Karnataka HC and POCSO
Karnataka HC and POCSO 
ಸುದ್ದಿಗಳು

ಬಿಷಪ್‌ ವಿರುದ್ಧದ ಪೋಕ್ಸೊ ಪ್ರಕರಣ ವಜಾ ಮಾಡಿದ ಕರ್ನಾಟಕ ಹೈಕೋರ್ಟ್‌

Bar & Bench

ಸೌತ್‌ ಇಂಡಿಯಾ ಕರ್ನಾಟಕ ಸೆಂಟ್ರಲ್‌ ಡಿಯೋಸಿಸ್‌ ಬಿಷಪ್‌ ರೆವರೆಂಡ್‌ ಪ್ರಸನ್ನಕುಮಾರ್ ಸ್ಯಾಮ್ಯುಯೆಲ್‌ ವಿರುದ್ಧ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ) ಅಡಿಯಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ರದ್ದುಪಡಿಸಿದೆ.

ಬೆಂಗಳೂರಿನ ರೆವರೆಂಡ್‌ ಪ್ರಸನ್ನಕುಮಾರ್ ಸ್ಯಾಮ್ಯುಯೆಲ್‌ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರಿದ್ದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

ಸಂತ್ರಸ್ತ ಬಾಲಕಿಯ ಹೇಳಿಕೆಯ ಆಧಾರದಲ್ಲಿ ಅರ್ಜಿದಾರರ ವಿರುದ್ಧ ದೋಷಾರೋಪ ನಿಗದಿಪಡಿಸಲು ಸೆಷನ್ಸ್‌ ನ್ಯಾಯಾಲಯ ಮುಂದಾಗಿರುವುದಕ್ಕೆ ಸಾಕ್ಷ್ಯಗಳ ಕೊರತೆಯಿದೆ. ಪ್ರಕರಣದಲ್ಲಿ ಪ್ರಸನ್ನಕುಮಾರ್ ಭಾಗಿಯಾಗಿಲ್ಲ ಎಂಬ ಅಭಿಪ್ರಾಯದೊಂದಿಗೆ ಪೀಠ ಅರ್ಜಿದಾರರ ವಿರುದ್ಧದ ಪ್ರಕರಣ ಕೈಬಿಡುವಂತೆ ಆದೇಶಿಸಿದೆ.

ಅರ್ಜಿದಾರರ ವಿರುದ್ಧ ವಿಚಾರಣೆ ನಡೆಸಲು 50ನೇ ಸಿಟಿ ಸಿವಿಲ್‌ ಕೋರ್ಟ್‌ 2017ರ ಡಿಸೆಂಬರ್ 12ರಂದು ಆದೇಶಿಸಿ ಸಮನ್ಸ್‌ ಜಾರಿಗೊಳಿಸಲು ಆದೇಶಿಸಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

ಅರ್ಜಿದಾರರು ಹಾಗೂ ಇತರೆ ನಾಲ್ವರ ವಿರುದ್ಧ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಐಪಿಸಿ 504, 506, 354, 34 ಪೋಕ್ಸೊ ಕಾಯಿದೆಯ ಸೆಕ್ಷನ್‌ 8, 9(ಎಫ್‌) ಮತ್ತು 10ರ ಅಡಿ 2015ರ ಜನವರಿ 10ರಂದು ಪ್ರಕರಣ ದಾಖಲಿಸಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ಅರ್ಜಿದಾರರ ವಿರುದ್ಧ ತನಿಖೆ ನಡೆಸಲು ಯಾವುದೇ ದಾಖಲೆಗಳು ಇಲ್ಲ ಎಂದು ಹೇಳಿ, ಅವರನ್ನು ಕೈಬಿಟ್ಟು ಇತರೆ ನಾಲ್ವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು.