Vishweshwar Bhat 
ಸುದ್ದಿಗಳು

ಏಷ್ಯಾನೆಟ್‌ ಸುವರ್ಣ, ವಿಶ್ವೇಶ್ವರ್‌ ಭಟ್‌ ವಿರುದ್ಧ ರಮ್ಯಾ ಹೂಡಿರುವ ಮಾನಹಾನಿ ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಕಾರ

ಕ್ರಿಕೆಟ್‌ ಬೆಟ್ಟಿಂಗ್‌ ಹಗರಣದಲ್ಲಿ ಭಾಗಿಯಾಗಿದ್ದೇನೆ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ. ಆರೋಪಿಗಳ ನಡೆಯಿಂದ ತಮ್ಮ ಘನತೆಗೆ ಗಂಭೀರ ಹಾನಿಯಾಗಿದ್ದು, ಸುದ್ದಿಯ ಖಚಿತತೆಯ ಬಗ್ಗೆ ಚಿತ್ರರಂಗದ ಹಲವು ಪ್ರಶ್ನಿಸಿದ್ದಾರೆ ಎಂದು ರಮ್ಯಾ ದೂರಿದ್ದಾರೆ.

Bar & Bench

ಕ್ರಿಕೆಟ್‌ ಬೆಟ್ಟಿಂಗ್‌ ಮತ್ತು ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಸುದ್ದಿ ಬಿತ್ತರಿಸುವ ಮೂಲಕ ತನ್ನ ವರ್ಚಸ್ಸಿಗೆ ಹಾನಿ ಮಾಡಲಾಗಿದೆ ಎಂದು ನಟಿ ಹಾಗೂ ರಾಜಕಾರಣಿ ದಿವ್ಯ ಸ್ಪಂದನಾ ಅಲಿಯಾಸ್‌ ರಮ್ಯಾ ಅವರು ಕನ್ನಡದ ಏಷ್ಯಾನೆಟ್‌ ಸುವರ್ಣ ಸುದ್ದಿ ವಾಹಿನಿ, ಅದರ ಮಾತೃ ಸಂಸ್ಥೆ ಹಾಗೂ ವಾಹಿನಿಯ ಮಾಜಿ ಸಂಪಾದಕ ವಿಶ್ವೇಶ್ವರ ಭಟ್‌ ವಿರುದ್ಧ ದಾಖಲಿಸಿದ್ದ ಮಾನಹಾನಿ ಪ್ರಕರಣ ರದ್ದುಪಡಿಸಿಲು ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರಾಕರಿಸಿದೆ.

ರಮ್ಯಾ ಸಲ್ಲಿಸಿದ್ದ ಖಾಸಗಿ ದೂರಿನ ಸಂಜ್ಞೇಯ ಪರಿಗಣಿಸಿರುವ ವಿಚಾರಣಾಧೀನ ನ್ಯಾಯಾಲಯದಲ್ಲಿನ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಏಷ್ಯಾನೆಟ್‌ ನ್ಯೂಸ್‌ ನೆಟ್‌ವರ್ಕ್‌ ಪ್ರೈ. ಲಿ., ಏಷ್ಯಾನೆಟ್‌ ಸುವರ್ಣಾ ನ್ಯೂಸ್‌ ಮತ್ತು ವಿಶೇಶ್ವರ ಭಟ್‌ ಅಲಿಯಾಸ್‌ ವಿ ಭಟ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

“ಆರೋಪಿತ ವ್ಯಕ್ತಿಗಳು ರಮ್ಯಾ ಅವರ ಘನತೆಗೆ ಹಾನಿಯಾಗುತ್ತದೆ ಎಂಬ ಅರಿವು ಇದ್ದರೂ ಅವರು ಕ್ರಿಕೆಟ್‌ ಬೆಟ್ಟಿಂಗ್‌ ಮತ್ತು ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂಬ ರೀತಿಯಲ್ಲಿ ಬಿಂಬಿಸಿ ಸುದ್ದಿ ಪ್ರಸಾರ ಮಾಡಿದ್ದಾರೆ ಎಂಬುದು ದೂರುದಾರೆಯ ವಾದವಾಗಿದೆ. ಹೀಗಾಗಿ, ಆರೋಪಿಗಳ ವಿರುದ್ಧ ಮೇಲ್ನೋಟಕ್ಕೆ ಐಪಿಸಿ ಸೆಕ್ಷನ್‌ 500ರ ಅಡಿ ವಿಚಾರಣೆ ನಡೆಯುವ ಪ್ರಕರಣವಿಲ್ಲ ಎಂದು ಹೇಳಲಾಗದು” ಎಂದು ನ್ಯಾಯಾಲಯ ಹೇಳಿದೆ.

"ಅರ್ಜಿದಾರರು ಐಪಿಸಿ ಸೆಕ್ಷನ್‌ 499ರ ಅಡಿ ನಾಲ್ಕನೇ ವಿನಾಯಿತಿಗೆ ಒಳಪಡಲಿದ್ದಾರೆ. ಹೀಗಾಗಿ, ಅವರ ವಿರುದ್ಧ ಐಪಿಸಿ ಸೆಕ್ಷನ್‌ 500ರ ಅಡಿ ವಿಚಾರಣೆ ನಡೆಸಲಾಗದು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ. ಆದರೆ, ಕ್ರಿಕೆಟ್‌ ಬೆಟ್ಟಿಂಗ್‌ ಅಥವಾ ಸ್ಪಾಟ್‌ ಫಿಕ್ಸಿಂಗ್‌ಗೆ ಸಂಬಂಧಿಸಿದಂತೆ ದೂರುದಾರೆ ಭಾಗಿಯಾಗಿರುವುದರ ಕುರಿತು ಆಕೆಯ ವಿರುದ್ಧ ಯಾವುದಾದರೂ ನ್ಯಾಯಾಲಯದಲ್ಲಿ ಪ್ರಕ್ರಿಯೆ ನಡೆಯುತ್ತಿರುವುದಕ್ಕೆ ಸಂಬಂಧಿಸಿದ ದಾಖಲೆ ಮುಂದಿಡಲು ಅರ್ಜಿದಾರರು ವಿಫಲರಾಗಿದ್ದಾರೆ. ಐಪಿಸಿ ಸೆಕ್ಷನ್‌ 499ರ ಪ್ರಕಾರ ನ್ಯಾಯಾಲಯದ ಪ್ರಕ್ರಿಯೆ ಅಥವಾ ಅದರ ಫಲಿತಾಂಶದ ಸತ್ಯ ವರದಿ ಪ್ರಸಾರ ಮಾಡುವುದು ಮಾನಹಾನಿಯಲ್ಲ ಎಂಬುದು ನಾಲ್ಕನೇ ವಿನಾಯಿತಿಯಾಗಿದೆ. ಅರ್ಜಿದಾರರು ಐಪಿಸಿ ಸೆಕ್ಷನ್‌ 499ರ ನಾಲ್ಕನೇ ವಿನಾಯಿತಿ ಪ್ರಕಾರ ತಮ್ಮ ವಾದಕ್ಕೆ ಪೂರಕವಾಗಿ ಸೂಕ್ತ ದಾಖಲೆ ಮುಂದಿಡಲು ವಿಫಲರಾಗಿರುವುದರಿಂದ ಅವರ ವಾದವನ್ನು ತಿರಸ್ಕರಿಸಲಾಗಿದೆ. ಅರ್ಜಿದಾರರು ರಮ್ಯಾ ಅವರ ಘನತೆಗೆ ಹಾನಿ ಮಾಡುವ ಉದ್ದೇಶ ಹೊಂದಿದ್ದರೇ ಎಂಬುದು ವಿಚಾರಣೆಯಿಂದ ತಿಳಿದು ಬರಬೇಕಿದ್ದು, ಈ ಹಂತದಲ್ಲಿ ಆ ಕುರಿತು ಯಾವುದೇ ಅಭಿಪ್ರಾಯ ದಾಖಲಿಸಲಾಗದು" ಎಂದು ಹೈಕೋರ್ಟ್‌ ಹೇಳಿದೆ.  

ಅರ್ಜಿದಾರರ ಪರ ವಕೀಲ ಸುದರ್ಶನ ಸುರೇಶ್‌ ಅವರು “ಇತರೆ ಮಾಧ್ಯಮ ಸಂಸ್ಥೆಗಳು ಪ್ರಸಾರ ಮಾಡಿದ ಸುದ್ದಿಯನ್ನು ಪ್ರಸಾರ ಮಾಡಲಾಗಿದೆ. ದೂರಿನಲ್ಲಿನ ಆರೋಪವು ಅರ್ಜಿದಾರರಿಗೆ ಅನ್ವಯವಾಗುವುದಿಲ್ಲ. ಅರ್ಜಿದಾರರಿಗೆ ಐಪಿಸಿ ಸೆಕ್ಷನ್‌ 499 ಅನ್ವಯಿಸಲಿದೆ (ಮಾನಹಾನಿಗೆ ಅನ್ವಯಿಸಲಾಗುವ ಐಪಿಸಿ ಸೆಕ್ಷನ್‌ 499ರ ಅಡಿ ಕೆಲವೊಂದು ವಿನಾಯಿತಿಗಳಿವೆ). ಅದಾಗ್ಯೂ, ರಮ್ಯಾ ಅವರಿಗೆ ಮಾನಹಾನಿ ಮಾಡುವುದು ಉದ್ದೇಶವಾಗಿರಲಿಲ್ಲ” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: 2013ರ ಮೇ 31ರಂದು ಕನ್ನಡ ಸಿನಿಮಾ ನಟಿಯರು ಕ್ರಿಕೆಟ್‌ ಬೆಟ್ಟಿಂಗ್‌ ಮತ್ತು ಸ್ಪಾಟ್‌ ಫಿಕ್ಸಿಂಗ್‌ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಗಳು ಸುದ್ದಿ ಬಿತ್ತರಿಸಿದ್ದು, ಪದೇಪದೇ ತಮ್ಮ ಚಿತ್ರ ಮತ್ತು ವಿಡಿಯೊ ಪ್ರಸಾರ ಮಾಡಿದ್ದಾರೆ. ತಾನು ಹಗರಣದಲ್ಲಿ ಭಾಗಿಯಾಗಿದ್ದೇನೆ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ. ಆರೋಪಿಗಳ ನಡೆಯಿಂದ ತಮ್ಮ ಘನತೆಗೆ ಗಂಭೀರ ಹಾನಿಯಾಗಿದ್ದು, ಸುದ್ದಿಯ ಖಚಿತತೆಯ ಬಗ್ಗೆ ಚಿತ್ರರಂಗದ ಹಲವು ಪ್ರಶ್ನಿಸಿದ್ದರು ಎಂದು ದೂರಿದ್ದರು.

ಇದರ ಆಧಾರದಲ್ಲಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ರಮ್ಯಾ ಅವರು ಆರೋಪಿಗಳ ವಿರುದ್ಧ ಮಾನಹಾನಿಗೆ ಅನ್ವಯಿಸುವ ಐಪಿಸಿ ಸೆಕ್ಷನ್‌ 500ರ ಅಡಿ ಕ್ರಮಕೈಗೊಳ್ಳುವಂತೆ ಖಾಸಗಿ ದೂರು ದಾಖಲಿಸಿದ್ದರು. ರಮ್ಯಾ ಅವರ ಹೇಳಿಕೆ ದಾಖಲಿಸಿಕೊಂಡಿದ್ದ ವಿಚಾರಣಾಧೀನ ನ್ಯಾಯಾಲಯವು 2016ರ ಜೂನ್‌ 13ರಂದು ಆರೋಪಿಗಳಿಗೆ ಸಮನ್ಸ್‌ ಜಾರಿ ಮಾಡಿತ್ತು.

Asianet News Network Pvt Ltd Divya Spandana.pdf
Preview