Karnataka High Court with lawyers  
ಸುದ್ದಿಗಳು

ಗೌನ್‌ ಧರಿಸದೇ ನ್ಯಾಯಾಲಯದ ಮುಂದೆ ಬರಲು ನಿಮಗೆ ಎಷ್ಟು ಧೈರ್ಯ: ಯುವ ವಕೀಲೆಯನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌

“ವಕೀಲರ ಪರಿಷತ್‌ನಲ್ಲಿ ನೋಂದಣಿಯಾಗಿ ಮೂರು-ನಾಲ್ಕು ವರ್ಷವಾಗಿದೆ. ಆದರೂ ಇದೇ ಚೇಷ್ಟೆ” ಎಂದು ನ್ಯಾಯಾಲಯ ಕಿಡಿಕಾರಿತು.

Bar & Bench

ಗೌನ್‌ ಧರಿಸದೇ ನ್ಯಾಯಾಲಯದ ಮುಂದೆ ಕಿರಿಯ ವಕೀಲೆಯೊಬ್ಬರನ್ನು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ಮಂಗಳವಾರ ತರಾಟೆಗೆ ತೆಗೆದುಕೊಂಡರು.

ತಮ್ಮ ಕಕ್ಷಿದಾರರೊಬ್ಬರಿಗೆ ನಿರೀಕ್ಷಣಾ ಜಾಮೀನು ಕೋರಿರುವ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ನ್ಯಾ. ಶ್ರೀಶಾನಂದ ಅವರ ಪೀಠದ ಮುಂದೆ ಮೆಮೊ ಸಲ್ಲಿಸಲು ಕಿರಿಯ ವಕೀಲೆ ಮುಂದಾದರು.

Justice V Srishananda

ಈ ಹಂತದಲ್ಲಿ ಪೀಠವು ಗೌನ್‌ ಧರಿಸಿದಿರುವುದನ್ನು ಉಲ್ಲೇಖಿಸಿ “ನಿಮ್ಮ ಗೌನ್‌ ಎಲ್ಲಿ? ಅದೇ ಇಲ್ಲ? ಗೌನ್‌ ಇಲ್ಲದೇ ನ್ಯಾಯಾಲಯದ ಮುಂದೆ ಬರಲು ನಿಮಗೆ ಎಷ್ಟು ಧೈರ್ಯ?” ಎಂದು ಕಿಡಿಕಾರಿತು.

ಮುಂದುವರಿದು ಪೀಠವು “ನಿಮ್ಮ ಹಿರಿಯ ವಕೀಲರು ಯಾರು? (ಮೆಮೊ) ಈಸ್ಕೊಂಡು ರಿಜೆಕ್ಟ್‌ ಮಾಡಿ ಅದನ್ನು. ಏನು ನಿಮ್ಮ ಕತೆ? ಗೌನ್‌ ಇಲ್ಲದೇ ನ್ಯಾಯಾಲಯದ ಮುಂದೆ ಬರಲು ಎಷ್ಟು ಧೈರ್ಯ ನಿಮಗೆ? ಕೋರ್ಟ್‌ ಅಂದರೆ ತಮಾಷೆ ಎಂದು ಕೊಂಡಿದ್ದೀರಾ? ಏನು ಕ್ಷಮೆ, ನಿಮ್ಮ ಗೌನ್‌ ಎಲ್ಲಿ? ಆಫೀಸಿನಲ್ಲೇ ಬಿಟ್ಟು ಬಂದ್ರಾ?” ಎಂದು ಕಿಡಿಕಾರಿತು.

ಕೊನೆಗೆ “ಯಾವ ನೋಂದಣಿಯಾಗಿದ್ದೀರಿ. ಮೂರು-ನಾಲ್ಕು ವರ್ಷವಾಗಿದೆ. ಆದರೂ ಇದೇ ಚೇಷ್ಟೆ. ಅವರ ಹೆಸರು ತೆಗೆದುಕೊಂಡು, ಅವರ ನೋಂದಣಿ ರದ್ದು ಮಾಡಲು ವಕೀಲರ ಪರಿಷತ್‌ಗೆ ಹೇಳಿ” ಎಂದು ಕೋರ್ಟ್‌ ಅಧಿಕಾರಿಯನ್ನು ಕುರಿತು ಹೇಳಿತು. ಕೊನೆಗೆ ವಕೀಲೆಯು ಬೇಷರತ್‌ ಕ್ಷಮೆ ಕೋರಿದ್ದನ್ನು ಪರಿಗಣಿಸಿ ಪೀಠವು ಅವರ ತುರ್ತು ವಿಚಾರಣೆಗೆ ಕೋರಿದ್ದ ಮೆಮೊವನ್ನು ಆಧರಿಸಿ ಅರ್ಜಿಯ ವಿಚಾರಣೆಯನ್ನು ಮೇ 7ಕ್ಕೆ ನಿಗದಿಪಡಿಸಲು ನಿರ್ದೇಶಿಸಿತು.