Ricky Rai & Karnataka HC 
ಸುದ್ದಿಗಳು

ಲ್ಯಾಂಬೊರ್ಗಿನಿ ಕಾರಿಗೆ ನಕಲಿ ಫ್ಯಾನ್ಸಿ ನಂಬರ್‌ ಪ್ಲೇಟ್‌ : ರಿಕ್ಕಿ ರೈ ವಿರುದ್ಧ ಆತುರದ ಕ್ರಮ ಬೇಡ ಎಂದ ಹೈಕೋರ್ಟ್‌

ಸಾರಿಗೆ ಪ್ರಾಧಿಕಾರವು ಫ್ಯಾನ್ಸಿ ನಂಬರ್‌ ನೀಡಿರುವುದು ‍& ಅದಕ್ಕೆ ರಿಕ್ಕಿ ₹4 ಲಕ್ಷ ಪಾವತಿಸಿವ ಸಂಬಂಧ ದಾಖಲೆ ಇದೆ. ಹೀಗಾಗಿ, ನಕಲಿ ಫ್ಯಾನ್ಸಿ ನಂಬರ್‌ ಪ್ಲೇಟ್‌ ಹಾಕಲಾಗಿದೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದ ಹಿರಿಯ ವಕೀಲೆ ಲಕ್ಷ್ಮಿ.

Bar & Bench

ಐಷಾರಾಮಿ ಲ್ಯಾಂಬೊರ್ಗಿನಿ ಹುರಕಾನ್‌ ಕಾರಿಗೆ ನಕಲಿ ಫ್ಯಾನ್ಸಿ ನಂಬರ್‌ ಪ್ಲೇಟ್‌ ಅಳವಡಿಸಿದ ಸಂಬಂಧ ದಾಖಲಾಗಿರುವ ಪ್ರಕರಣದಲ್ಲಿ ಮಾಜಿ ಡಾನ್‌ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿರುದ್ದ ಆತುರ ಕ್ರಮಕೈಗೊಳ್ಳದಂತೆ ಈಚೆಗೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ಬೆಂಗಳೂರಿನ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ದಾಖಲಾಗಿರುವ ದೂರು ಮತ್ತು ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ರಿಕ್ಕಿ ರೈ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ರಿಕ್ಕಿ ರೈ ಪ್ರತಿನಿಧಿಸಿದ್ದ ಹಿರಿಯ ವಕೀಲೆ ಲಕ್ಷ್ಮಿ ಐಯ್ಯಂಗಾರ್‌ ಅವರು “ಸಾರಿಗೆ ಪ್ರಾಧಿಕಾರವು ಫ್ಯಾನ್ಸಿ ನಂಬರ್‌ ನೀಡಿರುವುದು ಮತ್ತು ಅದಕ್ಕೆ ರಿಕ್ಕಿ ಹಣ ಪಾವತಿಸಿರುವುದಕ್ಕೆ ಸಂಬಂಧಿಸಿದಂತೆ ದಾಖಲೆ ಇದೆ. ಹೀಗಾಗಿ, ನಕಲಿ ಫ್ಯಾನ್ಸಿ ನಂಬರ್‌ ಪ್ಲೇಟ್‌ ಹಾಕಲಾಗಿದೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಫ್ಯಾನ್ಸಿ ನಂಬರ್‌ಗೆ ರಿಕ್ಕಿ ರೈ ನಾಲ್ಕು ಲಕ್ಷ ರೂಪಾಯಿ ಪಾವತಿಸಿದ್ದಾರೆ. ಅರ್ಜಿದಾರರಿಗೆ ಅನ್ವಯಿಸಿರುವ ಸೆಕ್ಷನ್‌ಗಳು ಊರ್ಜಿತವಾಗಲ್ಲ” ಎಂದರು.

ಮುಂದುವರಿದು, “ರಸ್ತೆಯಲ್ಲಿ ಲ್ಯಾಂಬೊರ್ಗಿನಿ ಸದ್ದು ಮಾಡಿ ಹೋಗುತ್ತಿರುವಾಗ ಕಿರಿಕಿರಿಗೆ ಒಳಗಾದ ವ್ಯಕ್ತಿಯೊಬ್ಬರು ವಿಡಿಯೊ ರೆಕಾರ್ಡ್‌ ಮಾಡಿದ್ದಾರೆ. ಮೋಟಾರ್‌ ವಾಹನ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ಹೋಗಿ ಅವರು ದಂಡ ಕಟ್ಟಲಿದ್ದಾರೆ. ಹೀಗಿರುವಾಗ ಎರಡನೇ ಎಫ್‌ಐಆರ್‌ ದಾಖಲಿಸುವ ಅವಶ್ಯಕತೆ ಏನಿತ್ತು” ಎಂದರು.

ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಪ್ರಶ್ನಾರ್ಹವಾದ ಫ್ಯಾನ್ಸಿ ನಂಬರ್‌ ಅನ್ನು ರಿಕ್ಕಿ ಖರೀದಿಸಿರುವ ವಾಹನಕ್ಕೆ ಅಧಿಕೃತವಾಗಿ ಹಂಚಿಕೆ ಮಾಡಲಾಗಿಲ್ಲ. ದೆಹಲಿಯಲ್ಲಿ ವಾಹನ ಖರೀದಿಸಿದ ಬಳಿಕ ಪುನಾ ನೋಂದಣಿ ಪ್ರಕ್ರಿಯೆಯನ್ನು ರಿಕ್ಕಿ ಬೆಂಗಳೂರಿನಲ್ಲಿ ಮಾಡಿಲ್ಲ. ಇಂಥ ನಂಬರ್‌ ಪ್ಲೇಟ್‌ಗಳ ಬಳಕೆಯು ವಂಚನೆ ಮತ್ತು ದಾಖಲೆ ತಿರುಚಿದ ಆರೋಪದ ಪ್ರಕರಣವಾಗುತ್ತದೆ” ಎಂದರು.

ಉಭಯ ಪಕ್ಷಕಾರರ ವಾದ ಆಲಿಸಿದ ಪೀಠವು “ರಿಕ್ಕಿ ರೈ ತನಿಖೆಗೆ ಸಹಕರಿಸಬೇಕು ಎಂಬ ಷರತ್ತಿಗೆ ಒಳಪಟ್ಟು ತನಿಖೆಯ ನೆಪದಲ್ಲಿ ಪೊಲೀಸರು ರಿಕ್ಕಿ ರೈ ವಿರುದ್ಧ ಆತುರದ ಕ್ರಮಕೈಗೊಳ್ಳಬಾರದು” ಎಂದು ಆದೇಶಿಸಿದೆ. ಅಲ್ಲದೇ, ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ್ದು, ತನಿಖಾ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನಿರ್ದೇಶಿಸಿ, ವಿಚಾರಣೆ ಮುಂದೂಡಿದೆ.

ಬೆಂಗಳೂರಿನ ಅನೀಲ್‌ ಕುಂಬ್ಳೆ ವೃತ್ತದ ಬಳಿ ಮಾರ್ಚ್‌ 21, 2026ರ ಮಧ್ಯರಾತ್ರಿ 2.40ರ ವೇಳೆಗೆ KA-05 NR 0009 ಲ್ಯಾಂಬೊರ್ಗಿನಿ ಕಾರನ್ನು ಶರವೇಗದಲ್ಲಿ ಓಡಿಸಿದ್ದ ವಿಡಿಯೊವನ್ನು ವ್ಯಕ್ತಿಯೊಬ್ಬರು ನಗರ ಪೊಲೀಸರಿಗೆ ಟ್ಯಾಗ್‌ ಮಾಡಿದ್ದರು. ಇದರ ಅನ್ವಯ ಕಬ್ಬನ್‌ ಪಾರ್ಕ್‌ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾಹನವನ್ನು ಜಫ್ತಿ ಮಾಡಲಾಗಿತ್ತು. ಆನಂತರ ತನಿಖೆ ಆರಂಭಿಸಿದ್ದ ಪೊಲೀಸರು ಆರ್‌ಟಿಒ ಕಚೇರಿಯಲ್ಲಿ ವಾಹನದ ಸಂಖ್ಯೆಯ ಪೂರ್ವಾಪರ ವಿಚಾರಿಸಿದ್ದರು. ಈ ಸಂಖ್ಯೆಯನ್ನು ಯಾರಿಗೂ ಹಂಚಿಕೆ ಮಾಡಲಾಗಿಲ್ಲ ಎಂಬ ಉತ್ತರವನ್ನು ಆರ್‌ಟಿಒ ಅಧಿಕಾರಿಗಳು ನೀಡಿದ್ದರು.

ಈ ನಡುವೆ, ರಿಕ್ಕಿ ರೈ ಅವರು ದೆಹಲಿಯ ವ್ಯಕ್ತಿಯೊಬ್ಬರಿಂದ ಖರೀದಿಸಿದ್ದು, ಇಲ್ಲಿನ ಕಾನೂನಿನ ಅನ್ವಯ ಅದರ ಮರು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಲಿಲ್ಲ. ಇದಕ್ಕೆ ಬದಲಾಗಿ ನಕಲಿ ನಂಬರ್‌ ಪ್ಲೇಟ್‌ ಹಾಕಿಕೊಂಡಿದ್ದರು.

ಈ ಆಧಾರದ ಹಿನ್ನೆಲೆಯಲ್ಲಿ ಕಬ್ಬನ್‌ ಪಾರ್ಕ್‌ ಸಂಚಾರ ಠಾಣೆ ಪೊಲೀಸರು ರಿಕ್ಕಿ ರೈ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ಗಳಾದ 318(4) (ವಂಚನೆ), 340(2) (ನಕಲಿ ದಾಖಲೆ ತಿರುಚಿ ಅಸಲಿ ಎಂದು ಬಿಂಬಿಸುವುದು) ಮತ್ತು 341ರ (ನಕಲಿ ದಾಖಲೆ ಸೃಷ್ಟಿಸಲು ಸಾಧನ ಸಂಗ್ರಹ) ಅಡಿ ಪ್ರಕರಣ ದಾಖಲಿಸಿದ್ದಾರೆ.