ಇಲಾಖಾ ಬಡ್ತಿ ಸಮಿತಿ (ಡಿಪಿಸಿ) ಬಡ್ತಿಗೆ ಪರಿಗಣಿಸಿದ ದಿನಾಂಕದಿಂದಲೇ ಬಡ್ತಿಯ ಪ್ರಯೋಜನ ನೀಡಬೇಕು ಎಂದು ಕೋರಿ ಏಳು ಸರ್ಕಾರಿ ನೌಕರರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಪುರಸ್ಕರಿಸಿದೆ. ಈ ಸಂಬಂಧ ಅರ್ಜಿದಾರರ ಮನವಿ ತಿರಸ್ಕರಿಸಿದ್ದ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿಯ (ಕೆಎಟಿ) ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿದೆ.
ಮುಂಡರಗಿ ತಹಶೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕ ಎಂ ಎ ನದಾಫ್ ಸೇರಿದಂತೆ ಏಳು ಸರ್ಕಾರಿ ನೌಕರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಂ ನಾಗಪ್ರಸನ್ನ ಮತ್ತು ಹೇಮಾ ಕುಲಕರ್ಣಿ ಅವರ ವಿಭಾಗೀಯ ಪೀಠ ಪುರಸ್ಕರಿಸಿದೆ.
“ಒಬ್ಬ ಸರ್ಕಾರಿ ನೌಕರನನ್ನು ಉನ್ನತ ಹುದ್ದೆಯನ್ನು ನಿರ್ವಹಿಸಲು ಸೂಕ್ತ ವ್ಯಕ್ತಿ ಎಂದು ಪರಿಗಣಿಸಿ, ವರ್ಷಗಟ್ಟಲೆ ಆ ಹುದ್ದೆಯ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಆತನಿಂದ ನಿರ್ವಹಿಸುವಂತೆ ಮಾಡುವುದು; ನಂತರ, ಅಂತಹ ಹುದ್ದೆಗೆ ಅಧಿಕೃತವಾಗಿ ಬಡ್ತಿ ನೀಡುವ ಸಂದರ್ಭದಲ್ಲಿ, ಆತ ಆ ಜವಾಬ್ದಾರಿಗಳನ್ನು ವಹಿಸಿಕೊಂಡ ದಿನಾಂಕದಿಂದಲೇ ಬಡ್ತಿಯ ಪ್ರಯೋಜನ ನೀಡಲು ನಿರಾಕರಿಸುವುದು ಸಂಪೂರ್ಣ ಅನ್ಯಾಯದ ಕ್ರಮ” ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅರ್ಜಿದಾರರು ಕೆಸಿಎಸ್ಆರ್ ನಿಯಮ 32ರ ಅಡಿ ಉನ್ನತ ಹುದ್ದೆಯ ಸ್ವತಂತ್ರ ಪ್ರಭಾರ ವಹಿಸಿಕೊಂಡ ದಿನಾಂಕದಿಂದಲೇ ಬಡ್ತಿಯ ಪ್ರಯೋಜನ ನೀಡಬೇಕು ಎಂದು ಕೋರಿದ್ದರು. ಆದರೆ, ಅವರು ಸ್ವತಂತ್ರ ಪ್ರಭಾರ ವಹಿಸಿಕೊಳ್ಳುವುದಕ್ಕಿಂತ ಹಿಂದಿನ ಅವಧಿಗೆ ಬಡ್ತಿ ಕೋರಿದ್ದಾರೆ ಎಂದು ತಪ್ಪಾಗಿ ಅರ್ಥೈಸಿದ್ದ ಕೆಎಟಿ, ಅವರ ಅರ್ಜಿಯನ್ನು ತಿರಸ್ಕರಿಸಿತ್ತು.
ಹುದ್ದೆಗಳು ಖಾಲಿ ಇಲ್ಲದಿದ್ದಾಗ ಕಾಯಂ ಬಡ್ತಿ ನೀಡದಿರುವುದು ನಿಯಮಬದ್ಧ ಕ್ರಮವಾಗಿದ್ದು, ಕೆಸಿಎಸ್ಆರ್ ನಿಯಮ 32ರ ಹಿನ್ನೆಲೆಯಲ್ಲಿ ಅರ್ಜಿಯನ್ನು ವಜಾಗೊಳಿಸಬೇಕು ಎಂಬ ರಾಜ್ಯ ಸರ್ಕಾರದ ವಾದವನ್ನು ಹೈಕೋರ್ಟ್ ಒಪ್ಪಲಿಲ್ಲ.
ಕೆಸಿಎಸ್ಆರ್ ನಿಯಮ 32 ಮತ್ತು ನಿಯಮ 68ರ ನಡುವಿನ ವ್ಯತ್ಯಾಸವನ್ನು ವಿವರಿಸಿದ ನ್ಯಾಯಾಲಯ, ಈ ಎರಡೂ ನಿಯಮಗಳು ವಿಭಿನ್ನ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಸ್ಪಷ್ಟಪಡಿಸಿದೆ.
“ನಿಯಮ 68 ಸಾಮಾನ್ಯವಾಗಿ ಆಡಳಿತಾತ್ಮಕ ಅಗತ್ಯಗಳಿಂದ ಉಂಟಾಗುವ ಹೆಚ್ಚುವರಿ ಸಂಭಾವನೆ ಪಾವತಿಸುವುದನ್ನು ನಿಯಂತ್ರಿಸುತ್ತದೆ. ಇಂತಹ ವ್ಯವಸ್ಥೆಗೆ ಡಿಪಿಸಿ ಕರೆಯುವ ಅಥವಾ ಸರ್ಕಾರಿ ನೌಕರನ ಅರ್ಹತೆ ಮತ್ತು ಸೂಕ್ತತೆಯನ್ನು ಮೌಲ್ಯಮಾಪನ ಮಾಡುವ ಅಗತ್ಯವಿರುವುದಿಲ್ಲ” ಎಂದು ಪೀಠ ಹೇಳಿದೆ.
ನಿಯಮ 32ರ ಅಡಿ ಸ್ವತಂತ್ರ ಪ್ರಭಾರ ವಹಿಸುವ ವ್ಯವಸ್ಥೆ ಮತ್ತು ನಿಯಮ 68ರ ಅಡಿ ಹೆಚ್ಚುವರಿ ಸಂಭಾವನೆ ಪಾವತಿಸುವ ವ್ಯವಸ್ಥೆಯನ್ನು ಒಂದೇ ರೀತಿಯಲ್ಲಿ ಪರಿಗಣಿಸಬಾರದು ಎಂದು ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಕಿವಿಮಾತು ಹೇಳಿದೆ.
“ಬಡ್ತಿ ಪಡೆಯಬೇಕೆಂಬ ನೌಕರನ ಆಕಾಂಕ್ಷೆ ಯಾವಾಗಲೂ ಹೆಚ್ಚಿನ ವೇತನದ ಆಕರ್ಷಣೆಯಿಂದಲೇ ಪ್ರೇರಿತವಾಗಿರುವುದಿಲ್ಲ. ನಿರ್ದಿಷ್ಟ ಹುದ್ದೆಯನ್ನು ಅಲಂಕರಿಸುವುದರ ಜೊತೆಗೆ ದೊರೆಯುವ ಗೌರವ ಮತ್ತು ಮನ್ನಣೆಗಾಗಿ ಆತ ಅದನ್ನು ಬಯಸುತ್ತಾನೆ” ಎಂದು ಪೀಠ ಹೇಳಿದೆ.
ಡಿಪಿಸಿಯಿಂದ ಬಡ್ತಿಗೆ ಅರ್ಹರು ಎಂದು ಮೌಲ್ಯಮಾಪನಗೊಂಡು, ನಂತರ ಕೆಸಿಎಸ್ಆರ್ ನಿಯಮ 32ರ ಅಡಿ ಬಡ್ತಿ ಹುದ್ದೆಯ ಸ್ವತಂತ್ರ ಪ್ರಭಾರ ವಹಿಸಿಕೊಂಡ ನೌಕರನು, ಶಾಸನಬದ್ಧ ಷರತ್ತುಗಳಿಗೆ ಒಳಪಟ್ಟು, ಸ್ವತಂತ್ರ ಪ್ರಭಾರ ವಹಿಸಿಕೊಂಡ ದಿನಾಂಕದಿಂದಲೇ ತನ್ನ ಕಾಯಂ ಬಡ್ತಿಯನ್ನು ಪರಿಗಣಿಸುವಂತೆ ಕೋರಲು ಅರ್ಹನಾಗಿರುತ್ತಾನೆ ಎಂದು ನ್ಯಾಯಾಲಯ ವಿವರಿಸಿದೆ.
“ಸೇವಾ ನ್ಯಾಯಶಾಸ್ತ್ರದ ವ್ಯಾಪ್ತಿಯಲ್ಲಿ ಬಡ್ತಿ ಎಂಬುದು ಕೇವಲ ವೇತನ ಶ್ರೇಣಿಯಲ್ಲಿನ ಏರಿಕೆಯಲ್ಲ. ಅದು ಸರ್ಕಾರಿ ನೌಕರನ ಅರ್ಹತೆ, ಸ್ಥಾನಮಾನ ಮತ್ತು ಘನತೆಗೆ ನೀಡುವ ಮನ್ನಣೆಯೂ ಹೌದು” ಎಂದು ಪೀಠ ವಿಶ್ಲೇಷಿಸಿದೆ.
ಬೆಳಗಾವಿಯ ಕೆಎಟಿ 2024ರ ಮಾರ್ಚ್ 14ರಂದು ನೀಡಿದ್ದ ಆದೇಶ ಪ್ರಶ್ನಿಸಿ ಎಂ ಎ ನದಾಫ್, ಗದಗ ತಹಶೀಲ್ದಾರ್ ಕಚೇರಿಯ ಕಂದಾಯ ನಿರೀಕ್ಷಕ ಸಿ ಎಸ್ ಮಠದ, ಗಜೇಂದ್ರಗಡ ತಹಶೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕ ಜಿ ಎಂ ಕೊಡಕೇರಿ, ಲಕ್ಷ್ಮೇಶ್ವರ ತಹಶೀಲ್ದಾರ್ ಕಚೇರಿಯ ಕಂದಾಯ ನಿರೀಕ್ಷಕ ಬಿ ಎಂ ಕಾತ್ರಾಳ, ಗದಗ ತಹಶೀಲ್ದಾರ್ ಕಚೇರಿಯ ಕಂದಾಯ ನಿರೀಕ್ಷಕ ಎಂ ಎಸ್ ಹಿರೇಮಠ, ಲಕ್ಷ್ಮೇಶ್ವರದ ನಿವೃತ್ತ ಪ್ರಥಮ ದರ್ಜೆ ಸಹಾಯಕಿ ರೇಣುಕಾ ಎ ವಾಲೀಕರ ಮತ್ತು ಗದಗದ ನಿವೃತ್ತ ಕಂದಾಯ ನಿರೀಕ್ಷಕ ಎಸ್ ಐ ಹದಕಾರ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರ ಪರ ವಕೀಲ ಸುನಿಲ್ ಎಸ್ ದೇಸಾಯಿ ವಾದ ಮಂಡಿಸಿದ್ದರು.