ಸುದ್ದಿಗಳು

ಲೈಂಗಿಕ ದೌರ್ಜನ್ಯ ಪ್ರಕರಣ: ಮಂಡ್ಯ ರಮೇಶ್‌, ಸಾಧು ಕೋಕಿಲಾ ವಿರುದ್ಧದ ಪ್ರಕರಣ ರದ್ದು

“ಕೃತ್ಯ ನಡೆದ ಸ್ಥಳ ಮಹಜರ್‌ ಸಂದರ್ಭದಲ್ಲಿ ಸಂತ್ರಸ್ತೆಯು ಸ್ಥಳದಲ್ಲೇ ಪಾತ್ರೆಗಳನ್ನು ಸ್ವಚ್ಛಗೊಳಿಸುತ್ತಿದ್ದರು ಎಂದು ಹೇಳಲಾಗಿದೆ. ಇದೊಂದು ಗಂಭೀರ ವಿರೋಧಾಭಾಸವಾಗಿದೆ” ಎಂದು ನ್ಯಾಯಾಲಯ ಹೇಳಿದೆ.

Siddesh M S

ಮೈಸೂರಿನ ಬ್ಯೂಟಿ ಪಾರ್ಲರ್‌ನಲ್ಲಿ ಬಾಡಿ ಮಸಾಜ್‌ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಸಂಬಂಧ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲಾ ಮತ್ತು ಹಿರಿಯ ಕಲಾವಿದ ಮಂಡ್ಯ ರಮೇಶ್‌ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ರದ್ದುಗೊಳಿಸಿದೆ.

ಮೈಸೂರಿನ ಸರಸ್ವತಿಪುರಂ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಮತ್ತು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿ ರದ್ದತಿ ಕೋರಿ ಮೂರನೇ ಆರೋಪಿ ಸಾಧು ಕೋಕಿಲಾ ಮತ್ತು ಎರಡನೇ ಆರೋಪಿ ಮಂಡ್ಯ ರಮೇಶ್‌ ಪ್ರತ್ಯೇಕವಾಗಿ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ನ್ಯಾಯಮೂರ್ತಿ ಎಂ ಜಿ ಉಮಾ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

Justice M G Uma

“ಸಾಧು ಕೋಕಿಲಾ ಮತ್ತು ಮಂಡ್ಯ ರಮೇಶ್‌ ವಿರುದ್ಧ ವಿಚಾರಣೆ ನಡೆಸಲು ಮೇಲ್ನೋಟಕ್ಕೆ ಯಾವುದೇ ದಾಖಲೆಗಳು ಇಲ್ಲ. ಆಧಾರರಹಿತ ಮತ್ತು ಕ್ಷುಲ್ಲಕ ಆರೋಪಗಳ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇಂಥ ಸಂದರ್ಭದಲ್ಲಿ ಕ್ರಿಮಿನಲ್‌ ಪ್ರಕ್ರಿಯೆಗೆ ಅನುಮತಿಸುವುದು ಕಾನೂನಿನ ದುರ್ಬಳಕೆಯಾಗಲಿದೆ. ಹೀಗಾಗಿ, ಅರ್ಜಿ ಪುರಸ್ಕರಿಸಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.

“ವಿಚಾರಣೆ ಮುಂದುವರಿಸಲು ಪ್ರಾಸಿಕ್ಯೂಷನ್‌ ಬಳಿ ಸೂಕ್ತ ಸಾಕ್ಷಿಗಳು ಇರಬೇಕು. ಅದ್ಯಾವುದೂ ಇಲ್ಲ. ಕೃತ್ಯ ನಡೆದ ಸ್ಥಳ ಮಹಜರ್‌ ನಡೆದ ಸಂದರ್ಭದಲ್ಲಿ ಸಂತ್ರಸ್ತೆಯು ಸ್ಥಳದಲ್ಲೇ ಪಾತ್ರೆಗಳನ್ನು ಸ್ವಚ್ಛಗೊಳಿಸುತ್ತಿದ್ದರು ಎಂದು ಹೇಳಲಾಗಿದೆ. ಇದೊಂದು ಗಂಭೀರ ವಿರೋಧಾಭಾಸವಾಗಿದೆ” ಎಂದು ನ್ಯಾಯಾಲಯ ಹೇಳಿದೆ.

“ಅರ್ಜಿದಾರರು ಬ್ಯೂಟಿ ಪಾರ್ಲರ್‌ಗೆ ಬಂದಿದ್ದು, ಸಂತ್ರಸ್ತೆಯು ಮಸಾಜ್‌ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಇದು ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆಧಾರವಾಗಲ್ಲ. ಆರೋಪವು ಆಧಾರರಹಿತವಾಗಿದ್ದು, ದಿನಾಂಕ, ಸ್ಥಳ ಮತ್ತು ಕೃತ್ಯ ನಡೆದ ವಿವರ ಇಲ್ಲ. ಮೊದಲನೇ ಆರೋಪಿಯ ವಿರುದ್ಧದ ಆರೋಪವು ಗಂಭೀರವಾಗಿದ್ದು, ಅರ್ಜಿದಾರರು ಪಾರ್ಲರ್‌ಗೆ ಬಂದಿದ್ದು, ಅವರಿಗೂ ಮಸಾಜ್‌ ಮಾಡಲಾಗಿದೆ ಎಂಬುದು ಬಿಟ್ಟು ಬೇರಾವುದೇ ಆರೋಪವಿಲ್ಲ. ಐಪಿಸಿ ಸೆಕ್ಷನ್‌ 354ಎ (1) & (2)ರ ಅಡಿ ಮಾತ್ರ ಅರ್ಜಿದಾರರ ವಿರುದ್ಧ ಆರೋಪ ಮಾಡಲಾಗಿದೆ. ತನಿಖಾಧಿಕಾರಿಯು ಸಾಕ್ಷಿಗಳ ಹೇಳಿಕೆ ದಾಖಲಿಸಿದ್ದು, ಅವರು ಅರ್ಜಿದಾರರು ಪಾರ್ಲರ್‌ಗೆ ಬಂದಿಲ್ಲ ಎಂದು ಹೇಳಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.

ಹಿರಿಯ ವಕೀಲ ಎ ಎಸ್‌ ಚಂದ್ರಮೌಳಿ ಅವರು “ಅರ್ಜಿದಾರರ ವಿರುದ್ಧ ಆಧಾರರಹಿತ ಮತ್ತು ಕ್ಷುಲ್ಲಕ ಆರೋಪಗಳನ್ನು ಸಂತ್ರಸ್ತೆಯು ಸಿಆರ್‌ಪಿಸಿ ಸೆಕ್ಷನ್‌ 164 ಮತ್ತು ಹೆಚ್ಚುವರಿ ಹೇಳಿಕೆಯಲ್ಲಿ ನೀಡಿದ್ದಾರೆ. ದೂರುದಾರೆ ಏನನ್ನೂ ಹೇಳಿಲ್ಲ. ಹೆಚ್ಚುವರಿ ಹೇಳಿಕೆಯಲ್ಲಿ ನಿರಾಧಾರ ಆರೋಪ ಮಾಡಿದ್ದಾರೆ. ಪಾರ್ಲರ್‌ನಲ್ಲಿನ ಸಹ ಸಾಕ್ಷಿಗಳು ಸಾಧು ಕೋಕಿಲಾ ಮತ್ತು ಮಂಡ್ಯ ರಮೇಶ್‌ ಬಂದಿಲ್ಲ ಎಂದು ಹೇಳಿದ್ದಾರೆ. ಯಾವುದೇ ದಾಖಲೆ ಇಲ್ಲದೇ ವಿಚಾರಣೆ ನಡೆಸಲು ಪ್ರಾಸಿಕ್ಯೂಷನ್‌ ಬಯಸುತ್ತಿದೆ. ಇದಕ್ಕೆ ಅವಕಾಶ ನೀಡಬಾರದು” ಎಂದು ಮನವಿ ಮಾಡಿದರು.

ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕಿ ಆಸ್ಮಾ ಕೌಸರ್‌ ಅವರು “ಸಾಕ್ಷಿಗಳ ಹೇಳಿಕೆಯನ್ನು ಆಧರಿಸಿ ಅರ್ಜಿದಾರರು ವಾದಿಸುತ್ತಿದ್ದಾರೆ. ಹೆಚ್ಚುವರಿ ಹೇಳಿಕೆಯಲ್ಲಿ ಸಾಧು ಕೋಕಿಲಾ ಮತ್ತು ಮಂಡ್ಯ ರಮೇಶ್‌ ವಿರುದ್ಧ ಆರೋಪ ಮಾಡಿದ್ದಾರೆ. ಇದು ವಿಚಾರಣೆಗೆ ಅರ್ಹವಾದ ಪ್ರಕರಣ” ಎಂದರು.  

ಪ್ರಕರಣದ ಹಿನ್ನೆಲೆ: ವೇಶ್ಯಾವಾಟಿಕೆ  ನಡೆಸಲಾಗುತ್ತಿದೆ ಎಂಬ ಗುಮಾನಿ ಮೇರೆಗೆ 2017ರ ಡಿಸೆಂಬರ್‌ 20ರಂದು ಮೈಸೂರಿನ ಸ್ವಾಮಿ ಆರ್ಕೇಡ್‌ ಕಟ್ಟಡದಲ್ಲಿದ್ದ ಲೈಕ್ ಟ್ರೆಂಡ್ ಫ್ಯಾಮಿಲಿ ಸಲೂನ್ ಮೇಲೆ ಸರಸ್ವತಿಪುರಂ ಠಾಣಾ ಪೊಲೀಸರು ದಾಳಿ ನಡೆಸಿದ್ದರು. ಆ ವೇಳೆ ಸಲೂನ್‌ನಲ್ಲಿ ಮಹಿಳಾ ಸಿಬ್ಬಂದಿ ಹಾಗೂ ಸಲೂನ್ ಮಾಲೀಕ ರಾಜೇಶ್ ಇದ್ದರು.

ಮಹಿಳೆಯನ್ನು ವಿಚಾರಣೆ ನಡೆಸಿದಾಗ ಸಲೂನ್ ಭೇಟಿ ನೀಡುವ ಗ್ರಾಹಕರ ದೇಹದ ಎಲ್ಲಾ ಭಾಗಗಳಿಗೆ ಮಸಾಜ್ ಮಾಡುಂತೆ ರಮೇಶ್ ನನಗೆ ಹೇಳುತ್ತಿದ್ದರು. ನಟ ಸಾಧುಕೋಕಿಲ ಸಹ ಸಲೂನ್‌ಗೆ ಬರುತ್ತಿದ್ದರು. ಅವರ ದೇಹದ ಎಲ್ಲಾ ಭಾಗಗಳಿಗೂ ನಾನು ಮಸಾಜ್ ಮಾಡಿದೆ ಎಂದು ಹೇಳಿಕೆ ನೀಡಿದ್ದರು. ಆ ಕುರಿತು ತನಿಖೆ ನಡೆಸಿದ್ದ ಪೊಲೀಸರು, ಸಾಧುಕೋಕಿಲ ವಿರುದ್ಧ ಐಪಿಸಿ ಸೆಕ್ಷನ್ 354ಎ (i) & (ii) ಆರೋಪಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಸಾಧು ಕೋಕಿಲಾ ಮತ್ತು ಮಂಡ್ಯ ರಮೇಶ್‌ ಪರವಾಗಿ ರಜತ್‌ ಮತ್ತು ಕೆ ವಿ ತಮ್ಮಯ್ಯ ವಕಾಲತ್ತು ಹಾಕಿದ್ದಾರೆ.