Vinay Kulkarni and Karnataka HC 
ಸುದ್ದಿಗಳು

ಜೀವಾವಧಿ ಶಿಕ್ಷೆ ಅಮಾನತುಗೊಳಿಸಿ, ಜಾಮೀನು ಕೋರಿದ ವಿನಯ್‌ ಕುಲಕರ್ಣಿ, ಇಂಡಿ: ಸಿಬಿಐಗೆ ಹೈಕೋರ್ಟ್‌ ನೋಟಿಸ್‌

2016ರಲ್ಲಿ ನಡೆದಿದ್ದ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯವು 17 ಮಂದಿyನ್ನು 15.04.2026ರಂದು ಅಪರಾಧಿಗಳು ಎಂದು ನಿರ್ಧರಿಸಿ, 17.04.2026ರಂದು ವಿನಯ್‌ & ಇಂಡಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

Bar & Bench

ಬಿಜೆಪಿ ಮುಖಂಡ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು ವಿಧಿಸಿರುವ ಜೀವಾವಧಿ ಶಿಕ್ಷೆ ಬದಿಗೆ ಸರಿಸುವಂತೆ ಕೋರಿ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಮತ್ತು ಚಂದ್ರಶೇಖರ್‌ ಇಂಡಿ ಸಲ್ಲಿಸಿರುವ ಕ್ರಿಮಿನಲ್‌ ಮೇಲ್ಮನವಿಗಳ ಸಂಬಂಧ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಕರ್ನಾಟಕ ಹೈಕೋರ್ಟ್‌ ಮಂಗಳವಾರ ನೋಟಿಸ್‌ ಜಾರಿ ಮಾಡಿದೆ.

ಪ್ರಕರಣದಲ್ಲಿ ಅಪರಾಧಿಗಳಾಗಿರುವ ವಿನಯ್‌ ಕುಲಕರ್ಣಿ ಮತ್ತು ಚಂದ್ರಶೇಖರ್‌ ಇಂಡಿ ಅಲಿಯಾಸ್‌ ಚಂದು ಮಾಮ ಸಲ್ಲಿಸಿರುವ ಕ್ರಿಮಿನಲ್‌ ಮೇಲ್ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಮೊಹಮ್ಮದ್‌ ನವಾಜ್‌ ಮತ್ತು ಟಿ ವೆಂಟಕೇಶ್‌ ನಾಯಕ್‌ ಅವರ ವಿಭಾಗೀಯ ಪೀಠ ನಡೆಸಿತು.

Justice Mohammad Nawaz and T Venkatesh Naik

ವಿನಯ್‌ ಕುಲಕರ್ಣಿ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ಯಾವುದೇ ಸಾಕ್ಷಿ ಇಲ್ಲಿದಿದ್ದರೂ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ವಿಚಾರಣೆಯ ಹಂತದಲ್ಲಿ ವಿನಯ್‌ ಮತ್ತು ಚಂದ್ರಶೇಖರ್‌ ಜಾಮೀನಿನ ಮೇಲೆ ಹೊರಗಿದ್ದರು. ಮೆರಿಟ್‌ ಆಧರಿಸಿ ಆರೋಪಿಗಳಿಗೆ ಸುಪ್ರೀಂ ಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. ನ್ಯಾಯದಾನದಲ್ಲಿ ಹಸ್ತಕ್ಷೇಪ ಮಾಡಿದ್ದರೆ ಎಂದು ಕೆಲಕಾಲ ಆರೋಪಿಗಳ ಜಾಮೀನು ರದ್ದತಿ ಮಾಡಿ, ಜೈಲಿಗೆ ಕಳುಹಿಸಲಾಗಿತ್ತು. ಆನಂತರ ಮತ್ತೆ ನ್ಯಾಯಾಲಯವು ಜಾಮೀನು ನೀಡಲಾಗಿತ್ತು. ಏಳು ಪ್ರತ್ಯಕ್ಷದರ್ಶಿಗಳು, ಇತರೆಲ್ಲಾ ಪ್ರಾಸಿಕ್ಯೂಷನ್‌ ಸಾಕ್ಷಿಗಳು ಪ್ರತೀಕೂಲವಾಗಿವೆ. ವಿಚಾರಣೆಗೆ ಪರಿಗಣಿಸಿ, ದಾಖಲೆ ಸಲ್ಲಿಸಲು ನಿರ್ದೇಶಿಸಬೇಕು” ಎಂದು ಕೋರಿದರು.

ಚಂದ್ರಶೇಖರ್‌ ಇಂಡಿ ಪರ ಹಿರಿಯ ವಕೀಲ ಎಂ ನಾಗಮುತ್ತು ಅವರು “ಪಿತೂರಿ ಆರೋಪಕ್ಕೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆ ಅಮಾನತು ಮಾಡಬೇಕು ಎಂದು ಕೋರುತ್ತಿದ್ದೇವೆ. 16ನೇ ಆರೋಪಿಯಾದ ಚಂದ್ರಶೇಖರ್‌ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ. ಅಪ್ರೂವರ್‌ ಆಗಿದ್ದ ವ್ಯಕ್ತಿ ಪ್ರತಿಕೂಲ ಸಾಕ್ಷಿಯಾಗಿ ಬದಲಾಗಿದ್ದಾರೆ” ಎಂದರು.

ಆಗ ಪೀಠ “ಮೆರಿಟ್‌ ಮೇಲೆ ಈಗ ವಿಚಾರಣೆ ನಡೆಸುವುದಿಲ್ಲ” ಎಂದಿತು. ಅಲ್ಲದೇ, ಸಿಬಿಐಗೆ ನೋಟಿಸ್‌ ಜಾರಿಗೊಳಿಸಿತು.

ಈ ಹಂತದಲ್ಲಿ ಸಿ ವಿ ನಾಗೇಶ್‌ ಅವರು ರಜಾಕಾಲದ ಪೀಠದ ಮುಂದೆ ಅರ್ಜಿ ವಿಚಾರಣೆ ಕೋರುವ ಸ್ವಾತಂತ್ರ್ಯ ನೀಡಬೇಕು ಎಂಬ ಮನವಿಯನ್ನೂ ನ್ಯಾಯಾಲಯ ಪುರಸ್ಕರಿಸಿತು. ಇದಕ್ಕೆ ಆಕ್ಷೇಪಿಸಿದ ಸಿಬಿಐ ಪರ ವಕೀಲ ರಾಹುಲ್‌ ಕೃಷ್ಣಾರೆಡ್ಡಿ ಅವರು “ವಿಚಾರಣಾಧೀನ ನ್ಯಾಯಾಲಯದ ತೀರ್ಪು 680 ಪುಟಗಳಿವೆ. ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ, ತಮ್ಮ ಆಕ್ಷೇಪಣೆಯನ್ನು ದಾಖಲಿಸಬೇಕು” ಎಂದು ಕೋರಿದರು. ಇದನ್ನೂ ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿ, ವಿಚಾರಣೆ ಮುಂದೂಡಿತು.

ಮಧ್ಯಂತರ ಪರಿಹಾರದ ಭಾಗವಾಗಿ ವಿಚಾರಣಾಧೀನ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ, ಜಾಮೀನು ಮಂಜೂರು ಮಾಡಬೇಕು ಎಂದು ವಿನಯ್‌ ಕುಲಕರ್ಣಿ ಹಾಗೂ ಚಂದ್ರಶೇಖರ್‌ ಇಂಡಿ ಕೋರಿದ್ದಾರೆ.

2016ರಲ್ಲಿ ನಡೆದಿದ್ದ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ಸತ್ರ ನ್ಯಾಯಾಲಯವು 17 ಮಂದಿ ಆರೋಪಿಗಳನ್ನು 15.04.2026ರಂದು ಅಪರಾಧಿಗಳು ಎಂದು ನಿರ್ಧರಿಸಿ, 17.04.2026ರಂದು ವಿನಯ್‌ ಮತ್ತು ಇಂಡಿ ಸೇರಿದಂತೆ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.