ಹಸುಗಳ ಕಳವು ಆರೋಪಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳ ಬಳಿಕ ನಾಲ್ವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದ ಪೊಲೀಸರ ನಡೆಯನ್ನು ತೀವ್ರವಾಗಿ ಖಂಡಿಸಿರುವ ಕರ್ನಾಟಕ ಹೈಕೋರ್ಟ್, ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ದುರುಪಯೋಗಕ್ಕೆ ಇದೊಂದು ಸ್ಪಷ್ಟ ಉದಾಹರಣೆಯಾಗಿದೆ ಎಂದು ಕಿಡಿಕಾರಿದೆ. ಇದೇ ವೇಳೆ, ಆರೋಪಿಗಳ ವಿರುದ್ಧದ ಎಫ್‌ಐಆರ್ ರದ್ದುಪಡಿಸಿ ಆದೇಶಿಸಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ (ರಾಮನಗರ) ಚನ್ನಪಟ್ಟಣ ತಾಲ್ಲೂಕಿನ ಎಂ ಕೆ ದೊಡ್ಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ತೌಟನಹಳ್ಳಿಯ ಮಂಗಳಮ್ಮ, ಚೇತನ್, ಚಂದನ್ ಹಾಗೂ ಸೌಮ್ಯಾ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಮಂಗಳವಾರ ಪುರಸ್ಕರಿಸಿದೆ.
ಪ್ರಕರಣದ ತನಿಖೆ ಮುಂದುವರಿಸಲು ಅನುಮತಿಸಿದರೆ ಊಹಾತ್ಮಕ ಆರೋಪಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ. ದೂರಿನಲ್ಲಿ ಹೆಣೆಯಲಾಗಿರುವ 24 ತಿಂಗಳ ಹಿಂದೆ ಮೇಯಲು ಹೋದ ಹಸು ಮನೆಗೆ ಹಿಂದಿರುಗದ ಕಥೆಗೆ ಮನ್ನಣೆ ನೀಡಿದಂತಾಗುತ್ತದೆ. 2024ರ ಆಗಸ್ಟ್ 18ರಂದು ಮೇಯಲು ಹೋಗಿದ್ದ ಹಸುಗಳು ಮನೆಗೆ ಹಿಂದಿರುಗಿಲ್ಲ ಎಂಬ ಕಾರಣಕ್ಕೆ 24 ತಿಂಗಳ ನಂತರ ದೂರು ದಾಖಲಿಸಲಾಗಿದೆ. ಇದು ದೂರುದಾರರಿಂದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ದುರುಪಯೋಗ ಹಾಗೂ ಅಂತಹ ದುರುಪಯೋಗಕ್ಕೆ ಪೊಲೀಸರು ಬೆಂಬಲ ನೀಡಿರುವುದಕ್ಕೆ ಒಂದು ಸ್ಪಷ್ಟ ಉದಾಹರಣೆಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ಪೀಠವು ಅರ್ಜಿದಾರರ ವಿರುದ್ಧದ ಎಫ್‌ಐಆರ್ ರದ್ದುಪಡಿಸಿತು.
ಇದೇ ವೇಳೆ, ದೂರುದಾರರು ಸಿವಿಲ್ ನ್ಯಾಯಾಲಯದಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂದು ಮೌಖಿಕವಾಗಿ ನುಡಿದ ಪೀಠವು ಪೊಲೀಸ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ದೂರುದಾರರಿಗೆ ದಂಡ ವಿಧಿಸಬಹುದಾಗಿದ್ದರೂ, ಆ ನಿರ್ಧಾರದಿಂದ ನ್ಯಾಯಾಲಯ ಹಿಂದೆ ಸರಿದಿದೆ ಎಂದು ಹೇಳಿತು.
ಹಸುಗಳು ಕಳವಾಗಿವೆ ಎಂದು ಎರಡು ವರ್ಷಗಳ ಬಳಿಕ ದೂರು ದಾಖಲಿಸಲಾಗಿದೆ. ಅತಿಯಾದ ವಿಳಂಬದ ಹೊರತಾಗಿಯೂ ಹಸುಗಳು ಯಾವಾಗ ನಾಪತ್ತೆಯಾಗಿವೆ, ಆ ಹಸುಗಳು ದೂರುದಾರರಿಗೇ ಸೇರಿದ್ದವೇ ಎಂಬ ಬಗ್ಗೆ ಪ್ರಾಥಮಿಕ ವಿಚಾರಣೆ ನಡೆಸದೆಯೇ ಪೊಲೀಸರು ಪ್ರಕರಣ ದಾಖಲಿಸಿ, ಅರ್ಜಿದಾರರಿಗೆ ನೋಟಿಸ್ ನೀಡುವುದು ಆಘಾತಕಾರಿ ಸಂಗತಿಯಾಗಿದೆ. ಹಸುಗಳು ನಿನ್ನೆ-ಮೊನ್ನೆ ನಾಪತ್ತೆಯಾಗಿಲ್ಲ, 24 ತಿಂಗಳ ಹಿಂದೆ ಕಳವಾಗಿವೆ ಎನ್ನಲಾದ ಹಸುಗಳ ಬಗ್ಗೆ ದಾಖಲಾದ ದೂರಿನ ಸಂಬಂಧ ಪೊಲೀಸರು ಸಕಾರಣವಿಲ್ಲದೆ ಕಳ್ಳತನದ ಆರೋಪದಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳುತ್ತಾರೆ. ಎಫ್‌ಐಆರ್ ದಾಖಲಾದ ತಕ್ಷಣ, ಎರಡು ವರ್ಷಗಳ ಹಿಂದೆ ಹಸು ಕದ್ದ ಆರೋಪದ ಮೇಲೆ ಪೊಲೀಸ್ ವ್ಯವಸ್ಥೆ ಕಾರ್ಯಾಚರಣೆಗೆ ಇಳಿಯುತ್ತದೆ ಎಂದು ಪೊಲೀಸರ ಕಾರ್ಯವೈಖರಿಯನ್ನು ನ್ಯಾಯಾಲಯ ಟೀಕಿಸಿದೆ.
ಪೋಲಿಸರ ನಡವಳಿಕೆಗೆ ಆಘಾತ ವ್ಯಕ್ತಪಡಿಸಿದ ಪೀಠವು ಯಾರಾದ್ದಾದರೂ ಕೊಲೆ ಸಂಭವಿಸಿದಾಗ ಪೊಲೀಸರು "ಸ್ವಲ್ಪ ಇರಿ, ನಾವು ಹಸುಗಳನ್ನು ಹುಡುಕುತ್ತಿದ್ದೇವೆ" ಎಂದು ಹೇಳುವಂತಿದೆ. ನಾಪತ್ತೆಯಾದ ಪ್ರಾಣಿಗಳನ್ನು ಹುಡುಕಬಾರದು ಎನ್ನುತ್ತಿಲ್ಲ. ಆದರೆ, ಹಸುಗಳು ನಾಪತ್ತೆಯಾಗಿ ಎರಡು ವರ್ಷಗಳ ಬಳಿಕ ದೂರು ದಾಖಲಿಸಿಕೊಳ್ಳುವುದನ್ನು ಒಪ್ಪಲಾಗದು ಎಂದು ಮೌಖಿಕವಾಗಿ ಹೇಳಿತು.
ಪ್ರಕರಣದ ಹಿನ್ನೆಲೆ: ಪ್ರಸಾದ್ ಎಂಬುವರು 2026ರ ಮಾರ್ಚ್ 26ರಂದು ಎಂ ಕೆ ದೊಡ್ಡಿ ಪೊಲೀಸರಿಗೆ ದೂರು ನೀಡಿ, 2024ರ ಆಗಸ್ಟ್ 18ರಂದು ಮಧ್ಯಾಹ್ನ ನನ್ನ ಎರಡು ಸೀಮೆ ಹಸುಗಳನ್ನು ಮೇಯಲು ಕಟ್ಟಿ ಹಾಕಿ ಮನೆಗೆ ಊಟಕ್ಕೆ ಹೋಗಿದ್ದು, ಆನಂತರ ಬಂದು ನೋಡಿದಾಗ ಅವು ಇರಲಿಲ್ಲ. ಈ ಸಂಬಂಧ ಅಕ್ಕಪಕ್ಕದವರಿಗೆ ವಿಚಾರ ತಿಳಿಸಲಾಗಿತ್ತು. 2026ರ ಮಾರ್ಚ್ 25ರಂದು ತೌಟನಹಳ್ಳಿಯ ದಲ್ಲಾಳಿ ಶೇಖರನಿಗೆ ಈ ವಿಚಾರ ತಿಳಿಸಿದ್ದು, ಆತ ತಾನೇ ಆ ಹಸುಗಳನ್ನು ಮಾರಾಟ ಮಾಡಿಸಿದ್ದಾಗಿ ತಿಳಿಸಿದ್ದನು. ಈ ಹಸುಗಳನ್ನು ಮಂಗಳಮ್ಮ, ಚೇತನ್, ಚಂದನ್ ಮತ್ತು ಸೌಮ್ಯಾ ಎಂಬವರು ಮಾರಿಸಿಕೊಡುವಂತೆ ಕೋರಿದ್ದರು. ಒಂದು ಸಾವಿರ ರೂಪಾಯಿ ಕಮಿಷನ್ ಪಡೆದು ಮೈಲನಾಯಕನ ಹೊಸಹಳ್ಳಿಯ ಹರೀಶನಿಗೆ ಮಾರಾಟ ಮಾಡಿಸಿದ್ದಾಗಿ ತಿಳಿಸಿದ್ದನು ಎಂದು ದೂರಿನಲ್ಲಿ ಆರೋಪಿಸಿದ್ದರು. ಇದನ್ನು ಆಧರಿಸಿ ಪೋಲಿಸರು ಅರ್ಜಿದಾರರ ವಿರುದ್ಧ ಬಿಎನ್‌ಎಸ್ ಸೆಕ್ಷನ್ 302(2)ರ ಅಡಿ ಕಳವು ಪ್ರಕರಣ ದಾಖಲಿಸಿದ್ದರು.