Yash, IT Dept & Karnataka HC 
ಸುದ್ದಿಗಳು

ನಟ ಯಶ್‌ಗೆ ಆದಾಯ ತೆರಿಗೆ ಇಲಾಖೆ ಜಾರಿ ಮಾಡಿದ್ದ ನೋಟಿಸ್‌ ರದ್ದುಪಡಿಸಿದ ಹೈಕೋರ್ಟ್‌

ಐಟಿ ಕಾಯಿದೆಯ ಸೆಕ್ಷನ್‌ 153ಸಿ ಅಡಿಯಲ್ಲಿ ಆರು ವರ್ಷಗಳ ಅವಧಿಯ ಆದಾಯ ತೆರಿಗೆ ಮೌಲ್ಯಮಾಪನ ಸಂಬಂಧ ನೀಡಲಾಗಿದ್ದ ನೋಟಿಸ್‌ಗಳನ್ನು ಪ್ರಶ್ನಿಸಿ ಯಶ್‌ ಅರ್ಜಿ ಸಲ್ಲಿಸಿದ್ದರು.

Bar & Bench

ಚಿತ್ರ ನಟ ಯಶ್ ಅವರ ಬೆಂಗಳೂರಿನ ನಿವಾಸದಲ್ಲಿ ಆದಾಯ ತೆರಿಗೆ (ಐಟಿ) ಇಲಾಖೆಯು ಶೋಧ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಂಡಿರುವುದರಿಂದ ಆದಾಯ ತೆರಿಗೆ ಕಾಯಿದೆ ಅಡಿಯಲ್ಲಿ ಅವರು 'ಶೋಧಿಸಲ್ಪಟ್ಟ ವ್ಯಕ್ತಿ' ಆಗುತ್ತಾರೆ ಎಂದಿರುವ ಕರ್ನಾಟಕ  ಹೈಕೋರ್ಟ್, ಯಶ್‌ ಅವರಿಗೆ ಐಟಿ ಇಲಾಖೆ ನೀಡಿದ್ದ ನೋಟಿಸ್‌ಗಳನ್ನು ಈಚೆಗೆ ರದ್ದುಪಡಿಸಿದೆ.

ಐಟಿ ಕಾಯಿದೆಯ ಸೆಕ್ಷನ್‌ 153ಸಿ ಅಡಿಯಲ್ಲಿ ಆರು ವರ್ಷಗಳ ಅವಧಿಯ ಆದಾಯ ತೆರಿಗೆ ಮೌಲ್ಯಮಾಪನ ಸಂಬಂಧ ನೀಡಲಾಗಿದ್ದ ನೋಟಿಸ್‌ಗಳನ್ನು ಪ್ರಶ್ನಿಸಿ ಯಶ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣಕುಮಾರ್‌ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

Justice S R Krishna Kumar

ಯಶ್ ಅವರಿಗೆ ಐಟಿ ಕಾಯಿದೆಯ ಸೆಕ್ಷನ್‌ 153ಸಿ ಅಡಿಯಲ್ಲಿ ನೀಡಲಾಗಿದ್ದ ಆದಾಯ ತೆರಿಗೆ ನೋಟಿಸ್‌ಗಳು ಕಾನೂನುಬದ್ಧವಾಗಿ ಸಮರ್ಥನೀಯವಲ್ಲ. ನೋಟಿಸ್‌ಗಳನ್ನು ನೀಡುವಾಗ ಕಾರ್ಯವಿಧಾನದ ಉಲ್ಲಂಘನೆಯಾಗಿದೆ. ಆದ್ದರಿಂದ, ನೋಟಿಸ್‌ಗಳು ಊರ್ಜಿತವಾಗುವುದಿಲ್ಲ ಎಂದು ಹೇಳಿರುವ ನ್ಯಾಯಪೀಠ, 2013-14ರಿಂದ 2018-19ರವರೆಗಿನ 6 ವರ್ಷಗಳ ಅವಧಿಯ ಆದಾಯದ ವಿವರಗಳನ್ನು ನೀಡುವಂತೆ ಸೆಕ್ಷನ್‌ 153 ಸಿ ಅಡಿಯಲ್ಲಿ ಜಾರಿಗೊಳಿಸಲಾಗಿದ್ದ ಎಲ್ಲ ನೋಟಿಸ್‌ಗಳನ್ನು ರದ್ದುಪಡಿಸಲಾಗುತ್ತಿದೆ ಎಂದು ಆದೇಶದಲ್ಲಿ ಹೇಳಿದೆ.

ಯಶ್‌ ನಿವಾಸದಲ್ಲಿ ಶೋಧ ನಡೆಸಿ ದಾಖಲೆಗಳನ್ನು ಸಂಗ್ರಹಿಸಲಾಗಿರುವುದರಿಂದ ಅವರು ಶೋಧನೆಗೊಳಪಟ್ಟ ವ್ಯಕ್ತಿ ಆಗಲಿದ್ದಾರೆ. ಆದ್ದರಿಂದ, ಇಲಾಖೆಯು ಅವರಿಗೆ ಸೆಕ್ಷನ್‌ 153ಸಿ ಅಡಿಯಲ್ಲಿ ನೋಟಿಸ್‌ ನೀಡಿ, ಅದರಡಿ ಪ್ರಕ್ರಿಯೆ ಮುಂದುವರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: ಹೊಂಬಾಳೆ ಕನ್ಸ್ಟ್ರಕ್ಷನ್ಸ್‌ಗೆ ಸಂಬಂಧಿಸಿದ ತನಿಖೆಗಳಿಗೆ ಸಂಬಂಧಿಸಿದಂತೆ ಐಟಿ ಇಲಾಖೆ ಶೋಧ ನಡೆಸಿದ ನಂತರ ವಿವಾದ ಆರಂಭವಾಗಿತ್ತು. ಈ ವಿಚಾರಣೆಯ ಭಾಗವಾಗಿ ಆದಾಯ ತೆರಿಗೆ ಅಧಿಕಾರಿಗಳು ಹೊಸಕೆರೆಹಳ್ಳಿಯಲ್ಲಿರುವ ಯಶ್‌ ಅವರ ನಿವಾಸ ಮತ್ತು ತಾಜ್‌ ವೆಸ್ಟ್‌ ಎಂಡ್‌ನಲ್ಲಿ ಯಶ್‌ ಬಾಡಿಗೆಗೆ ಪಡೆದಿದ್ದ ಕೊಠಡಿಯನ್ನು ಶೋಧಿಸಿದ್ದರು. 2021ರ ಶೋಧದ ನಂತರ, ಅಧಿಕಾರಿಗಳು ಹಿಂದಿನ 6 ವರ್ಷಗಳ ಆದಾಯದ ಮಾಹಿತಿ ನೀಡುವಂತೆ ನಟನಿಗೆ ನೋಟಿಸ್‌ಗಳನ್ನು ನೀಡಿದ್ದರು. 2019ರ ಡಿಸೆಂಬರ್ 12ರ ನೋಟಿಸ್‌ ಮತ್ತು ನಂತರ 2021ರಲ್ಲಿ ನೀಡಲಾಗಿದ್ದ ನೋಟಿಸ್‌ಗಳನ್ನು ರದ್ದು ಕೋರಿ ಯಶ್‌ ಹೈಕೋರ್ಟ್ ಮೆಟ್ಟಿಲೇರಿದ್ದರು.

ಯಶ್ ಪರ ವಕೀಲರಾದ ಎ ಮಹೇಶ್‌ ಚೌಧರಿ ಮತ್ತು ಕ್ರಿಷಿಕಾ ವೈಷ್ಣವ್‌ ಅವರು “ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಯಶ್ ಅವರನ್ನು 'ಶೋಧನೆಗೆ ಒಳಪಡದ ವ್ಯಕ್ತಿ' ಎಂದು ತಪ್ಪಾಗಿ ವರ್ಗೀಕರಿಸಿದ್ದಾರೆ. ಅವರ ಮನೆ ಮತ್ತು ಹೋಟೆಲ್‌ನ ಅವರ ಕೋಣೆಯನ್ನು ಶೋಧ ನಡೆಸಿದ್ದ ಅಧಿಕಾರಿಗಳು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಶೋಧದ ಸಮಯದಲ್ಲಿ ಒಂದು ಮಹಜರು ಮಾಡಲಾಗಿದೆ. ಇದು ಅವರು ನಿಜವಾಗಿಯೂ ಶೋಧಿಸಲ್ಪಟ್ಟ ವ್ಯಕ್ತಿ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಆದರೂ, ಯಶ್‌ ಅವರನ್ನು ಶೋಧಿಸಲ್ಪಡದ ವ್ಯಕ್ತಿಗಳಿಗೆ ಉದ್ದೇಶಿಸಲಾದ ಸೆಕ್ಷನ್‌ 153 ಸಿ ಅಡಿಯಲ್ಲಿ ನೋಟಿಸ್‌ ನೀಡಿರುವುದು ಕಾನೂನುಬಾಹಿರ ಕ್ರಮವಾಗಿದೆ” ಎಂದು ವಾದಿಸಿದ್ದರು.

Yash Vs Deputy Commissioner of Income Tax.pdf
Preview