Doctors 
ಸುದ್ದಿಗಳು

ಕಿಮ್ಸ್‌ಗೆ ಶಾಸಕರ ಸಹೋದರನ ವರ್ಗಾವಣೆ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ, ವರ್ಗಾವಣೆ ಆದೇಶ ರದ್ದು

“ಡಾ. ಕೇಶವ ಅಬ್ಬಯ್ಯ ಅವರನ್ನು ಕಾಯಂ ಆಗಿ ಕಿಮ್ಸ್‌ನಲ್ಲಿ ನಿಯೋಜಿಸುವುದು ಮತ್ತು ಅರ್ಜಿದಾರರನ್ನು ಅವರ ಅಧೀನದಲ್ಲಿ ನಿಯೋಜಿಸುವುದು ಶಾಸನಬದ್ಧ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

Bar & Bench

ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ್‌ ಅಬ್ಬಯ್ಯ ಅವರ ಸಹೋದರ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಜಿಐಎಂಎಸ್) ಪ್ರಾಧ್ಯಾಪಕ ಡಾ. ಕೇಶವ ಅಬ್ಬಯ್ಯ ಅವರನ್ನು ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರ ಸೂಚನೆಯ ಮೇರೆಗೆ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಕಿಮ್ಸ್) ದಂತ ಚಿಕಿತ್ಸಾ ವಿಭಾಗಕ್ಕೆ ವರ್ಗಾವಣೆ ಮಾಡಿರುವುದಕ್ಕೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಈಚೆಗೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಇದು ನಿಯಮಗಳ ಉಲ್ಲಂಘನೆ ಎಂದು ವರ್ಗಾವಣೆ ರದ್ದುಗೊಳಿಸಿದೆ.  

ಡಾ. ಕೇಶವ ಅಬ್ಬಯ್ಯ ಅವರ ವರ್ಗಾವಣೆ ಪ್ರಶ್ನಿಸಿ ಕಿಮ್ಸ್‌ನ ಪ್ರಾಧ್ಯಾಪಕ ಡಾ. ಸುನೀಲ್ ಪಾಟೀಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಮಾನ್ಯ ಮಾಡಿದೆ.

“ಡಾ. ಕೇಶವ ಅಬ್ಬಯ್ಯ ಅವರನ್ನು ಕಾಯಂ ಆಗಿ ಕಿಮ್ಸ್‌ನಲ್ಲಿ ನಿಯೋಜಿಸುವುದು ಮತ್ತು ಅರ್ಜಿದಾರರನ್ನು ಅವರ ಅಧೀನದಲ್ಲಿ ನಿಯೋಜಿಸುವುದು ಶಾಸನಬದ್ಧ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ರಾಜಕೀಯ ಪ್ರಭಾವವನ್ನು ಅಳಿಸಲಾಗದಷ್ಟು ಕಳಂಕಿತವಾಗಿದೆ. ಕಾನೂನಿನಲ್ಲಿ ಅದನ್ನು ಉಳಿಸಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಆದೇಶಿಸಿದೆ.

"ಅರ್ಜಿದಾರರಿಗೆ ಕೆಲವು ತಿಂಗಳ ನಂತರ ಬಡ್ತಿ ಬಂದರೂ ಸಹ ಡಾ. ಅಬ್ಬಯ್ಯ ಅವರ ನೇಮಕಾತಿಯಲ್ಲಿನ ಅಕ್ರಮವನ್ನು ನಿವಾರಿಸುವುದಿಲ್ಲ ಅಥವಾ ಸರಿಪಡಿಸುವುದಿಲ್ಲ” ಎಂದೂ ಸಹ ನ ಪೀಠ ಅಭಿಪ್ರಾಯಪಟ್ಟಿದೆ.

“ಅರ್ಜಿದಾರರು ಶಾಸನಬದ್ಧವಾಗಿ ಬಡ್ತಿಗೆ ಅರ್ಹರಾಗಿದ್ದಾಗ, ಇಲಾಖೆಯಲ್ಲಿ ಲಭ್ಯವಿರುವ ಏಕೈಕ ಹುದ್ದೆಗೆ ಹೊರಗಿನವರನ್ನು ಕರೆದು ತರುವುದು ಅರ್ಜಿದಾರರ ಸೇವಾ ಹಿರಿತನ, ಶಾಸನಬದ್ಧ ಹಕ್ಕು ಮತ್ತು ಮೂಲಭೂತ ಹಕ್ಕು, ಬಡ್ತಿಯ ಕಾನೂನುಬದ್ಧ ಪರಿಗಣನೆ ಎರಡನ್ನೂ ಕಸಿದುಕೊಂಡಂತಾಗಲಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ಅರ್ಜಿದಾರರು ಈಗಾಗಲೇ ದಂತ ವೈದ್ಯ ವಿಭಾಗದಲ್ಲಿ ಹೊಸ ಪ್ರೊಫೆಸರ್‌ ಹುದ್ದೆ ಸೃಷ್ಟಿಸುವ ವೇಳೆಗೆ ಸೇವಾ ಅರ್ಹತೆ ಗಳಿಸಿದ್ದಾರೆ. ಅವರು ಬಡ್ತಿಗೆ ಸಂಪೂರ್ಣ ಅರ್ಹರಾಗಿದ್ದಾರೆ. ಆದರೆ, ಡಾ.ಕೇಶವ್‌ ಅವರು ಹಾಲಿ ಶಾಸಕರ ಸಂಬಂಧಿಯಾಗಿದ್ದು ತಮ್ಮ ಪ್ರಭಾವ ಬಳಸಿ ಕಿಮ್ಸ್‌ ನಲ್ಲಿ ಹುದ್ದೆಗೆ ಪ್ರಯತ್ನಿಸಿದ್ದು, ಇದು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದು ಪೀಠ ಹೇಳಿದೆ. ಜೊತೆಗೆ ಡಾ.ಕೇಶವ್‌ ಅವರ ಸಹೋದರ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದಲ್ಲಿಯೇ ಕಿಮ್ಸ್‌ ಆಸ್ಪತ್ರೆ ಬರುತ್ತದೆ ಎಂಬ ಅಂಶವನ್ನೂ ಸಹ ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

2025ರ ಮಾರ್ಚ್ 5ರಂದು ಕಿಮ್ಸ್‌ ಹೊರಡಿಸಿದ ವರ್ಗಾವಣೆ ಆದೇಶ ಮತ್ತು 2025ರ ಜನವರಿ 21ರಂದು ಹೊರಡಿಸಿದ ತಾತ್ಕಾಲಿಕ ಹಿರಿತನದ ಪಟ್ಟಿಯನ್ನು ಹೈಕೋರ್ಟ್ ರದ್ದುಗೊಳಿಸಿದೆ.

Dr. Suneel Patil Vs State of Karnataka.pdf
Preview