ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ಎಸಗಿದ ಆರೋಪದ ಸಂಬಂಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲಿನಲ್ಲಿರುವ ಮಾಜಿ ಆಯುಕ್ತ ಜಿ ಟಿ ದಿನೇಶ್ ಕುಮಾರ್ ಅವರು ಬಂಧನದಿಂದ ಬಿಡುಗಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ನಿಗದಿತ ಅವಧಿಯಲ್ಲಿ ಜಾರಿ ನಿರ್ದೇಶನಾಲಯವು ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿಲ್ಲ. ಹೀಗಾಗಿ, ಡೀಫಾಲ್ಟ್ ಜಾಮೀನು ಮಂಜೂರು ಮಾಡಬೇಕು ಮತ್ತು ವೈದ್ಯಕೀಯ ಆಧಾರದಲ್ಲಿ ಜಾಮೀನು ನೀಡಬೇಕು ಹಾಗೂ ಬಂಧನದ ಸಂದರ್ಭದಲ್ಲಿ ಪ್ರಕ್ರಿಯೆ ಪಾಲಿಸಿಲ್ಲ. ಹೀಗಾಗಿ ಬಿಡುಗಡೆ ಮಾಡಬೇಕು ಎಂದು ಕೋರಿದ್ದ ದಿನೇಶ್ ಕುಮಾರ್ ಅವರ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠವು ವಜಾಗೊಳಿಸಿದೆ. 18.12.2025ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಾಲಯವು ಮಂಗಳವಾರ ಪ್ರಕಟಿಸಿತು.
ದಿನೇಶ್ ಕುಮಾರ್ ಅವರಿಗೆ ಸೀಮಿತವಾಗಿ ಜಾರಿ ನಿರ್ದೇಶನಾಲಯವು ಸಕ್ಷಮ ನ್ಯಾಯಾಲಯಕ್ಕೆ 60 ದಿನಗಳ ಅವಧಿಯಲ್ಲಿ ಆರೋಪ ಪಟ್ಟಿ ಸಲ್ಲಿಸಿದೆ. ಬೇರೆಯವರ ವಿರುದ್ಧದ ತನಿಖೆ ನಡೆಯುತ್ತಿದೆ ಎಂಬುದು ದಿನೇಶ್ ಕುಮಾರ್‌ಗೆ ಡಿಫಾಲ್ಟ್ ಜಾಮೀನು ನೀಡಲು ಆಧಾರವಾಗಲ್ಲ. ವೈದ್ಯಕೀಯ ಜಾಮೀನು ಮಂಜೂರು ಮಾಡಲು ಬಲವಾದ ಆರೋಗ್ಯ ಸಮಸ್ಯೆಗಳು ಕಾಣುತ್ತಿಲ್ಲ. ಇನ್ನೂ ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಅವಳಿ ಪರೀಕ್ಷೆಯಲ್ಲಿ ದಿನೇಶ್ ನಪಾಸಾಗಿದ್ದಾರೆ. 16.09.2025ರಂದು ಬಂಧನವಾಗಿದ್ದು, ಇಂದಿನವರೆಗೆ 127 ದಿನ ಕಸ್ಟಡಿಯಲ್ಲಿರುವುದರಿಂದ ಸುದೀರ್ಘ ಅವಧಿಗೆ ಜೈಲಿನಲ್ಲಿದ್ದಾರೆ ಎಂದು ಹೇಳಲಾಗದು ಎಂದು ನ್ಯಾಯಾಲಯವು ಸಮರ್ಥನೆ ಒದಗಿಸಿದೆ. ಅಲ್ಲದೇ, ಮೂರು ತಿಂಗಳ ಬಳಿಕ ಜಾಮೀನು ಕೋರಿ ನೇರವಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯ ದಿನೇಶ್ ಕುಮಾರ್‌ಗೆ ಇರಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ದಿನೇಶ್ ಕುಮಾರ್ ಪರ ಹಿರಿಯ ವಕೀಲ ಸಂದೇಶ್ ಚೌಟ ಅವರು “ಮುಡಾದ ಮಾಜಿ ಆಯುಕ್ತ ದಿನೇಶ್ ಕುಮಾರ್ ಪ್ರಕರಣದ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ. ಮಾಜಿ ಆಯುಕ್ತ ಡಿ ಬಿ ನಟೇಶ್‌ಗೆ ಇ ಡಿ ಜಾರಿ ಮಾಡಿದ್ದ ಸಮನ್ಸ್ ವಜಾಗೊಳಿಸಲಾಗಿದೆ. ಇತರೆ ಆರೋಪಿಗಳಿಗೆ ನ್ಯಾಯಾಲಯಗಳು ರಕ್ಷಣೆ ಒದಗಿಸಿವೆ. ಅರ್ಜಿದಾರರನ್ನು ಏಕಾಂಗಿಯಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. 27.09.2024ರಂದು ಪ್ರಕರಣ ದಾಖಲಾಗಿದ್ದು, ಮೂಲ ಅಪರಾಧದ ವಿಚಾರಣೆ ವಿಳಂಬವಾಗಲಿದೆ. ಬಂಧಿಸುವಾಗ ನಿಯಮಗಳನ್ನು ಪಾಲಿಸಲಾಗಿಲ್ಲ” ಎಂದು ಆಕ್ಷೇಪಿಸಿದ್ದರು.
ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ಅವರು “ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಮೇಲ್ನೋಟಕ್ಕೆ ಸಾಕಷ್ಟು ಸಾಕ್ಷ್ಯಾಧಾರ ಲಭ್ಯವಾಗಿವೆ. ಈಗಾಗಲೇ ಆರೋಪ ಪಟ್ಟಿಯನ್ನು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಅದರಲ್ಲಿ ಎಲ್ಲಾ ವಿವರಗಳನ್ನು ಉಲ್ಲೇಖಿಸಲಾಗಿದೆ. ಆರೋಪಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ತನಿಖೆ ನಡೆಯುತ್ತಿದೆ. ಹೀಗಾಗಿ, ಅವರನ್ನು ಬಿಡುಗಡೆ ಮಾಡಬಾರದು” ಎಂದು ಕೋರಿದ್ದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಆಯುಕ್ತರಾಗಿದ್ದ ಅವಧಿಯಲ್ಲಿ ಜಿ ಟಿ ದಿನೇಶ್ ಕುಮಾರ್ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಅನರ್ಹರಿಗೆ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಈ ಸಂಬಂಧ ಪಿಎಂಎಲ್‌ಎ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯ 2025ರ ಸೆಪ್ಟೆಂಬರ್ 17ರಂದು ದಿನೇಶ್‌ರನ್ನು ಬಂಧಿಸಿತ್ತು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಆನಂತರ ಅಕ್ಟೋಬರ್ 5ರಂದು ದಿನೇಶ್ ಕುಮಾರ್‌ಗೆ ಸೇರಿದ ಸುಮಾರು 40 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇ ಡಿ ಮುಟ್ಟುಗೋಲು ಹಾಕಿಕೊಂಡಿತು. ಅಷ್ಟೇ ಅಲ್ಲದೆ, ಮುಡಾದ ಮಾಜಿ ಆಯುಕ್ತ ದಿನೇಶ್ ಕುಮಾರ್ ವಿರುದ್ಧ 2025ರ ನವೆಂಬರ್ 19ರಂದು ಆರೋಪಪಟ್ಟಿ ಸಹ ಸಲ್ಲಿಸಿತು. ಆಯುಕ್ತರಾಗಿದ್ದ ಸಮಯದಲ್ಲಿ ಅನರ್ಹರಿಗೆ ಒಟ್ಟು 450 ಕೋಟಿಗೂ ಅಧಿಕ ಬೆಲೆ ಬಾಳುವ 283 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.