ವಿದೇಶಗಳಲ್ಲಿ ನಡೆಯುವ ಹಾಕಿ ಪಂದ್ಯಾವಳಿಯಲ್ಲಿ ಆಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಆರೋಪದ ಸಂಬಂಧ ಖೇಲೊ ಮಾಸ್ಟರ್ ಸಂಸ್ಥೆಯ ಪದಾಧಿಕಾರಿಗಳ ವಿರುದ್ದ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದತಿಗೆ ಕರ್ನಾಟಕ ಹೈಕೋರ್ಟ್ ಬುಧವಾರ ನಿರಾಕರಿಸಿದೆ.
ಖೇಲೊ ಮಾಸ್ಟರ್ ಸಂಸ್ಥೆಯ ಖಜಾಂಜಿ ಎ ಎನ್ ಸೋಮಯ್ಯ, ಅಧ್ಯಕ್ಷ ಎಚ್ ಎಂ ಪ್ರಸನ್ನ, ಕಾರ್ಯದರ್ಶಿ ಎನ್ ಮಧು ಮತ್ತು ತಂಡದ ಮ್ಯಾನೇಜರ್ ಪಿ ಕೆ ತೇಜಶ್ರೀ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ಅಂತಿಮ ವರದಿ ಸಲ್ಲಿಸಿದ ಬಳಿಕ ಅದನ್ನು ಪ್ರಶ್ನಿಸುವ ಸ್ವಾತಂತ್ರ್ಯ ಕಲ್ಪಿಸಿ, ಅರ್ಜಿ ಹಿಂಪಡೆಯಲು ಅವಕಾಶ ಮಾಡಿಕೊಡಬೇಕು ಎಂದು ಅರ್ಜಿದಾರರ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿ, ಅರ್ಜಿ ವಿಲೇವಾರಿ ಮಾಡಿತು.
ವಿಚಾರಣೆಯ ಒಂದು ಹಂತದಲ್ಲಿ ಪೀಠವು “ಬಡ ಹಾಕಿ ಆಟಗಾರರಿಗೆ ವಂಚಿಸಿದ್ದೀರಿ. ಇದೇ ರೀತಿ ಕ್ರಿಕೆಟಿಗರಿಗೆ ವಂಚಿಸಲಾಗುವುದೇ? ಸಾಧ್ಯವೇ ಇಲ್ಲ. ನಂಬಿಸಿ ಆಟಗಾರರಿಗೆ ವಂಚಿಸಿರುವುದರಿಂದ ಇದು ತನಿಖೆ ನಡೆಯಲೇಬೇಕಾದ ಪ್ರಕರಣವಾಗಿದೆ. ಹಾಕಿ ಆಟ, ಆದರೆ ಏನನ್ನು ಬಾಕಿ ಉಳಿಸಿಲ್ಲ (ಗೇಮ್ ಹಾಕಿ, ಕುಚ್ ನಹೀ ಬಾಕಿ)” ಎಂದು ಮಾರ್ಮಿಕವಾಗಿ ನುಡಿಯಿತು.
ಅರ್ಜಿದಾರರ ಪರ ವಕೀಲರು “ಮೊದಲಿಗೆ ಕೊರಿಯಾದಲ್ಲಿ ನಡೆಯುವ ಹಾಕಿ ಟೂರ್ನಿಗೆ ಕರೆದೊಯ್ಯಲಾಗುವುದು ಎಂದು 15 ಆಟಗಾರರಿಂದ ತಲಾ ₹15,000 ವಸೂಲಿ ಮಾಡಲಾಗಿತ್ತು. ವೀಸಾಗೆ ಅಗತ್ಯವಾದ ದಾಖಲೆ ಒದಗಿಸಲು ಆಟಗಾರರು ವಿಫಲರಾಗಿದ್ದರಿಂದ ಅದು ಸಾಧ್ಯವಾಗಲಿಲ್ಲ. ಆನಂತರ ಆಸ್ಟ್ರೇಲಿಯಾದಲ್ಲಿ ಟೂರ್ನಿ ನಡೆಸಲಾಗುತ್ತದೆ ಎಂದು ಪ್ರತಿಯೊಬ್ಬ ಆಟಗಾರನಿಂದ ₹1.50 ಲಕ್ಷ ಸಂಗ್ರಹಿಸಲಾಗಿತ್ತು. ಅದಕ್ಕೂ ವೀಸಾ ಪಡೆಯಲು ಆಟಗಾರರು ದಾಖಲೆ ಒದಗಿಸಲು ಸಾಧ್ಯವಾಗಿರಲಿಲ್ಲ. ಆದರೆ, ಶ್ರೀಲಂಕಾದಲ್ಲಿ ನಡೆದಿದ್ದ ಟೂರ್ನಿಗೆ ಆಟಗಾರರನ್ನು ಕರೆದೊಯ್ಯಲಾಗಿತ್ತು” ಎಂದರು.
ಈ ಹಂತದಲ್ಲಿ ಪೀಠವು ಭಾರತದಲ್ಲಿ ಕುಳಿತು ನೀವು ಲೋಕದರ್ಶನ ಮಾಡಿಸಿದ್ದೀರಿ ಎಂದಿತು.
ದೂರುದಾರರ ಪರ ವಕೀಲರು “ಮೊದಲಿಗೆ ಕೊರಿಯಾಗೆ ಕರೆದೊಯ್ಯುವುದಾಗಿ ಹೇಳಿ 15 ಮಂದಿಯಿಂದ ತಲಾ 15 ಸಾವಿರ ಸಂಗ್ರಹಿಸಲಾಗಿತ್ತು. ಆನಂತರ ಆಸ್ಟ್ರೇಲಿಯಾಕ್ಕೆ ಕರೆದೊಯ್ಯುವುದಾಗಿ ಹೇಳಿ 17 ಮಂದಿಯಿಂದ ತಲಾ ₹1.30 ಲಕ್ಷ ಬ್ಯಾಂಕ್‌ಗೆ ವರ್ಗಾವಣೆ, ₹1.70 ಲಕ್ಷ ನಗದನ್ನು ಸ್ವೀಕರಿಸಲಾಗಿದೆ. ಆಟಗಾರರ ಹೆಸರಿನಲ್ಲಿ ಪ್ರಾಯೋಜಕತ್ವದ ನೆಪದಲ್ಲೂ ಹಣ ಸಂಗ್ರಹಿಸಲಾಗಿದೆ. ಅದನ್ನು ಅರ್ಜಿದಾರರು ತಮ್ಮ ಖಾತೆಗೆ ಹಾಕಿಸಿಕೊಂಡಿದ್ದಾರೆ” ಎಂದು ಆರೋಪಿಸಿದರು.
ಇದನ್ನು ಆಲಿಸಿದ ಪೀಠವು ಎಷ್ಟು ಸಾರಿ ನೀವು ಜನರಿಗೆ ವಂಚಿಸಲು ಸಾಧ್ಯ? ಕೊರಿಯಾ, ಆಸ್ಟ್ರೇಲಿಯಾ, ಶ್ರೀಲಂಕಾ.. ನಿಮ್ಮನ್ನು ಬಿಟ್ಟಿದ್ದರೆ ಅವರನ್ನು ನೀವು ಬೇರೆಯದೇ ಪ್ರದೇಶಕ್ಕೆ ಕರೆದೊಯ್ಯುತ್ತಿದ್ದಿರಿ ಎನಿಸುತ್ತದೆ” ಎಂದ ಪೀಠವು ಎಲ್ಲಾ ಆರೋಪಿಗಳು ಹಣ ಮರಳಿಸಬೇಕು ಎಂದು, ಅರ್ಜಿ ವಿಲೇವಾರಿ ಮಾಡಿತು.