Justice M Nagaprasanna & Justice Hema Kulkarni 
ಸುದ್ದಿಗಳು

ಮುನ್ನೆಚ್ಚರಿಕಾ ಬಂಧನವನ್ನು ಜಾಮೀನು ರದ್ದುಗೊಳಿಸಲು ಪರ್ಯಾಯ ವ್ಯವಸ್ಥೆಯಾಗಿ ಬಳಸಕೂಡದು: ಹೈಕೋರ್ಟ್‌

ವ್ಯಕ್ತಿಯ ಸ್ವಾತಂತ್ರ್ಯ ಕಸಿದುಕೊಂಡ ಬಳಿಕ ಅಂತಹ ಹಕ್ಕಿನ ಕುರಿತು ತಿಳಿಸದಿದ್ದರೆ, ಅದು ಕಾಗದದಲ್ಲಿ ಮಾತ್ರ ಇರುವ ಹಕ್ಕಾಗುತ್ತದೆ ಎಂದಿರುವ ಹೈಕೋರ್ಟ್‌.

Bar & Bench

“ಮಾದಕ ವಸ್ತುಗಳ ಅಕ್ರಮ ಸಾಗಣೆ ತಡೆ ಕಾಯಿದೆಯಡಿ ಮುನ್ನೆಚ್ಚರಿಕೆ ಬಂಧನ ಆದೇಶ ರದ್ದು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬಹುದು ಎಂಬ ಹಕ್ಕಿನ ಕುರಿತು ಬಂಧಿತ ವ್ಯಕ್ತಿಗೆ ಮಾಹಿತಿ ನೀಡದಿರುವುದು ಸಂವಿಧಾನದ ವಿಧಿ 22(5)ರ ರಕ್ಷ ಣೆಯ ಉಲ್ಲಂಘನೆಯಾಗುತ್ತದೆ” ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಈಚೆಗೆ ಆದೇಶಿಸಿದೆ.

ಬಾಗಲಕೋಟೆಯ ರಾಜು ಕಾಳೆ ವಿರುದ್ಧ ಹೊರಡಿಸಲಾಗಿದ್ದ ಮುನ್ನೆಚ್ಚರಿಕೆ ಬಂಧನ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಮೂರ್ತಿಗಳಾದ ಎಂ ನಾಗಪ್ರಸನ್ನ ಮತ್ತು ಹೇಮಾ ಕುಲಕರ್ಣಿ ಅವರ ವಿಭಾಗೀಯ ಪೀಠವು ಮುನ್ನೆಚ್ಚರಿಕಾ ಬಂಧನವನ್ನು ಜಾಮೀನು ರದ್ದುಗೊಳಿಸಲು ಪರ್ಯಾಯ ವ್ಯವಸ್ಥೆಯಾಗಿ ಬಳಸಬಾರದು ಎಂದು ಸ್ಪಷ್ಟಪಡಿಸಿದೆ.

ರಾಜು ಕಾಳೆ ಅವರ ಪತ್ನಿ ಮಾಲಾ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ಆಲಿಸಿದ ಪೀಠ ಈ ಆದೇಶ ಹೊರಡಿಸಿದೆ.

“ಕಾಯಿದೆಯ ಅನುಸಾರ ಬಂಧನ ಆದೇಶ ರದ್ದುಗೊಳಿಸುವ ಅಧಿಕಾರವನ್ನು ಕಾನೂನು ಕೇಂದ್ರ ಸರ್ಕಾರಕ್ಕೆ ನೀಡಿರುವಾಗ, ಆ ಅಧಿಕಾರವನ್ನು ಬಳಸುವಂತೆ ಕೋರಿ ಮನವಿ ಸಲ್ಲಿಸಲು ಬಂಧಿತ ವ್ಯಕ್ತಿಗೆ ಪರಿಣಾಮಕಾರಿ ಅವಕಾಶ ನೀಡಬೇಕು. ವ್ಯಕ್ತಿಯ ಸ್ವಾತಂತ್ರ್ಯ ಕಸಿದುಕೊಂಡ ಬಳಿಕ ಅಂತಹ ಹಕ್ಕಿನ ಕುರಿತು ತಿಳಿಸದಿದ್ದರೆ, ಅದು ಕಾಗದದಲ್ಲಿ ಮಾತ್ರ ಇರುವ ಹಕ್ಕಾಗುತ್ತದೆ” ಎಂದು ಪೀಠ ಹೇಳಿದೆ.

“ಯಾರಿಗೆ ಮತ್ತು ಯಾವ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬಹುದು ಎಂಬುದನ್ನು ಬಂಧಿತ ವ್ಯಕ್ತಿಗೆ ಸ್ಪಷ್ಟವಾಗಿ ತಿಳಿಸಿದಾಗ ಮಾತ್ರ ಆ ಹಕ್ಕು ನೈಜ ಹಾಗೂ ಅರ್ಥಪೂರ್ಣವಾಗುತ್ತದೆ. ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವ ಹಕ್ಕಿನ ಕುರಿತು ತಿಳಿಸದಿರುವುದು ಕೇವಲ ನಿರ್ಲಕ್ಷಿಸಬಹುದಾದ ಲೋಪವಲ್ಲ. ಅದು ಸಂವಿಧಾನದ ವಿಧಿ 22(5)ರಡಿ ಕಲ್ಪಿಸಿರುವ ರಕ್ಷ ಣೆಯ ಮೂಲಕ್ಕೇ ಧಕ್ಕೆ ತರುತ್ತದೆ. ಮುನ್ನೆಚ್ಚರಿಕಾ ಬಂಧನವು ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ಗಂಭೀರ ನಿರ್ಬಂಧವಾಗಿದೆ” ಎಂದು ನ್ಯಾಯಾಲಯ ತಿಳಿಸಿದೆ.

“ರಾಜು ಅವರಿಗೆ ಎನ್‌ಡಿಪಿಎಸ್‌ ಕಾಯಿದೆಯ ಸೆಕ್ಷನ್‌ 37ರ ಕಠಿಣ ಷರತ್ತುಗಳನ್ನು ಪರಿಶೀಲಿಸಿದ ನಂತರವೇ ಜಾಮೀನು ನೀಡಲಾಗಿತ್ತು. ಜಾಮೀನು ಆದೇಶ ಇನ್ನೂ ಜಾರಿಯಲ್ಲಿದ್ದು, ಅದನ್ನು ರದ್ದುಗೊಳಿಸುವಂತೆ ಪ್ರಾಸಿಕ್ಯೂಷನ್‌ ಅರ್ಜಿ ಸಲ್ಲಿಸಿರಲಿಲ್ಲ. ಅವರು ಜಾಮೀನಿನ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಯಾವುದೇ ಸಕ್ಷಮ ನ್ಯಾಯಾಲಯ ದಾಖಲಿಸಿರಲಿಲ್ಲ” ಎಂದು ಪೀಠ  ಉಲ್ಲೇಖಿಸಿದೆ.

‘‘ಜಾಮೀನಿನ ಷರತ್ತುಗಳನ್ನು ರಾಜು ಉಲ್ಲಂಘಿಸಿದ್ದಾರೆಂದು ಪ್ರಾಸಿಕ್ಯೂಷನ್‌ ಭಾವಿಸಿದ್ದರೆ, ಸಕ್ಷ ಮ ನ್ಯಾಯಾಲಯದಲ್ಲಿಜಾಮೀನು ರದ್ದತಿಗೆ ಅರ್ಜಿ ಸಲ್ಲಿಸಬಹುದಿತ್ತು. ಅದನ್ನು ಬಿಟ್ಟು, ಇದೇ ರೀತಿಯ ಚಟುವಟಿಕೆ ಮರುಕಳಿಸಬಹುದೆಂಬ ಆತಂಕದ ಆಧಾರದಲ್ಲಿಮುನ್ನೆಚ್ಚರಿಕೆ ಬಂಧನದ ಮೊರೆ ಹೋಗುವುದು ಸರಿಯಲ್ಲ’’ ಎಂದು ನ್ಯಾಯಾಲಯ ಹೇಳಿದೆ.

ಅದರಂತೆ, ಹಲವು ಕಾನೂನು ದೋಷಗಳಿಂದ ಕೂಡಿದೆ ಎಂದು ರಾಜು ಕಾಳೆ ವಿರುದ್ಧದ ಬಂಧನ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್‌, ಬೇರೆ ಪ್ರಕರಣದಲ್ಲಿ ಬಂಧನ ಅಗತ್ಯವಿಲ್ಲದಿದ್ದರೆ ಅವರನ್ನು ತಕ್ಷ ಣ ಬಿಡುಗಡೆ ಮಾಡುವಂತೆ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ಅಕ್ರಮ ಸಾಗಣೆ ತಡೆ ಕಾಯಿದೆ 1988ರಡಿ 2026ರ ಜುಲೈ 3ರಂದು ರಾಜು ವಿರುದ್ಧ ಬಂಧನ ಆದೇಶ ಹೊರಡಿಸಲಾಗಿತ್ತು. ಅವರನ್ನು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿಇರಿಸಲಾಗಿತ್ತು. ರಾಜು ವಿರುದ್ಧ ದಾಖಲಾಗಿದ್ದ ಮೂರು ಕ್ರಿಮಿನಲ್‌ ಪ್ರಕರಣಗಳನ್ನು ಬಂಧನ ಪ್ರಾಧಿಕಾರ ಪರಿಗಣಿಸಿತ್ತು. ಅವರು ಪದೇಪದೇ ಅಪರಾಧ ಎಸಗುತ್ತಿದ್ದು, ಅವರ ಚಟುವಟಿಕೆಗಳು ಸಾರ್ವಜನಿಕರ, ವಿಶೇಷವಾಗಿ ಯುವಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ ಎಂದು ಆರೋಪಿಸಲಾಗಿತ್ತು. ಮೊದಲ ಪ್ರಕರಣದಲ್ಲಿ ರಾಜುಗೆ 5,000 ರೂಪಾಯಿ ದಂಡ ವಿಧಿಸಲಾಗಿತ್ತು. ಎರಡನೇ ಪ್ರಕರಣದಲ್ಲಿ ಜಾಮೀನು ಮಂಜೂರಾಗಿದ್ದು, ವಿಚಾರಣೆ ಬಾಕಿ ಇತ್ತು. 2026ರಲ್ಲಿ ವರದಿಯಾದ ಮತ್ತೊಂದು ಪ್ರಕರಣದಲ್ಲಿಅವರ ಪತ್ನಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದು, ರಾಜು ಅವರೇ ಗಾಂಜಾ ಪೂರೈಸಿ ಮಾರಾಟ ಮಾಡಿಸುತ್ತಿದ್ದರು ಎಂದು ಹೇಳಲಾಗಿತ್ತು.

Mala vs State of Karnataka.pdf
Preview