Karnataka High Court 
ಸುದ್ದಿಗಳು

ಅತ್ಯಾಚಾರ ವರದಿ ಮಾಡದ ಆರೋಪ: ಅಕ್ರಮವಾಗಿ ಬಂಧಿಸಲ್ಪಟ್ಟ ಹೋಮ್‌ಸ್ಟೇ ಮಾಲೀಕನಿಗೆ ₹5 ಲಕ್ಷ ಪರಿಹಾರಕ್ಕೆ ಆದೇಶ

ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಹೋಂ ಸ್ಟೇ ಮಾಲೀಕ ಪಿ ಪೊನ್ನಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಭಾಗಶಃ ಪುರಸ್ಕರಿಸಿದೆ.

Bar & Bench

ಕೊಡಗಿನ ಹೋಂ ಸ್ಟೇಯಲ್ಲಿಅಮೆರಿಕದ ಪ್ರವಾಸಿ ಮಹಿಳೆ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣ ಸಂಬಂಧ ಹೋಮ್‌ ಸ್ಟೇ ಮಾಲೀಕರನ್ನು ಅಕ್ರಮವಾಗಿ ಬಂಧಿಸಿದ್ದಕ್ಕಾಗಿ ಅವರಿಗೆ ₹5 ಲಕ್ಷ ಪರಿಹಾರ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್‌ ಬುಧವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಹೋಂ ಸ್ಟೇ ಮಾಲೀಕ ಪಿ ಪೊನ್ನಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಭಾಗಶಃ ಪುರಸ್ಕರಿಸಿದೆ.

ಆದರೆ, ಈ ಹಂತದಲ್ಲಿಅರ್ಜಿದಾರರ ವಿರುದ್ಧ ಎಫ್‌ಐಆರ್‌ ರದ್ದುಗೊಳಿಸಲು ನಿರಾಕರಿಸಿರುವ ನ್ಯಾಯಾಲಯವು ತನಿಖೆ ಮುಂದುವರಿಯುವುದು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟಿದೆ.

ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯವು “ಪ್ರಕರಣ ತನಿಖೆಯ ಹಂತದಲ್ಲಿರುವಾಗ ಹಸ್ತಕ್ಷೇಪದ ಅಗತ್ಯವಿಲ್ಲ. ಹೀಗಾಗಿ, ಅಪರಾಧ ಪ್ರಕರಣ ರದ್ದುಗೊಳಿಸುವ ಮನವಿ ಸ್ವೀಕಾರಾರ್ಹವಾಗಿದೆ. ಅರ್ಜಿದಾರರ ಬಂಧನವನ್ನು ಕಾನೂನುಬಾಹಿರ ಎಂದು ಘೋಷಿಸಲಾಗುತ್ತಿದೆ. ಅರ್ಜಿದಾರರು ಅಂತಹ ಅಕ್ರಮ ಬಂಧನಕ್ಕೆ ಪರಿಹಾರ ಪಡೆಯಲು ಅರ್ಹರಾಗುತ್ತಾರೆ. ಅರ್ಜಿಯನ್ನು ಭಾಗಶಃ ಪುರಸ್ಕರಿಸಲಾಗಿದ್ದು, ಅರ್ಜಿದಾರರು ₹5 ಲಕ್ಷ ಪರಿಹಾರಕ್ಕೆ ಅರ್ಹರಾಗಿದ್ದಾರೆ. ಆದೇಶದ ಪ್ರತಿಯನ್ನು ಸ್ವೀಕರಿಸಿದ ನಾಲ್ಕು ವಾರಗಳಲ್ಲಿ ರಾಜ್ಯ ಸರ್ಕಾರವು ಅರ್ಜಿದಾರರಿಗೆ ಪರಿಹಾರ ಪಾವತಿಸಬೇಕು’’ ಎಂದು ಆದೇಶ ನೀಡಿದೆ.

ಅರ್ಜಿದಾರರ ಪರ ವಕೀಲ ಅನಗದ್‌ ಕಾಮತ್‌ ಅವರು “ನಮ್ಮ ಕಕ್ಷಿದಾರರು ಯಾವುದೇ ಅತ್ಯಾಚಾರವೆಸಗಿಲ್ಲ ಮತ್ತು ಅವರ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ. ಎಫ್‌ಐಆರ್‌ನಲ್ಲಿಆರೋಪಿಸದಿದ್ದರೂ ನಂತರದ ಹಂತದಲ್ಲಿ ಸಾಮಾನ್ಯ ಉದ್ದೇಶ ಎಂಬ ಅಂಶವನ್ನು ಸೇರಿಸಿ ಬಂಧಿಸಲಾಗಿದೆ. ಅಲ್ಲದೇ, ಘಟನೆಯ ಸಮಯದಲ್ಲಿಅವರು ಹೋಂ ಸ್ಟೇನಲ್ಲಿರಲಿಲ್ಲಎಂಬುದಕ್ಕೆ ಸಿಸಿಟಿವಿ ದೃಶ್ಯಾವಳಿ ಒದಗಿಸಲಾಗುವುದು” ಎಂದು ತಿಳಿಸಿದ್ದರು.

ಅದಕ್ಕೆ ಆಕ್ಷೇಪಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಹೋಂ ಸ್ಟೇ ಮಾಲೀಕರು ಸಂತ್ರಸ್ತೆಯನ್ನು ಉದ್ದೇಶಪೂರ್ವಕವಾಗಿ ಹೆಚ್ಚು ದಿನಗಳ ಕಾಲ ಹೋಂ ಸ್ಟೇನಲ್ಲಿಉಳಿಯುವಂತೆ ಒತ್ತಾಯಿಸಿದ್ದರು ಮತ್ತು ಹೊರಗಿನವರೊಂದಿಗೆ ಸಂಪರ್ಕ ಸಾಧಿಸದಂತೆ ತಡೆ ಹಿಡಿದಿದ್ದರೆಂಬ ಆರೋಪವಿದೆ” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಏಪ್ರಿಲ್‌ 12ರಂದು ಹೋಂ ಸ್ಟೇಗೆ ಆಗಮಿಸಿದ ಸಂತ್ರಸ್ತೆಗೆ ಪಾನೀಯದಲ್ಲಿಅಮಲು ಪದಾರ್ಥ ಬೆರೆಸಿ, ಹೋಂ ಸ್ಟೇ ನೌಕರ ಅತ್ಯಾಚಾರ ಎಸಗಿದ್ದಾನೆ ಎಂದು ಪ್ರಕರಣ ದಾಖಲಾಗಿತ್ತು. ಆನಂತರ ಮಾಲೀಕರ ವಿರುದ್ಧ ಸೆಕ್ಷನ್‌ 64(1) (ಅತ್ಯಾಚಾರ), 351(2) (ಕ್ರಿಮಿನಲ್‌ ಬೆದರಿಕೆ), 238 ಮತ್ತು 239 ಬಿಎನ್‌ಎಸ್‌ (ಅಪರಾಧ ಮಾಡಲು ಯೋಜನೆ ಮರೆಮಾಚುವುದು ಮತ್ತು ಸುಳ್ಳು ಮಾಹಿತಿ ನೀಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆನಂತರ ಏಪ್ರಿಲ್‌ 19ರಂದು ಮಾಲೀಕರನ್ನು ಬಂಧಿಸಲಾಗಿತ್ತು. ಅದನ್ನು ಪ್ರಶ್ನಿಸಿದ್ದ ಹೋಂ ಸ್ಟೇ ಮಾಲೀಕರು ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಗೊಳಿಸುವಂತೆ ಮತ್ತು ತಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡಿ, ಅಕ್ರಮವಾಗಿ ಬಂಧಿಸಿರುವುದಕ್ಕೆ ₹15 ಲಕ್ಷ ಪರಿಹಾರ ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದರು.