್ಲೋಕವನ್ನು ಸಿಜೆ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.