Justice S Vishwajith Shetty and Karnataka High Court 
ಸುದ್ದಿಗಳು

ಜಾತಿ ಸಮೀಕ್ಷೆ ವರದಿ ಸರ್ಕಾರಕ್ಕೆ ಸಲ್ಲಿಕೆ ಕುರಿತಾದ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ವಿಶ್ವಜಿತ್‌ ಶೆಟ್ಟಿ

ಅರ್ಜಿಯಲ್ಲಿ ಪ್ರತಿವಾದಿಗಳಲ್ಲಿ ಒಬ್ಬರಾದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಹಾಲಿ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ತಮಗೆ ಪರಿಚಯ ಇರುವ ಕಾರಣ ತಾವು ಅರ್ಜಿ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದ ನ್ಯಾ. ಶೆಟ್ಟಿ.

Bar & Bench

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿರುವ ಜಾತಿ ಗಣತಿ (ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ) ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಆಯೋಗಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯಿಂದ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲಿದ್ದ ನ್ಯಾಯಮೂರ್ತಿಗಳ ಪೈಕಿ ಒಬ್ಬರಾದ ನ್ಯಾ. ಎಸ್ ವಿಶ್ವಜಿತ್ ಶೆಟ್ಟಿ ಅವರು ಮಂಗಳವಾರ ಹಿಂದೆ ಸರಿದ್ದಾರೆ.

ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಗೌರವಾಧ್ಯಕ್ಷರೂ ಆಗಿರುವ ಆಪ್‌ ಮುಖಂಡ ಹಾಗೂ ಚಿತ್ರನಟ ಡಾ. ಮುಖ್ಯಮಂತ್ರಿ ಚಂದ್ರು ಸೇರಿ 13 ವಿವಿಧ ಹಿಂದುಳಿದ ವರ್ಗಗಳ ಸಂಘ-ಸಂಸ್ಥೆಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿವೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರನ್ನು ಒಳಗೊಂಡ ವಿಭಾಗೀಯ ಪೀಠದ ಮುಂದೆ ಅರ್ಜಿ ವಿಚಾರಣೆಗೆ ನಿಗದಿಯಾಗಿತ್ತು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ನ್ಯಾ.ವಿಶ್ವಜಿತ್ ಶೆಟ್ಟಿ ಅವರು, ಅರ್ಜಿಯಲ್ಲಿ ಪ್ರತಿವಾದಿಗಳಲ್ಲಿ ಒಬ್ಬರಾದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಹಾಲಿ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ತಮಗೆ ಪರಿಚಯ ಇರುವ ಕಾರಣ ತಾವು ಅರ್ಜಿ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದರು.

ಇದನ್ನು ಪರಿಗಣಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರು, ನ್ಯಾ.ವಿಶ್ವಜಿತ್ ಶೆಟ್ಟಿ ಅವರು ಇರದ ವಿಭಾಗೀಯ ನ್ಯಾಯಪೀಠದ ಮುಂದೆ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿ, ಅರ್ಜಿ ವಿಚಾರಣೆ ಮುಂದೂಡಿದರು.