ಸುದ್ದಿಗಳು

ಬೆಂಗಳೂರು ವಿಮಾನ ನಿಲ್ದಾಣ, ಮಾಲ್‌ಗಳಿಗೆ ಬಾಂಬ್ ಬೆದರಿಕೆ: ಯುವಕನ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಕಾರ

ಘಟನೆಯ ದಿನ ಇಂಟರ್‌ನೆಟ್ ಸಂಪರ್ಕ ಕಾರ್ಯನಿರ್ವಹಿಸಿರಲಿಲ್ಲ ಎಂಬ ಆರೋಪವೊಂದೇ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ಆಧಾರವಾಗುವುದಿಲ್ಲ ಎಂದು ನ್ಯಾಯಾಲಯದ ಅಭಿಪ್ರಾಯಪಟ್ಟಿದೆ.

Bar & Bench

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬೆಂಗಳೂರಿನ ಹಲವು ಶಾಪಿಂಗ್ ಮಾಲ್‌ಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ 22 ವರ್ಷದ ಯುವಕನ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿದೆ.

ಆರೋಪಿತ ಯುವಕನ ಇಂಟರ್‌ನೆಟ್ ಸಂಪರ್ಕವು ಘಟನೆ ನಡೆದ ದಿನ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂಬ ವಾದವೊಂದೇ ವಿಚಾರಣೆಗೆ ಮುನ್ನ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಸಾಕಾಗುವುದಿಲ್ಲ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠ ಹೇಳಿದೆ.

“ಎಲೆಕ್ಟ್ರಾನಿಕ್ ಸಂವಹನದ ಈ ಕಾಲದಲ್ಲಿ ಅರ್ಜಿದಾರರ ವಾದವು ಪ್ರಕರಣವನ್ನು ರದ್ದುಗೊಳಿಸಲು ಬಲವಾದ ಆಧಾರವಾಗಲಾರದು” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Justice M Nagaprasanna

2025ರ ನವೆಂಬರ್ 30ರಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಕಳುಹಿಸಲಾಗಿತ್ತು ಎನ್ನಲಾದ ಇ-ಮೇಲ್‌ನಲ್ಲಿ ವಿಮಾನ ನಿಲ್ದಾಣ ಮತ್ತು ನಗರದ ಹಲವು ಮಾಲ್‌ಗಳನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿತ್ತು. ಓರಿಯನ್ ಮಾಲ್, ಲುಲು ಮಾಲ್, ಫೋರಂ ಸೌತ್ ಮಾಲ್ ಮತ್ತು ಮಂತ್ರಿ ಸ್ಕ್ವೇರ್ ಮಾಲ್‌ಗಳು ಬೆದರಿಕೆಗೆ ಗುರಿಯಾಗಿದ್ದವು.

ಸಂಜೆ 7 ಗಂಟೆಯ ಬಳಿಕ ಮಾಲ್‌ಗಳ ಸ್ಫೋಟಗಳು ಸಂಭವಿಸಲಿವೆ ಎಂದು ಇ-ಮೇಲ್‌ನಲ್ಲಿ ಎಚ್ಚರಿಸಲಾಗಿತ್ತು. ಅಲ್ಲದೆ, ದಾಳಿಯನ್ನು ತಪ್ಪಿಸಲು ಹಣ ಪಾವತಿಸುವಂತೆ ಸೂಚಿಸಿ ಮೊಬೈಲ್ ಸಂಖ್ಯೆಯೊಂದನ್ನೂ ನೀಡಲಾಗಿತ್ತು. ಈ ಸಂಬಂಧ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಅಭಯ್ ಶೀ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಆರೋಪಿಯು ಮತ್ತೊಬ್ಬ ವ್ಯಕ್ತಿಯ ಗುರುತಿನ ವಿವರಗಳನ್ನು ಬಳಸಿಕೊಂಡು ಹಲವು ಇ-ಮೇಲ್ ಖಾತೆಗಳನ್ನು ಸೃಷ್ಟಿಸಿ, ಅವುಗಳ ಮೂಲಕ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾನೆ ಎಂಬುದು ಪ್ರಾಸಿಕ್ಯೂಷನ್‌ನ ಆರೋಪವಾಗಿದೆ. ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಹೆಸರನ್ನೂ ಬೆದರಿಕೆ ಸಂದೇಶಗಳಲ್ಲಿ ಉಲ್ಲೇಖಿಸಲಾಗಿತ್ತು ಎಂದು ಆರೋಪಿಸಲಾಗಿದೆ.

ಆರೋಪಿಯ ವಿರುದ್ಧ ಬಿಎನ್‌ಎಸ್‌ ಸೆಕ್ಷನ್ 351(4) (ಅನಾಮಧೇಯ ಸಂವಹನದ ಮೂಲಕ ಕ್ರಿಮಿನಲ್ ಬೆದರಿಕೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ 2000ರ ಸೆಕ್ಷನ್ 66D (ಕಂಪ್ಯೂಟರ್ ಸಂಪನ್ಮೂಲ ಅಥವಾ ಸಂವಹನ ಸಾಧನದ ಮೂಲಕ ಸೋಗು ಹಾಕಿ ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಆರಂಭದಲ್ಲಿ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66F (ಸೈಬರ್ ಭಯೋತ್ಪಾದನೆ) ಅಡಿಯಲ್ಲೂ ಆರೋಪ ಹೊರಿಸಲಾಗಿತ್ತು. ಆದರೆ, ತನಿಖಾಧಿಕಾರಿಯು ಅಂತಿಮ ಆರೋಪಪಟ್ಟಿಯಲ್ಲಿ ಈ ಆರೋಪವನ್ನು ಕೈಬಿಟ್ಟಿದ್ದರು.

ಘಟನೆ ನಡೆದ ದಿನ ತನ್ನ ಇಂಟರ್‌ನೆಟ್ ಸಂಪರ್ಕ ಕಾರ್ಯನಿರ್ವಹಿಸುತ್ತಿರಲಿಲ್ಲ. ಹೀಗಾಗಿ, ತಾನು ಬಾಂಬ್ ಬೆದರಿಕೆಯ ಇ-ಮೇಲ್ ಕಳುಹಿಸಲು ಸಾಧ್ಯವೇ ಇಲ್ಲ ಎಂದು ಆರೋಪಿಯು ಹೈಕೋರ್ಟ್‌ನಲ್ಲಿ ವಾದಿಸಿದ್ದನು.

ಇದಕ್ಕೆ ಪ್ರತಿಯಾಗಿ, ಇಂಟರ್‌ನೆಟ್ ಸಂಪರ್ಕದ ವೈಫಲ್ಯಕ್ಕೆ ಸಂಬಂಧಿಸಿದ ಆರೋಪಿಯ ವಾದವನ್ನು ವಿಚಾರಣೆಯ ಸಂದರ್ಭದಲ್ಲಿ ಸಾಕ್ಷ್ಯಗಳ ಆಧಾರದ ಮೇಲೆ ಪರಿಶೀಲಿಸಬೇಕೇ ಹೊರತು, ಅದರ ಆಧಾರದಲ್ಲಿ ಪ್ರಕರಣವನ್ನು ಆರಂಭದಲ್ಲೇ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ವಾದಿಸಿತು.

ಸರ್ಕಾರದ ವಾದವನ್ನು ಒಪ್ಪಿಕೊಂಡ ಹೈಕೋರ್ಟ್, ಆರೋಪಿಯ ಅರ್ಜಿಯನ್ನು ವಜಾಗೊಳಿಸಿತು.

“ಬೆದರಿಕೆ ಸಂದೇಶ ಕಳುಹಿಸಲು ಬಳಸಲಾಗಿದೆ ಎನ್ನಲಾದ ಇ-ಮೇಲ್ ಖಾತೆಗಳು ನಿರ್ದಿಷ್ಟ ಕಂಪ್ಯೂಟರ್, ಇಂಟರ್‌ನೆಟ್ ಸಂಪರ್ಕ ಅಥವಾ ಭೌಗೋಳಿಕ ಸ್ಥಳಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಹೀಗಾಗಿ, ಒಂದು ಇಂಟರ್‌ನೆಟ್ ಸಂಪರ್ಕ ವಿಫಲವಾಗಿತ್ತು ಎಂಬುದರಿಂದ ಬೇರೆ ಲಭ್ಯವಿರುವ ಮಾರ್ಗದ ಮೂಲಕ ಎಲೆಕ್ಟ್ರಾನಿಕ್ ಸಂದೇಶ ಕಳುಹಿಸಲು ಸಾಧ್ಯವೇ ಇರಲಿಲ್ಲ ಎಂಬುದು ಸಾಬೀತಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಇಂಟರ್‌ನೆಟ್ ಸೇವಾ ಪೂರೈಕೆದಾರರಿಗೆ ಆರೋಪಿ ನೀಡಿದ್ದ ದೂರು ಆತನ ಸಮರ್ಥನೆಗೆ ಪೂರಕವಾಗಬಹುದು. ಆದರೆ, ಆ ಕಾರಣವೊಂದರಿಂದಲೇ ಆತ ಇ-ಮೇಲ್ ಕಳುಹಿಸಲು ಸಂಪೂರ್ಣ ಅಸಮರ್ಥನಾಗಿದ್ದ ಎಂಬುದನ್ನು ನಿರ್ಣಾಯಕವಾಗಿ ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸುಳ್ಳು ಬಾಂಬ್ ಬೆದರಿಕೆಗಳ ಗಂಭೀರತೆಯನ್ನು ಪ್ರಸ್ತಾಪಿಸಿದ ನ್ಯಾಯಾಲಯವು  ಬೆದರಿಕೆ ಹಾಕಿದ ವ್ಯಕ್ತಿಗೆ ಅದನ್ನು ಕಾರ್ಯರೂಪಕ್ಕೆ ತರುವ ಉದ್ದೇಶವಿತ್ತೇ ಎಂಬುದನ್ನು ಮೀರಿಯೂ ಇಂತಹ ಕೃತ್ಯಗಳು ಪರಿಣಾಮ ಬೀರುತ್ತವೆ ಎಂದು ಹೇಳಿದೆ.

“ಭಯೋತ್ಪಾದನೆಯ ಸುಳ್ಳು ಬೆದರಿಕೆ ನೀಡಿದ ವ್ಯಕ್ತಿಗೆ ಅದನ್ನು ಕಾರ್ಯಗತಗೊಳಿಸುವ ಉದ್ದೇಶವಿರಲಿಲ್ಲ ಎಂಬ ಕಾರಣಕ್ಕೆ ಆ ಕೃತ್ಯ ನಿರುಪದ್ರವಿಯಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಇಂತಹ ಬೆದರಿಕೆಗಳು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವುದರ ಜೊತೆಗೆ, ಸಾಮಾನ್ಯ ಚಟುವಟಿಕೆಗಳಿಗೆ ಅಡ್ಡಿಪಡಿಸಬಹುದು. ಅಲ್ಲದೆ, ಪೊಲೀಸರು ಮತ್ತು ಇತರ ಸಾರ್ವಜನಿಕ ಸೇವಾ ವ್ಯವಸ್ಥೆಗಳು ತಮ್ಮ ಸಂಪನ್ಮೂಲಗಳನ್ನು ಬೆದರಿಕೆಯನ್ನು ಪರಿಶೀಲಿಸಲು ಹಾಗೂ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಬಳಸಬೇಕಾದ ಪರಿಸ್ಥಿತಿಯನ್ನೂ ಸೃಷ್ಟಿಸಬಹುದು ಎಂದು ನ್ಯಾಯಾಲಯ ಗಮನಿಸಿದೆ.

“ಕೀಬೋರ್ಡ್ ಮೂಲಕ ಕಳುಹಿಸಲಾದ ಬೆದರಿಕೆಯೂ ವ್ಯಕ್ತಿಯೊಬ್ಬರು ನೇರವಾಗಿ ನೀಡುವ ಬೆದರಿಕೆಯಷ್ಟೇ ವಾಸ್ತವಿಕ ಪರಿಣಾಮಗಳನ್ನು ಉಂಟುಮಾಡಬಹುದು” ಎಂದು ನ್ಯಾಯಾಲಯ ಹೇಳಿದೆ.

ಈ ಹಿನ್ನೆಲೆಯಲ್ಲಿ, ಆರೋಪಿಯ ವಾದಗಳು ವಿಚಾರಣೆಯ ಸಂದರ್ಭದಲ್ಲಿ ಪರಿಶೀಲನೆಗೆ ಒಳಪಡಬೇಕಾದ ವಿಷಯಗಳಾಗಿವೆ ಎಂದು ಪರಿಗಣಿಸಿದ ಹೈಕೋರ್ಟ್, ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

Abhay Shee Vs State of Karnataka.pdf
Preview