Karnataka High Court, Police 
ಸುದ್ದಿಗಳು

ಜನ್ಮ ದಿನಾಂಕ ಬದಲಾವಣೆಗೆ ನಕಲಿ ಲಸಿಕೆ ದಾಖಲೆ ಸೃಷ್ಟಿ ಆರೋಪ: ಪಿಎಸ್‌ಐ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ

ಸಿವಿಲ್‌ ನ್ಯಾಯಾಲಯದ ಡಿಕ್ರಿ ಇದೆ ಎಂಬ ಕಾರಣಕ್ಕೆ ನಕಲಿ ದಾಖಲೆ ಸೃಷ್ಟಿಸಿದ ಆರೋಪದ ತನಿಖೆಗೆ ತಡೆ ನೀಡಲಾಗದು ಎಂದ ಹೈಕೋರ್ಟ್‌.

Bar & Bench

ಜನ್ಮ ದಿನಾಂಕ ಬದಲಾಯಿಸಿಕೊಳ್ಳಲು ಲಸಿಕೆ ನೀಡಿದ ದಾಖಲೆಯೊಂದರಲ್ಲಿ ನಕಲಿ ನಮೂದುಗಳನ್ನು ಮಾಡಿಸಿ, ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ಹುದ್ದೆಯ ನೇಮಕಾತಿಗೆ ಅರ್ಹತೆ ಪಡೆಯಲು ಯತ್ನಿಸಿದ ಆರೋಪ ಎದುರಿಸುತ್ತಿರುವ ಪೊಲೀಸ್ ಅಧಿಕಾರಿಯ ವಿರುದ್ಧದ ಕ್ರಿಮಿನಲ್‌ ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿದೆ.

ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠವು ಅಕ್ಟೋಬರ್‌ 13ರಂದು ಪಿಎಸ್‌ಐ ಕಾಶಿಲಿಂಗೇಗೌಡ ಎಸ್‌ ಬಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

Justice Suraj Govindraj

ಜನ್ಮ ದಿನಾಂಕ ತಿದ್ದುಪಡಿಗೆ ಸಿವಿಲ್‌ ನ್ಯಾಯಾಲಯ ನೀಡಿರುವ ಡಿಕ್ರಿಯೊಂದೇ, ಆ ಡಿಕ್ರಿ ಪಡೆಯಲು ಆಧಾರವಾಗಿದ್ದ ದಾಖಲೆಗಳು ನಕಲಿಯಾಗಿವೆ ಎಂಬ ಆರೋಪದ ತನಿಖೆಗೆ ಅಡ್ಡಿಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ, ಪ್ರಕರಣದ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಪೊಲೀಸರಿಗೆ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ಪೊಲೀಸ್ ನೇಮಕಾತಿಗೆ ಅರ್ಹತೆ ಪಡೆಯುವ ಉದ್ದೇಶದಿಂದ ಕಾಶಿಲಿಂಗೇಗೌಡ ಅವರು ತಮ್ಮ ಜನ್ಮ ದಿನಾಂಕವನ್ನು ಏಪ್ರಿಲ್‌ 15, 1988ರಿಂದ ಏಪ್ರಿಲ್‌ 15, 1987ಕ್ಕೆ ಬದಲಾಯಿಸಲು ಲಸಿಕೆ ನೀಡಿದ ದಾಖಲೆಯೊಂದರಲ್ಲಿ ನಕಲಿ ನಮೂದುಗಳನ್ನು ಮಾಡಿಸಿದ್ದಾರೆ ಎಂಬ ಆರೋಪವಿದೆ.

ಈ ಸಂಬಂಧ ವಿಧಾನಸೌಧ ಪೊಲೀಸರು 2024ರ ಡಿಸೆಂಬರ್‌ನಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 198 (ಸುಳ್ಳು ಪ್ರಮಾಣಪತ್ರವನ್ನು ನಿಜವೆಂದು ಬಳಸುವುದು), 420 (ವಂಚನೆ), 465 (ನಕಲಿ ದಾಖಲೆ ಸೃಷ್ಟಿಸಿದ್ದಕ್ಕೆ ಶಿಕ್ಷೆ), 468 (ವಂಚನೆ ಉದ್ದೇಶದಿಂದ ನಕಲಿ ದಾಖಲೆ ಸೃಷ್ಟಿಸುವುದು) ಮತ್ತು 471 (ನಕಲಿ ದಾಖಲೆಯನ್ನು ನೈಜವೆಂದು ಬಳಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ತಮ್ಮ ಜನ್ಮ ದಿನಾಂಕವನ್ನು ಬದಲಾಯಿಸುವಂತೆ ಸಕ್ಷಮ ಸಿವಿಲ್‌ ನ್ಯಾಯಾಲಯವೇ ಡಿಕ್ರಿ ನೀಡಿದ್ದು, ಅದರ ಆಧಾರದಲ್ಲಿ ಶಾಲಾ ದಾಖಲೆಗಳು ಮತ್ತು ಅಂಕಪಟ್ಟಿಗಳಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ಕಾಶಿಲಿಂಗೇಗೌಡ ವಾದಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದ ಇಲಾಖಾ ಶಿಸ್ತುಕ್ರಮವನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ 2025ರ ಜುಲೈನಲ್ಲಿ ಪುರಸ್ಕರಿಸಿತ್ತು. ಸಕ್ಷಮ ನ್ಯಾಯಾಲಯವು ರದ್ದುಗೊಳಿಸದ ಹೊರತು ಸಿವಿಲ್‌ ನ್ಯಾಯಾಲಯದ ಡಿಕ್ರಿಯನ್ನು ಅಮಾನ್ಯವೆಂದು ಪರಿಗಣಿಸಲಾಗದು ಎಂಬ ನಿಲುವನ್ನು ನ್ಯಾಯಮಂಡಳಿ ವ್ಯಕ್ತಪಡಿಸಿತ್ತು.

ಹೀಗಾಗಿ, ಸಿವಿಲ್‌ ನ್ಯಾಯಾಲಯದ ಡಿಕ್ರಿ ಜಾರಿಯಲ್ಲಿರುವಾಗ ಅದೇ ಜನ್ಮ ದಿನಾಂಕದ ಬದಲಾವಣೆಗೆ ಸಂಬಂಧಿಸಿದ ಕ್ರಿಮಿನಲ್‌ ಪ್ರಕರಣವನ್ನು ಮುಂದುವರಿಸಲಾಗದು ಎಂಬುದು ಅರ್ಜಿದಾರರ ವಾದವಾಗಿತ್ತು.

ಇದಕ್ಕೆ ಪ್ರತಿಯಾಗಿ, ದೂರುದಾರರ ಪರ ವಕೀಲರು, ಸಿವಿಲ್‌ ನ್ಯಾಯಾಲಯದ ಡಿಕ್ರಿ ಪಡೆಯಲು ಬಳಸಲಾದ ದಾಖಲೆಗಳೇ ನಕಲಿ ಎಂಬ ಆರೋಪವಿದೆ. ಆದ್ದರಿಂದ, ಡಿಕ್ರಿ ಜಾರಿಯಲ್ಲಿದೆ ಎಂಬ ಕಾರಣಕ್ಕೆ ಪೊಲೀಸರು ಈ ಆರೋಪಗಳ ತನಿಖೆ ನಡೆಸುವುದನ್ನು ತಡೆಯಲಾಗದು ಎಂದು ವಾದಿಸಿದರು.

ಸಿವಿಲ್‌ ನ್ಯಾಯಾಲಯವು ಕಾಶಿಲಿಂಗೇಗೌಡ ಅವರ ಶಾಲಾ ದಾಖಲೆಗಳು ಮತ್ತು ಅಂಕಪಟ್ಟಿಗಳಲ್ಲಿನ ಜನ್ಮ ದಿನಾಂಕವನ್ನು ತಿದ್ದುಪಡಿ ಮಾಡುವಂತೆ ನಿರ್ದೇಶಿಸಿತ್ತು. ಆದರೆ, ಈ ತಿದ್ದುಪಡಿಗೆ ಆಧಾರವಾಗಿದ್ದ ಲಸಿಕೆ ದಾಖಲೆಯೇ ನಕಲಿ ಎಂಬ ಆರೋಪ ಕೇಳಿಬಂದಿದೆ ಎಂದು ಹೈಕೋರ್ಟ್‌ ಹೇಳಿದೆ.

“ಡಿಕ್ರಿ ನೀಡಲು ಆಧಾರವಾಗಿದ್ದ ದಾಖಲೆಗಳೇ ನಕಲಿ ಎಂದು ಆರೋಪಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಸಿವಿಲ್‌ ನ್ಯಾಯಾಲಯದ ಡಿಕ್ರಿಯ ಸಿಂಧುತ್ವದ ಪ್ರಶ್ನೆ ಮತ್ತು ನಕಲಿ ದಾಖಲೆ ಸೃಷ್ಟಿ ಹಾಗೂ ವಂಚನೆಯ ಆರೋಪಗಳ ಕುರಿತು ಕ್ರಿಮಿನಲ್‌ ತನಿಖೆ ನಡೆಸಬೇಕಿರುವ ಅಗತ್ಯದ ಪ್ರಶ್ನೆಗಳು ಪ್ರತ್ಯೇಕವಾದವು ಎಂದು ಪೀಠ ಅಭಿಪ್ರಾಯಪಟ್ಟಿದೆ.

ಜನ್ಮ ದಿನಾಂಕದ ಬದಲಾವಣೆಯಿಂದ ಪಿಎಸ್‌ಐ ನೇಮಕಾತಿಗೆ ಅರ್ಹತೆ ಪಡೆಯಲು ಸಾಧ್ಯವಾಯಿತು ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣವು ಮಹತ್ವ ಪಡೆದುಕೊಂಡಿದೆ ಎಂದು ನ್ಯಾಯಾಲಯ ಹೇಳಿದೆ.

“ದಾಖಲೆಗಳನ್ನು ನಿಜವಾಗಿಯೂ ನಕಲಿ ಮಾಡಲಾಗಿದೆಯೇ, ಅಂತಹ ನಕಲಿ ಸೃಷ್ಟಿಯಲ್ಲಿ ಅರ್ಜಿದಾರರು ಭಾಗಿಯಾಗಿದ್ದಾರೆಯೇ ಮತ್ತು ಆರೋಪಿತ ಅಪರಾಧಗಳ ಅಗತ್ಯ ಅಂಶಗಳು ಸಾಬೀತಾಗುತ್ತವೆಯೇ ಎಂಬುದನ್ನು ತನಿಖೆಯ ಸಂದರ್ಭದಲ್ಲಿ ನಿರ್ಧರಿಸಬೇಕಿದೆ” ಎಂದು ನ್ಯಾಯಾಲಯ ಹೇಳಿದೆ.

ಈ ಅಭಿಪ್ರಾಯಗಳೊಂದಿಗೆ, ಕಾಶಿಲಿಂಗೇಗೌಡ ಅವರ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್‌, ಪ್ರಕರಣದ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ನಿರ್ದೇಶಿಸಿದೆ.

Kashilingegowda S B Vs State of Karnataka.pdf
Preview