Yediyurappa and Karnataka HC
Yediyurappa and Karnataka HC 
ಸುದ್ದಿಗಳು

ನೀತಿ ಸಂಹಿತೆ ಉಲ್ಲಂಘನೆ: ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್ ಹೇಳಿದ್ದೇನು?

Bar & Bench

2019ರ ಗೋಕಾಕ್ ಉಪಚುನಾವಣೆ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಪರ ಪ್ರಚಾರ ನಡೆಸಿದ ವೇಳೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ದಾಖಲಿಸಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠ ಇತ್ತೀಚೆಗೆ ರದ್ದುಪಡಿಸಿದೆ.

‘ವೀರಶೈವ ಲಿಂಗಾಯತ ಸಮುದಾಯದ ಮತದಾರರು ಒಮ್ಮತದಿಂದ ಮತ ಚಲಾಯಿಸಬೇಕು, ವಿಭಜನೆ ಆಗಬಾರದು’ ಎಂದು ಯಡಿಯೂರಪ್ಪ ಭಾಷಣ ಮಾಡಿದ್ದರು. ಇದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಫ್ಲೈಯಿಂಗ್ ಸ್ಕ್ವಾಡ್ ಆಗಿದ್ದ ಲಕ್ಷ್ಮಣ್ ಅಲ್ಲಾಪುರ ದೂರು ನೀಡಿದ್ದರು. ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ತೀರ್ಪು ನೀಡಿದೆ.

ಈ ವೇಳೆ ನ್ಯಾಯಾಲಯದಿಂದ ವ್ಯಕ್ತವಾದ ಪ್ರಮುಖ ಅಂಶಗಳು ಹೀಗಿವೆ:

  • ಯಾವುದೇ ಆಕ್ಷೇಪ ಇಲ್ಲದೆ ಮತ್ತು ದೂರುದಾರರ ಗಮನಕ್ಕೆ ತರದೆ ನ್ಯಾಯಾಲಯ ಬಿ ವರದಿ ತಿರಸ್ಕರಿಸಬಾರದು.

  • ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 202(1)ರ ಅಡಿ ನ್ಯಾಯಾಲಯದ ವ್ಯಾಪ್ತಿಗೆ ಬರದ ಆರೋಪಿಯಯ ವಿರುದ್ಧ ಏಕೆ ಪ್ರಕರಣದ ಸಂಬಂಧ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎನ್ನುವುದನ್ನು ಮ್ಯಾಜಿಸ್ಟ್ರೇಟ್ ಆದೇಶದ ಮೂಲಕ ತಿಳಿಸಬೇಕು.

  • ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 123ರ ಅಡಿಯಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ವಿರುದ್ಧ ಮಾತ್ರ ಪ್ರಕರಣ ದಾಖಲಿಸಬಹುದು.

  • 1951ರ ಜನಪ್ರತಿನಿಧಿ ಕಾಯ್ದೆಯ 123ನೇ ಸೆಕ್ಷನ್ ಪ್ರಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬುದು ಅಭ್ಯರ್ಥಿಗೆ ಮಾತ್ರ ಸಮೀತವಾಗಿದ್ದು ಆಗ ಅನರ್ಹತೆ ಅಥವಾ ಫಲಿತಾಂಶ ತಡೆಹಿಡಿಯಲು ಆದೇಶಿಸಬಹುದು.

  • ಈ ಪ್ರಕರಣದಲ್ಲಿ ಕ್ರಿಮಿನಲ್ ಕಾನೂನು ಕ್ರಮ ಜರುಗಿಸಲು ಸಾಧ್ಯವಿಲ್ಲ. ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ದ್ವೇಷ ಅಥವಾ ವೈಷಮ್ಯದ ಮಾತುಗಳನ್ನಾಡಿರಬೇಕು. ಪ್ರಕರಣದಲ್ಲಿ ಹೀಗಾಗಿಲ್ಲ.

    ಐಪಿಸಿ ಸೆಕ್ಷನ್ 171ಸಿಯಲ್ಲಿ ವಿವರಿಸಿರುವಂತೆ ನೆರೆದಿದ್ದ ಜನರನ್ನು ಅನವಶ್ಯಕವಾಗಿ ಪ್ರಭಾವಿಸುವ ಕೆಲಸ ನಡೆದಿಲ್ಲ

  • ಮ್ಯಾಜಿಸ್ಟ್ರೇಟ್ ತನಿಖೆಯ ಹಂತದಲ್ಲಿ ಸೆಕ್ಷನ್ 65- ಬಿ ಪ್ರಮಾಣಪತ್ರದ ಅವಶ್ಯಕತೆ ಇರುವುದಿಲ್ಲ. ಮ್ಯಾಜಿಸ್ಟ್ರೇಟ್ ಸದಾ ಯಾವುದೇ ಎಲೆಕ್ಟ್ರಾನಿಕ್ ಪುರಾವೆಗಳನ್ನು ಪರಿಶೀಲಿಸಬಹುದು.

ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕಾಕ್ ಪೊಲೀಸರು ಸಲ್ಲಿಸಿದ್ದ ಬಿ ವರದಿ ತಿರಸ್ಕರಿಸಿದ್ದ ಜೆಎಂಎಫ್ ಸಿ ಕೋರ್ಟ್ ಸಂಜ್ಞೇಯ ಅಪರಾಧ ಎಂದು ಪರಿಗಣಿಸಿ ಸ್ವಯಂಪ್ರೇರಿತವಾಗಿ ಯಡಿಯೂರಪ್ಪನವರಿಗೆ ಸಮನ್ಸ್ ನೀಡಿತ್ತು. ಇದನ್ನು ಪ್ರಶ್ನಿಸಿ ಯಡಿಯೂರಪ್ಪ ಹೈಕೋರ್ಟ್ ಮೊರೆ ಹೋಗಿದ್ದರು. ಯಡಿಯೂರಪ್ಪ ಪರವಾಗಿ ಹಿರಿಯ ವಕೀಲ ಸಿ. ವಿ. ನಾಗೇಶ್ ವಾದ ಮಂಡಿಸಿದ್ದರು.