Karnataka High Court 
ಸುದ್ದಿಗಳು

ಐಎಎಸ್‌ ಅಧಿಕಾರಿ ಕಪಿಲ್‌ ಮೋಹನ್‌ ವಿರುದ್ಧದ ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿಯ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

“ಅಪರಾಧಕ್ಕೆ ಸಂಬಂಧಿಸಿದಂತೆ ಕಪಿಲ್‌ ಮೋಹನ್ ಅವರ‌ ವಿರುದ್ಧ ಯಾವುದೇ ಪ್ರಕರಣ ಬಾಕಿ ಉಳಿದಿಲ್ಲ. ಹೀಗಾಗಿ, ಅರ್ಜಿದಾರರ ಮನವಿ ಪುರಸ್ಕರಿಸಲಾಗಿದೆ. ಅವರ ವಿರುದ್ಧದ ಪ್ರಕರಣ ಮತ್ತು ಸಮನ್ಸ್‌ ವಜಾ ಮಾಡಲಾಗಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.

Bar & Bench

ಕರ್ನಾಟಕದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್‌ ಮೋಹನ್‌ ಅವರ ವಿರುದ್ಧ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ದಾಖಲಿಸಿದ್ದ ಪ್ರಕರಣ ಮತ್ತು ಆ ಸಂಬಂಧ ಜಾರಿ ಮಾಡಿದ್ದ ಸಮನ್ಸ್‌ ಅನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ರದ್ದುಪಡಿಸಿದೆ.

ಪಿಎಂಎಲ್‌ಎ ಸೆಕ್ಷನ್‌ 50ರ ಅಡಿ 2023ರ ಫೆಬ್ರವರಿ 2ರಂದು ಜಾರಿ ನಿರ್ದೇಶನಾಲಯ ಜಾರಿ ಮಾಡಿರುವ ಸಮನ್ಸ್‌ ವಜಾ ಮಾಡುವಂತೆ ಕೋರಿ ಕಪಿಲ್‌ ಮೋಹನ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ.

“ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿದ ಬಳಿಕ ಸಲ್ಲಿಸಿದ್ದ ಬಿ ಅಂತಿಮ ವರದಿಯನ್ನು ವಿಚಾರಣಾಧೀನ ನ್ಯಾಯಾಲಯ ಒಪ್ಪಿಕೊಂಡಿದೆ. ಹೀಗಾಗಿ, ಬಿ ಅಂತಿಮ ವರದಿಗೆ ಸಂಬಂಧಿಸಿದ ಆದೇಶ ತಾರ್ಕಿಕ ಅಂತ್ಯ ಕಂಡಿದೆ. ಇದೇ ನ್ಯಾಯಾಲಯವು ಇದಾಗಲೇ ಎರಡನೇ ಆರೋಪಿ ಅರ್ಜಿಯನ್ನು ಪುರಸ್ಕರಿಸಿ ಅವರ ವಿರುದ್ಧದ ಪ್ರಕ್ರಿಯೆಯನ್ನು ರದ್ದುಪಡಿಸಿದೆ. ಈ ಹಿನ್ನೆಲೆಯಲ್ಲಿ ತಮ್ಮ ಮನವಿಯನ್ನು ಪುರಸ್ಕರಿಸಲು ಅರ್ಜಿದಾರರು ಕೋರಿದ್ದಾರೆ” ಎಂದು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿದೆ. ಈ ಪ್ರಕರಣದಲ್ಲಿ ಕಪಿಲ್‌ ಮೋಹನ್‌ ಅವರು ಮೊದಲ ಆರೋಪಿಯಾಗಿದ್ದಾರೆ.

“ಪ್ರಸ್ತುತ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು 'ಬಿ' ಅಂತಿಮ ವರದಿಯನ್ನು ಒಪ್ಪಿಕೊಂಡಿದೆ. ಆ ಮೂಲಕ ಬಿ ಅಂತಿಮ ವರದಿಯನ್ನು ಒಪ್ಪಿಕೊಂಡಿರುವ ಆದೇಶವು ತನ್ನ ತಾರ್ಕಿಕ ಅಂತ್ಯವನ್ನು ಕಂಡಿದೆ. ಹಾಗಾಗಿ ಇಂದಿಗೆ ವಿಸ್ತೃತ ಅಪರಾಧಕ್ಕೆ (ಪ್ರೆಡಿಕೇಟ್‌ ಅಫೆನ್ಸ್‌) ಸಂಬಂಧಿಸಿದಂತೆ ಕಪಿಲ್‌ ಮೋಹನ್‌ ವಿರುದ್ಧ ಯಾವುದೇ ಪ್ರಕರಣ ಬಾಕಿ ಉಳಿದಿಲ್ಲ. ಹೀಗಾಗಿ, ಅರ್ಜಿದಾರರ ಮನವಿಯನ್ನು ಪುರಸ್ಕರಿಸಲಾಗಿದೆ. ಅವರ ವಿರುದ್ಧದ ಪ್ರಕರಣ ಮತ್ತು ಸಮನ್ಸ್‌ ವಜಾ ಮಾಡಲಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ವಕೀಲ ಮಧುಕರ್‌ ದೇಶಪಾಂಡೆ ಅವರು “ವಿಸ್ತೃತ ಅಪರಾಧದಲ್ಲಿ ಆರೋಪಿಗಳು ಭಾಗವಹಿಸಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ಸಕ್ಷಮ ನ್ಯಾಯಾಲಯವು ನಿರ್ಧರಿಸಿಲ್ಲ. ತನಿಖಾಧಿಕಾರಿ ಬಿ ಅಂತಿಮ ವರದಿ ಸಲ್ಲಿಸಿದ್ದಾರೆ ಎಂದ ಮಾತ್ರಕ್ಕೆ ವ್ಯಾಪ್ತಿ ಹೊಂದಿದ ನ್ಯಾಯಾಲಯ ನಿರ್ಧಾರ ಮಾಡಿದೆ ಎಂದಲ್ಲ” ಎಂದು ಆಕ್ಷೇಪಿಸಿದ್ದರು.

ಅರ್ಜಿದಾರರ ಪರವಾಗಿ ವಕೀಲ ನಿಶಾಂತ್‌ ಕುಮಾರ್‌ ಶೆಟ್ಟಿ ವಾದಿಸಿದ್ದರು.

Kapil Mohan Vs ED.pdf
Preview