Karnataka HC and KPSC
Karnataka HC and KPSC 
ಸುದ್ದಿಗಳು

ಬ್ರೇಕ್‌ ಇನ್ಸ್‌ಪೆಕ್ಟರ್‌ ನೇಮಕಾತಿ: ಹೈಕೋರ್ಟ್ ಆದೇಶ ಪಾಲನೆ ಮಾಡದ ಕೆಪಿಎಸ್‌ಸಿ ಕಾರ್ಯದರ್ಶಿಗೆ ಶೋಕಾಸ್ ನೋಟಿಸ್

Bar & Bench

ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಬ್ರೇಕ್ ಇನ್‌ಸ್ಪೆಕ್ಟರ್‌ಗಳ ನೇಮಕಾತಿಗೆ ಸಂಬಂಧಿಸಿದಂತೆ ತಾನು ನೀಡಿದ್ದ ಆದೇಶ ಪಾಲನೆ ಮಾಡದ ಹಿನ್ನೆಲೆಯಲ್ಲಿ ಕೆಪಿಎಸ್‌ಸಿ ಕಾರ್ಯದರ್ಶಿಅವರಿಗೆ ಕರ್ನಾಟಕ ಹೈಕೋರ್ಟ್‌ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.

ನೇಮಕಾತಿ ಪ್ರಕ್ರಿಯೆ ಕುರಿತಾದ ಹೈಕೋರ್ಟ್‌ ಆದೇಶವನ್ನು ಪಾಲಿಸದ ಕೆಪಿಎಸ್‌ಸಿ ವಿರುದ್ಧ ವಿ.ಆರ್. ಲೋಕೇಶ್ ಸೇರಿ ಮೂವರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಪೀಠ ಗುರುವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠವು, 2021ರ ಆ. 25ರಂದು ಹೈಕೋರ್ಟ್ ನೀಡಿರುವ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಸಿರುವ ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಡಿ ಏಕೆ ಕ್ರಮ ಜರುಗಿಸಬಾರದು ಎಂದು ವಿವರಣೆ ಕೇಳಿ ಕೆಪಿಎಸ್‌ಸಿ ಕಾರ್ಯದರ್ಶಿ ಜಿ. ಸತ್ಯವತಿ ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿತು. ವಿಚಾರಣೆಯನ್ನು ಜೂ.24ಕ್ಕೆ ಮುಂದೂಡಲಾಗಿದೆ.

ಪ್ರಕರಣದ ಹಿನ್ನೆಲೆ:

ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಬ್ರೇಕ್ ಇನ್‌ಸ್ಪೆಕ್ಟರ್‌ಗಳ ನೇಮಕಾತಿಗಾಗಿ 2016ರ ಫೆ.4ರಂದು ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿತ್ತು. ತಾತ್ಕಾಲಿಕ ಆಯ್ಕೆ ಪಟ್ಟಿಯು 2019ರಲ್ಲಿ ಬಿಡುಗಡೆಯಾಗಿತ್ತು. ಆದರೆ ಇದನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣವನ್ನು ಆಲಿಸಿದ್ದ ಹೈಕೋರ್ಟ್‌ 2021ರ ಆ.25ರಂದು ಅರ್ಜಿಯನ್ನು ಇತ್ಯರ್ಥಪಡಿಸಿತ್ತು. 2016ರಲ್ಲಿ ಅರ್ಜಿ ಆಹ್ವಾನದ ವೇಳೆ ಹೊರಡಿಸಿದ್ದ ಅಧಿಸೂಚನೆ ಪ್ರಕಾರವೇ ನೇಮಕಾತಿ ಪ್ರಕ್ರಿಯೆ ಮುಂದುವರಿಸುವಂತೆ ಕೆಪಿಎಸ್ಸಿಗೆ ಸೂಚಿಸಿತ್ತು.

ಆದರೆ, ಹೈಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಹಿಂದಿನ ಅಧಿಸೂಚನೆ ರದ್ದುಪಡಿಸಿದ ಕೆಪಿಎಸ್‌ಸಿ ಹೊಸದಾಗಿ ಅಧಿಸೂಚನೆ ಹೊರಡಿಸಿ ನೇಮಕಾತಿ ಪ್ರಕ್ರಿಯೆ ಮುಂದುವರಿಸಿದೆ. ಹಿಂದಿನ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ರದ್ದುಪಡಿಸಿ ಎಂದು ಹೈಕೋರ್ಟ್ ಹೇಳಿಲ್ಲ. ಹೀಗಿದ್ದರೂ ತಾನೇ ಬಿಡುಗಡೆ ಮಾಡಿದ್ದ ಆಯ್ಕೆ ಪಟ್ಟಿಯನ್ನು ರದ್ದುಪಡಿಸಿರುವ ಕೆಪಿಎಸ್‌ಸಿ, ಹೊಸದಾಗಿ ಪಟ್ಟಿ ಬಿಡುಗಡೆ ಮಾಡಿದೆ. ಆ ಮೂಲಕ ನ್ಯಾಯಾಲಯದ ಆದೇಶವನ್ನು ಉಲ್ಲಂಸಿದೆ ಎಂದು ಆರೋಪಿಸಿ ಅರ್ಜಿದಾರರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.