Prajwal Revanna & Karnataka HC 
ಸುದ್ದಿಗಳು

ಮಹಿಳೆ ವಿವಸ್ತ್ರಗೊಳಿಸಿ ವಿಡಿಯೊ ಚಿತ್ರೀಕರಣ ಪ್ರಕರಣ: ಎಸ್‌ಐಟಿಗೆ ನೋಟಿಸ್‌ ಜಾರಿಗೊಳಿಸಿದ ಹೈಕೋರ್ಟ್‌

ಅತ್ಯಾಚಾರ ಪ್ರಕರಣದಲ್ಲಿ ಜೀವನ ಪರ್ಯಂತ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್‌ ಮಹಿಳೆಯನ್ನು ವಿವಸ್ತ್ರಗೊಳಿಸಿ, ವಿಡಿಯೊ ರೆಕಾರ್ಡ್‌ ಮಾಡಿದ ಪ್ರಕರಣದಲ್ಲಿ ಜಾಮೀನು ಕೋರಿದ್ದಾನೆ.

Bar & Bench

ಪುತ್ರನಿಗೆ ಹಾಸನದ ಕೇಂದ್ರೀಯ ವಿದ್ಯಾಲಯದಲ್ಲಿ ಸೀಟು ಕೊಡಿಸುವ ನೆಪದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಚಿತ್ರೀಕರಿಸಿದ ಆರೋಪದ ಮೇಲೆ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿರುವ ಅರ್ಜಿ ಸಂಬಂಧ ವಿಶೇಷ ತನಿಖಾ ದಳಕ್ಕೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ನೋಟಿಸ್‌ ಜಾರಿಗೊಳಿಸಿದೆ.

ಪ್ರಜ್ವಲ್‌ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠದಿಂದ ವಿಚಾರಣೆ ನಡೆಸಿತು.

Justice M Nagaprasanna

ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಪೀಠವು ʼಏನಿದು ಮತ್ತೆ ಬೇಲ್‌?ʼ ಎಂದಿತು. ಅದಕ್ಕೆ ಪ್ರಜ್ವಲ್‌ ಪರ ವಕೀಲ ಜಿ ಅರುಣ್ ಅವರು “ಡೀಫಾಲ್ಟ್‌ ಜಾಮೀನು ಕೋರಿದ್ದೇವೆ. ಈಗ ಈ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾಗಿದೆ” ಎಂದರು.

ಆಗ ಪೀಠವು “ಯಾವುದರಲ್ಲಿ ಡೀಫಾಲ್ಟ್‌ ಬೇಲ್‌? ಐಪಿಸಿ ಸೆಕ್ಷನ್‌ 354A, B, C, D ಪ್ರಕರಣವೇ?” ಎಂದಿತು.

ಸ್ಥಳದಲ್ಲಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು ಎಸ್‌ಐಟಿ ಪರವಾಗಿ ನೋಟಿಸ್‌ ಪಡೆಯುವುದಾಗಿ ತಿಳಿಸಿದರು.

ಇದನ್ನು ಆಲಿಸಿದ ಪೀಠವು ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿ, ಜುಲೈ 3ರ ಒಳಗೆ ಆಕ್ಷೇಪಣೆ ಸಲ್ಲಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.

2019ರಲ್ಲಿ ಸಂಸದರ ಕೋಟಾದಲ್ಲಿ ತನ್ನ ಪುತ್ರನಿಗೆ ಕೇಂದ್ರೀಯ ವಿದ್ಯಾಲಯದಲ್ಲಿ ಸೀಟು ಕೊಡಿಸುವಂತೆ ಮಹಿಳೆಯು ಪ್ರಜ್ವಲ್‌ನನ್ನು ಸಂಪರ್ಕಿಸಿದ್ದರು. ಈ ಸಂದರ್ಭದಲ್ಲಿ ಆಕೆಯ ಮೊಬೈಲ್‌ ನಂಬರ್‌ ಸಂಗ್ರಹಿಸಿದ್ದ ಪ್ರಜ್ವಲ್‌ ಪದೇಪದೇ ಆಕೆಗೆ 2019 ಮತ್ತು 2021ರ ನಡುವೆ ಕರೆ ಮಾಡಿ ವಿವಸ್ತ್ರವಾಗಿ ಮೊಬೈಲ್‌ ಕ್ಯಾಮೆರಾದ ಮುಂದೆ ಬರುವಂತೆ ಪೀಡಿಸಿದ್ದನು. ಆಕೆ ವಿವಸ್ತ್ರವಾಗಿ ಕ್ಯಾಮೆರಾ ಮುಂದೆ ಬಂದಾಗ ಆಕೆಯ ಅನುಮತಿ ಇಲ್ಲದೇ ವಿಡಿಯೊ ರೆಕಾರ್ಡ್‌ ಮಾಡಿ, ಫೋಟೊಗಳನ್ನು ಸಂಗ್ರಹಿಸಿದ್ದರು. ತಾನು ಕರೆ ಮಾಡಿದಾಗ ಫೋನ್‌ ತೆಗೆಯದಿದ್ದರೆ ಅವುಗಳನ್ನು ಬಹಿರಂಗಗೊಳಿಸುವುದಾಗಿ ಬೆದರಿಸಿದ್ದನು.

ಈ ಆರೋಪದ ಮೇಲೆ ಐಪಿಸಿ ಸೆಕ್ಷನ್‌ಗಳಾದ 354A (ಲೈಂಗಿಕ ಕಿರುಕುಳ), 354B (ವಿವಸ್ತ್ರಗೊಳಿಸಲು ಬೆದರಿಕೆ), 354D (ಹಿಂಬಾಲಿಸುವುದು) ಮತ್ತು 506 (ಕ್ರಿಮಿನಲ್‌ ಬೆದರಿಕೆ) ಜೊತೆಗೆ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ಗಳಾದ 66E ಮತ್ತು 67 ಅಡಿ ಪ್ರಕರಣ ದಾಖಲಿಸಲಾಗಿದೆ.

ಪ್ರಜ್ವಲ್‌ ವಿರುದ್ಧ ಮೂರು ಅತ್ಯಾಚಾರ ಮತ್ತು ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣ ಸೇರಿ ಒಟ್ಟು ನಾಲ್ಕು ಪ್ರಕರಣ ದಾಖಲಾಗಿದ್ದು, ಒಂದರಲ್ಲಿ ಪೂರ್ಣಗೊಂಡು ಶಿಕ್ಷೆಯಾಗಿದೆ.