ತುಮಕೂರು ನಗರದ ಹೊರವಲಯದಲ್ಲಿರುವ ಕೋಟ್ಯಂತರ ರೂಪಾಯಿ ಬೆಲೆಬಾಳುವ ಸರ್ಕಾರಿ ಜಮೀನನ್ನು 'ಕಾಂಗ್ರೆಸ್ ಭವನ ಟ್ರಸ್ಟ್'ಗೆ ನಿಯಮಬಾಹಿರವಾಗಿ ಮಂಜೂರು ಮಾಡಲಾಗಿದೆ ಎಂಬ ವಿಚಾರ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ನೋಟಿಸ್ ಜಾರಿಗೊಳಿಸಿದೆ.
ತುಮಕೂರಿನ ಎನ್ ಎನ್ ಗೋಪಾಲಕೃಷ್ಣ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ಕೆಲ ಕಾಲ ವಿಚಾರಣೆ ನಡೆಸಿದ ಪೀಠವು ಪ್ರತಿವಾದಿಗಳಾದ ರಾಜ್ಯ ಕಂದಾಯ ಇಲಾಖೆ, ನಗರ ಅಭಿವೃದ್ಧಿ ಇಲಾಖೆ, ತುಮಕೂರು ಜಿಲ್ಲಾಧಿಕಾರಿ, ಪೌರಾಡಳಿತ ನಿರ್ದೇಶನಾಲಯ ಮತ್ತು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ನೊಟೀಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ತುಮಕೂರು ಹೋಬಳಿಯ ಮಾರಲೂರು ಗ್ರಾಮದ ಸರ್ವೆ ನಂಬರ್ 87/1 ಮತ್ತು 87/2 ರಲ್ಲಿರುವ ಸುಮಾರು 4 ಎಕರೆ ಜಮೀನನ್ನು 1942ರಲ್ಲಿ ಮೈಸೂರು ಮಹಾರಾಜರ ಕಾಲದಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ (ನಗರದ ಕಸ ವಿಲೇವಾರಿಗಾಗಿ) ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ, ಇತ್ತೀಚೆಗೆ ಈ ಜಮೀನಿನ ಪೈಕಿ 2 ಎಕರೆ ಪ್ರದೇಶವನ್ನು 'ಕಾಂಗ್ರೆಸ್ ಭವನ ಟ್ರಸ್ಟ್'ಗೆ ನಿಯಮಬಾಹಿರವಾಗಿ ಮಂಜೂರು ಮಾಡಲಾಗಿದೆ ಎಂದು ಅರ್ಜಿದಾರರು ದೂರಿದ್ದಾರೆ.
ರಾಜೀವ್ ಗಾಂಧಿನಗರ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಹೆಸರಿನಲ್ಲಿ ಜಮೀನಿಗಾಗಿ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ, ಮಂಜೂರಾತಿ ನೀಡುವಾಗ ಯಾವುದೇ ಅರ್ಜಿ ಸಲ್ಲಿಸದ 'ಕಾಂಗ್ರೆಸ್ ಭವನ ಟ್ರಸ್ಟ್'ಗೆ ಜಮೀನು ನೀಡಲಾಗಿದೆ. ಜಮೀನು ಮಂಜೂರಾಗುವ ಸಂದರ್ಭದಲ್ಲಿ ಕಾಂಗ್ರೆಸ್ ಭವನ ಟ್ರಸ್ಟ್ ಅಸ್ತಿತ್ವದಲ್ಲೇ ಇರಲಿಲ್ಲ. ಸಾರ್ವಜನಿಕ ಬಳಕೆಗೆ ಮೀಸಲಾಗಿದ್ದ ಜಮೀನನ್ನು ಖಾಸಗಿ ಸಂಸ್ಥೆಗೆ ನೀಡಲಾಗಿದೆ. ಈ ಖಾಸಗಿ ಸಂಸ್ಥೆಯ ಉದ್ದೇಶವೇ ಬಹಿರಂಗವಾಗಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ.
ಮಾರುಕಟ್ಟೆ ದರದ ಪ್ರಕಾರ ಈ ಜಮೀನಿನ ಮೌಲ್ಯ ಸುಮಾರು 23 ಕೋಟಿ ರುಪಾಯಿ ಆಗಿದ್ದರೂ, ಸರ್ಕಾರವು ಇದನ್ನು ಕೇವಲ 17 ಲಕ್ಷ ರು (ಮಾರ್ಗದರ್ಶಿ ದರದ ಶೇ. 5 ರಷ್ಟು) ನೀಡಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟಾಗಿದೆ. ಸರ್ಕಾರಿ ಸುತ್ತೋಲೆಗಳ ಪ್ರಕಾರ ಇಂತಹ ಜಮೀನುಗಳನ್ನು ಮಾರುಕಟ್ಟೆ ದರದಲ್ಲಿ ಮಾತ್ರ ಮಾರಾಟ ಮಾಡಬೇಕೆಂಬ ನಿಯಮವಿದ್ದು, ಅದನ್ನು ಇಲ್ಲಿ ಗಾಳಿಗೆ ತೂರಲಾಗಿದೆ. ಹೀಗಾಗಿ, ಕಾಂಗ್ರೆಸ್ ಭವನ ಟ್ರಸ್ಟ್ ಗೆ ಜಮೀನು ಮಂಜೂರಾತಿ ಆದೇಶ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.