Karnataka High Court and doctor 
ಸುದ್ದಿಗಳು

[ವೈದ್ಯರ ವಿರುದ್ಧದ ಪ್ರಕರಣ ರದ್ದು] ವೈಯಕ್ತಿಕ ಪ್ರತೀಕಾರಕ್ಕೆ ಕಾನೂನು ಬಳಸಿಕೊಳ್ಳಕೂಡದರು: ಹೈಕೋರ್ಟ್‌

ಸಹಿ ಫೋರ್ಜರಿ ಹಾಗೂ ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಖಾಸಗಿ ಆಸ್ಪತ್ರೆಯ ನಿರ್ದೇಶಕ ಡಾ.ಎಸ್ ‌ಪಿ‌ ಸೋಮಶೇಖರ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌.

Bar & Bench

ತಮ್ಮ ಆಸ್ಪತ್ರೆಯಲ್ಲಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ ವೈದ್ಯನ ವಿರುದ್ಧ ಸುಳ್ಳು ದೂರು ದಾಖಲಿಸಿದ‌ ಖಾಸಗಿ ಆಸ್ಪತ್ರೆಯ ಮುಖ್ಯಸ್ಥರ ನಡೆಗೆ ಕಿಡಿಕಾರಿರುವ ಕರ್ನಾಟಕ ಹೈಕೋರ್ಟ್, ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಕಾನೂನನ್ನು ಬಳಸಿಕೊಳ್ಳಬಾರದು ಎಂದು ನುಡಿದಿದೆ.

ಸಹಿ ಫೋರ್ಜರಿ ಹಾಗೂ ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಖಾಸಗಿ ಆಸ್ಪತ್ರೆ ಮುಖ್ಯಸ್ಥ ಡಾ. ಬಿ ಸಿ ‌ಶಂಕರ್  ತಮ್ಮ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಕೋರಿ ಮತ್ತೊಂದು ಖಾಸಗಿ ಆಸ್ಪತ್ರೆಯ ನಿರ್ದೇಶಕ ಡಾ.ಎಸ್ ‌ಪಿ‌ ಸೋಮಶೇಖರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಪ್ರತೀಕಾರದ ಸಾಧನವಾಗಿ ಕ್ರಿಮಿನಲ್ ಕಾನೂನನ್ನು ಬಳಸಿಕೊಂಡಿರುವುದಕ್ಕೆ ಈ ಪ್ರಕರಣ ಅತ್ಯುತ್ತಮ ನಿದರ್ಶನ. ಅರ್ಜಿದಾರರ ವಿರುದ್ಧ ಹೊರಿಸಲಾದ ಆರೋಪಗಳು ಅಪರಾಧದ ಮಜಲುಗಳೇನು ಎಂಬುದನ್ನು ಬಹಿರಂಗಪಡಿಸಲು ವಿಫಲವಾಗಿವೆ. ನಿಷ್ಪ್ರಯೋಜಕ ದೂರು ನೀಡಿದಾಗ,  ವೈದ್ಯರಿಗೆ ತೀವ್ರ ಅನ್ಯಾಯವನ್ನು ಉಂಟುಮಾಡುತ್ತದೆ. ವೈದ್ಯಕೀಯ ಕರ್ತವ್ಯಗಳನ್ನು ನಿರ್ಭಯವಾಗಿ ನಿರ್ವಹಿಸುವುದರ ಮೇಲೂ ಭೀತಿಯ ಛಾಯೆಯನ್ನು ಮೂಡಿಸುತ್ತದೆ.‌ ಪ್ರಕರಣದಲ್ಲಿ ಪೊಲೀಸರು ಬಿ ರಿಪೋರ್ಟ್‌ ಸಲ್ಲಿಕೆಯಾಗಿದ್ದರೂ ಅದನ್ನು ತಿರಸ್ಕರಿಸಿದ  ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಕ್ರಮ ಸರಿಯಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯವು ಅರ್ಜಿದಾರರ ವಿರುದ್ಧ ಪ್ರಕರಣ ರದ್ದುಪಡಿಸಿದೆ.

ಅರ್ಜಿದಾರರರಾದ ಡಾ.ಸೋಮಶೇಖರ್‌ 2003ರಲ್ಲಿ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇರಿದ್ದರು. 2022ರಲ್ಲಿ ಮತ್ತೊಂದು ಖಾಸಗಿ ಆಸ್ಪತ್ರೆಯ ಸೇರಿಕೊಂಡಿದ್ದರು. ನಂತರ ಶಂಕರ್ ಅವರು ಪೊಲೀಸರಿಗೆ ದೂರು ನೀಡಿ, ಸೋಮಶೇಖರ್ ಅವರು ನನ್ಮ ಸಹಿ ಫೋರ್ಜರಿ ಮಾಡಿ ನಮ್ಮ ಆಸ್ಪತ್ರೆ ಹೆಸರಿನಲ್ಲಿ ನಕಲಿ ಅನುಭವ ಪ್ರಮಾಣ ಪತ್ರವು ‌ಸೃಷ್ಟಿಸಿಕೊಂಡಿದ್ದಾರೆ ಎಂದು ಆರೋಪಿಸಿ 2022ರ ಡಿಸೆಂಬರ್‌ 10ರಂದು ದೂರು ನೀಡಿದ್ದರು. ಇದರನ್ವಯ ಪೊಲೀಸರು ಡಾ.ಸೋಮಶೇಖರ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ನಂತರ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಅದನ್ನು  ಮ್ಯಾಜಿಸ್ಟ್ರೇಟ್ ಕೋರ್ಟ್‌ ತಿರಸ್ಕರಿಸಿತ್ತು.