<div class="paragraphs"><p>Minister Rajeev Chandrashekgar and Karnataka HC</p></div>

Minister Rajeev Chandrashekgar and Karnataka HC

 
ಸುದ್ದಿಗಳು

ವಕೀಲರು, ಪೊಲೀಸರ ನಡುವಿನ ಗಲಭೆ ಪ್ರಕರಣ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

Bar & Bench

ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ ಆವರಣದಲ್ಲಿ 2012ರಲ್ಲಿ ನಡೆದಿದ್ದ ವಕೀಲರು ಹಾಗೂ ಪೊಲೀಸರ ನಡುವಿನ ಗಲಭೆ ಪ್ರಕರಣದ ಸಂಬಂಧ ಕೇಂದ್ರ ಕೌಶಲ ಮತ್ತು ಔದ್ಯಮಿಕ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಹೂಡಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಗೊಳಿಸಿದೆ.

ಸಚಿವ ರಾಜೀವ್‌ ಚಂದ್ರಶೇಖರ್ ಸಲ್ಲಿಸಿದ್ದ ಕ್ರಿಮಿನಲ್ ಮನವಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಅಧೀನ ನ್ಯಾಯಾಲಯದ ಪ್ರಕ್ರಿಯೆಯನ್ನು ರದ್ದುಪಡಿಸಿದೆ.

ಅರ್ಜಿದಾರರಾದ ರಾಜೀವ್‌ ಚಂದ್ರಶೇಖರ್‌ ಅವರು ಆ ಸಂದರ್ಭದಲ್ಲಿ ಸುವರ್ಣ 24/7 ಸುದ್ದಿ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕಾರಣಕ್ಕೆ ಅವರ ಕಂಪೆನಿ ಮತ್ತು ಸಿಬ್ಬಂದಿ ಮಾಡಿದ ಕೃತ್ಯಗಳಿಗೆ ಅವರು ಹೊಣೆಗಾರರಾಗುವುದಿಲ್ಲ. ಹಾಗಾಗಿ ಪ್ರಕರಣದಲ್ಲಿ ಅವರನ್ನು ದೋಷಿಯನ್ನಾಗಿ ಮಾಡುವುದು ಸರಿಯಲ್ಲ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಅರ್ಜಿದಾರರು ಪ್ರತಿನಿಧಿಸುವ ಸಂಸ್ಥೆ ಹೆಸರಿಸದೇ ಅವರನ್ನು ಮಾತ್ರ ಆರೋಪಿಯನ್ನಾಗಿ ಮಾಡಿರುವುದು ಕಾನೂನು ಬಾಹಿರ ಕ್ರಮವಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಭಾರತೀಯ ದಂಡ ಸಂಹಿತೆಯಡಿ ಹೊಣೆಗಾರಿಕೆ ಹೊರಿಸಲಾಗದು ಎಂದು ನ್ಯಾಯಾಲಯ ಹೇಳಿದೆ.

2012ರ ಮಾರ್ಚ್‌ 2ರಂದು ಖ್ಯಾತನಾಮರೊಬ್ಬರನ್ನು ಬೆಂಗಳೂರಿನ ಕ್ರಿಮಿನಲ್‌ ನ್ಯಾಯಾಲಯದಲ್ಲಿ ಹಾಜರುಪಡಿಸಲು ಕರೆತರಲಾಗುತ್ತಿತ್ತು. ಈ ಸಂದರ್ಭದಲ್ಲಿ ಕಿಡಿಗೇಡಿಗಳು ದೊಂಬಿ ಸೃಷ್ಟಿಸಿದ್ದರು. ಇದನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿತ್ತು. ಅದರಲ್ಲೂ ರಾಜೀವ್‌ ಚಂದ್ರಶೇಖರ್‌ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸುವರ್ಣ ಸುದ್ದಿ ವಾಹಿನಿಯಲ್ಲಿ ಬ್ರೇಕಿಂಗ್‌ ನ್ಯೂಸ್‌ನಲ್ಲಿ ದೊಂಬಿಗೆ ವಕೀಲರು ಕಾರಣ. ವಕೀಲರನ್ನು ಗೂಂಡಾ, ಪೋಕರಿಗಳು ಎಂದು ಸಂಬೋಧಿಸಲಾಗಿತ್ತು. ಅಲ್ಲದೇ, ವಕೀಲರನ್ನು ರೌಡಿಗಳು ಎಂಬ ರೀತಿಯಲ್ಲಿ ಬಿಂಬಿಸಿ ಕಾರ್ಯಕ್ರಮ ಪ್ರಸಾರ ಮಾಡಲಾಗಿತ್ತು.

ಈ ಪ್ರಕರಣವನ್ನು ಆಧರಿಸಿ ಕೆ ಕೋಟೇಶ್ಚರ ರಾವ್‌ ಎಂಬವರು ಬಳ್ಳಾರಿ ಸಕ್ಷಮ ನ್ಯಾಯಾಲಯದಲ್ಲಿ ಸಿಆರ್‌ಪಿಸಿ ಸೆಕ್ಷನ್‌ 200ರ ಅಡಿ ಮಾನನಷ್ಟ ದಾವೆ ಹೂಡಿದ್ದರು. ಇದರ ಅನ್ವಯ 2012ರ ಮಾರ್ಚ್‌ 15ರಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 499 ಮತ್ತು 500ರ ಅಡಿ ರಾಜೀವ್‌ ಚಂದ್ರಶೇಖರ್‌ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನು ರದ್ದುಪಡಿಸಬೇಕು ಎಂದು ಕೋರಿ ರಾಜೀವ್‌ ಚಂದ್ರಶೇಖರ್‌ ಅವರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

Rajeev Chandrashekhar versus K Koteswar Rao.pdf
Preview