Bangalore Riots 2020
Bangalore Riots 2020 
ಸುದ್ದಿಗಳು

ಬೆಂಗಳೂರು ಗಲಭೆಗಳು: ಆರೋಪಿತರ ಹೆಸರನ್ನು ಪ್ರಕಟಿಸುವಂತೆ ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್‌

Bar & Bench

ಆಗಸ್ಟ್‌ 11ರಂದು ಬೆಂಗಳೂರಿನಲ್ಲಿ ನಡೆದ ಗಲಭೆಗಳಿಗೆ ಸಂಬಂಧ ಬಂಧಿಸಲಾಗಿರುವ ಆರೋಪಿಗಳ ಹೆಸರನ್ನು ಬೆಂಗಳೂರು ನಗರ ಪೊಲೀಸ್ ನ‌ ಅಧಿಕೃತ ಅಂತರ್ಜಾಲ ತಾಣದಲ್ಲಿ ಪ್ರಕಟಿಸಲು ಕೋರಿ ಅರ್ಜಿದಾರರಾದ ವಕೀಲರು ನ್ಯಾಯಾಲಯವನ್ನು ಕೋರಿದ್ದರು. ಗಲಭೆಯ ಸಂಬಂಧ 71 ಎಫ್‌ಐಆರ್ ಗಳನ್ನು ದಾಖಲಿಸಲಾಗಿತ್ತು.

ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌ ಕಿಣಗಿ ಅವರ ಪೀಠವು ಹೀಗೆ ಹೇಳಿತು:

“ನಾವು ಈ ಮನವಿಯ ಕ್ಲಾಸ್‌ 1 ಗೆ ಅನುಮತಿ ನೀಡಿದರೆ, ಅದು ಅಪರಾಧದ (ಬೆಂಗಳೂರು ಗಲಭೆ) ಸಂಬಂಧ ಬಂಧಿಸಲಾಗಿರುವ ಅಥವಾ ಆರೋಪಿತರು ಎಂದು ಹೆಸರಿಸಲಾಗಿರುವ ವ್ಯಕ್ತಿಗಳ ಹೆಸರುಗಳಿಗೆ ವ್ಯಾಪಕ ಪ್ರಚಾರ ನೀಡಿದಂತಾಗುತ್ತದೆ. ಒಮ್ಮೆ ನಗರ ಪೊಲೀಸರ ಅಧಿಕೃತ ಅಂತರ್ಜಾಲ ತಾಣದಲ್ಲಿ ಹೆಸರುಗಳನ್ನು ಪ್ರಕಟಿಸಿದರೆ, ಹೆಸರುಗಳು ವೈರಲ್‌ ಆಗಲಿವೆ. ಇದು ಆರೋಪಿತರ ಖಾಸಗಿತನದ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ.”
ಕರ್ನಾಟಕ ಹೈಕೋರ್ಟ್‌

ಮನವಿ ಸಲ್ಲಿಸಿದ್ದ ಅರ್ಜಿದಾರರು, ತಾವು ಸ್ವಯಂ ಪ್ರೇರಣೆಯಿಂದ ಸಾರ್ವಜನಿಕ ಒಳಿತಿಗಾಗಿ ಉಚಿತ ಕಾನೂನು ಸೇವೆಯನ್ನು (ಪ್ರೊಬೊನೊ ಲಿಟಿಗೆಂಟ್) ಆರೋಪಿತರಿಗೆ ಒದಗಿಸಲು ಮುಂದಾಗಿರುವುದಾಗಿ ತಿಳಿಸಿದರು. ಡಿ ಕೆ ಬಸು ಪ್ರಕರಣದಲ್ಲಿ ರೂಪಿಸಲಾದ ಕಾನೂನಿನ್ವಯ ಪೊಲೀಸರು ನಡೆದುಕೊಳ್ಳದೆ ಇರುವುದರಿಂದ ಹಾಗೂ ಅಪರಾಧ ಪ್ರಕ್ರಿಯಾ ಸಂಹಿತೆಯ ನಿಯಮಾವಳಿಗಳನ್ನುಪಾಲಿಸದೆ ಇರುವುದರಿಂದ ಆರೋಪಿಗಳು ಅಸಹಾಯಕರಾಗಿದ್ದಾರೆ ಎಂದು ತಮ್ಮ ಮನವಿಯ ಸಮರ್ಥನೆ ಇಳಿದರು.

ಇದನ್ನು ಅಲ್ಲಗಳೆದ ಪೀಠವು ಹೀಗೆ ಅಭಿಪ್ರಾಯಪಟ್ಟಿತು:

“...ಅರ್ಜಿದಾರರು ಆರೋಪಿ ವ್ಯಕ್ತಿಗಳ ಅನುಕೂಲಕ್ಕಾಗಿ ಪ್ರಯತ್ನಿಸುತ್ತಿಲ್ಲ. ಹಾಗಾಗಿ, ಭಾರತದ ಸಂವಿಧಾನದ 226ನೇ ವಿಧಿಯನ್ವಯ ಈ ನ್ಯಾಯಾಲಯವು ತನಗಿರುವ ಅಪರಿಮಿತ ಅಧಿಕಾರವನ್ನು ಬಳಸುವಂತೆ ಅರ್ಜಿದಾರರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಕೋರಲು ಇದು ಸೂಕ್ತ ಪ್ರಕರಣವಲ್ಲ.”

ಇದೇ ವೇಳೆ, ಪೊಲೀಸರಿಂದ ಆರೋಪಿತರ ಹಕ್ಕುಗಳ ಉಲ್ಲಂಘನೆಯಾಗಿದೆ ಎನ್ನುವ ಮನವಿಯಲ್ಲಿನ ವಿಷಯದ ಬಗ್ಗೆ ನ್ಯಾಯಾಲಯವು ಮುಕ್ತವಾಗಿದೆ ಎಂದು ಪೀಠವು ಹೇಳಿತು.

ವಿಚಾರಣೆಯ ವೇಳೆ, ಅರ್ಜಿದಾರರ ಇಂಗಿತದ ಬಗ್ಗೆ ಗಂಭೀರ ಅನುಮಾನ ವ್ಯಕ್ತಪಡಿಸಿದ ಪೀಠವು, “ಅರ್ಜಿದಾರರ ಸದುದ್ದೇಶವು ಅವರ ಮನವಿಯಲ್ಲಿ ಪ್ರತಿಫಲಿತವಾಗಬೇಕು,” ಎಂದು ಅಸಮಾಧಾನ ಸೂಚಿಸಿ ಅರ್ಜಿಯನ್ನು ವಿಲೇವಾರಿ ಮಾಡಿತು.