Karnataka High Court
Karnataka High Court 
ಸುದ್ದಿಗಳು

ಅಪಘಾತ ಪ್ರಕರಣ: ಯುಕೆ ನ್ಯಾಯಾಲಯದ ಆದೇಶ ಜಾರಿಗೆ ನಿರಾಕರಿಸಿದ ಹೈಕೋರ್ಟ್‌; ಸಹಜ ತತ್ವ ಪಾಲನೆಯಾಗಿಲ್ಲ ಎಂದ ಪೀಠ

Bar & Bench

ಸುಮಾರು ಎರಡು ದಶಕಗಳ ಹಿಂದೆ ರಾಜ್ಯದಲ್ಲಿ ನಡೆದಿದ್ದ ಅಪಘಾತದಲ್ಲಿ ಗಾಯಗೊಂಡಿದ್ದ ಬ್ರಿಟಿಷ್ ದಂಪತಿಗೆ ಪರಿಹಾರ ನೀಡುವಂತೆ ಸೂಚಿಸಿದ್ದ ಲಂಡನ್ ನ್ಯಾಯಾಲಯವೊಂದರ ಆದೇಶವನ್ನು ಜಾರಿಗೊಳಿಸಲಾಗದು ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಹೇಳಿದೆ.

ಬ್ರಿಟಿಷ್‌ ಪ್ರಜೆಗಳಾದ ನಿಗೆಲ್ ರೋಡ್ರಿಕ್‌ ಲಾಯ್ಡ್ ಹರಡೈನ್ ಮತ್ತು ಕರೋಲ್ ಆನ್‌ ಹರಡೈನ್ ದಂಪತಿ 2002ರಲ್ಲಿ ರಾಜ್ಯದಲ್ಲಿ ಪ್ರವಾಸದಲ್ಲಿದ್ದಾಗ ಅವರು ಚಲಿಸುತ್ತಿದ್ದ ಕಾರಿಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ದಂಪತಿಯು ಅಪಘಾತದಿಂದ ಉಂಟಾದ ಹಾನಿಗೆ ಪರಿಹಾರವನ್ನು ಕೋರಿ ಯುನೈಟೆಡ್‌ ಕಿಂಗ್‌ಡಮ್‌ನ ಲಂಡನ್‌ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯ ಅವರ ಅರ್ಜಿ ಮಾನ್ಯ ಮಾಡಿ ಪರಿಹಾರ ನೀಡಲು ಕೆಎಸ್‌ಆರ್‌ಟಿಸಿಗೆ ನಿರ್ದೇಶನ ನೀಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಳ ನ್ಯಾಯಾಲಯ ನೀಡಿದ್ದ ಆದೇಶದ ವಿರುದ್ಧ ಕೆಎಸ್‌ಆರ್‌ಟಿಸಿ ಸಲ್ಲಿಸಿದ್ದ ಮೇಲ್ಮನವಿ ವೇಳೆ ಹೈಕೋರ್ಟ್‌ ಮೇಲಿನಂತೆ ಆದೇಶಿಸಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌ ಪಿ ಸಂದೇಶ್ ಅವರಿದ್ದ ನ್ಯಾಯಪೀಠ, ವಿಚಾರಣಾ ನ್ಯಾಯಾಲಯದಲ್ಲಿ ನಡೆದಿದ್ದ ವಿಚಾರಣೆ ವೇಳೆ ಸಲ್ಲಿಕೆಯಾಗಿದ್ದ ದಾಖಲೆಗಳ ಪರಿಶೀಲನೆ ನಡೆಸಿತು. ಈ ವೇಳೆ, ಲಂಡನ್ ನ್ಯಾಯಾಲಯ ಪರಿಹಾರ ಘೋಷಣೆ ಮಾಡುವುದಕ್ಕೂ ಮುನ್ನ ವಿಚಾರಾಣಾರ್ಹತೆಯನ್ನು ಆಧರಿಸಿಲ್ಲ ಹೀಗಾಗಿ ಆದೇಶ ಜಾರಿಗೊಳಿಸಲಾಗದು ಎಂದು ಹೇಳಿತು.

ಮುಂದುವರೆದು, ಅರ್ಜಿದಾರರು ವಿದೇಶಿ ನ್ಯಾಯಾಲಯದ ಆದೇಶದ ಪ್ರಮಾಣಿತ ಪತ್ರಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಕೇವಲ ನಕಲು ಪ್ರತಿಯನ್ನು ಸಲ್ಲಿಸಿದ್ದಾರೆ. ಆ ನ್ಯಾಯಾಲಯವು ವಿಚಾರಣಾರ್ಹತೆಯ ಆಧಾರದ ಮೇಲೆ ಆದೇಶ ನೀಡಿಲ್ಲ. ಅಲ್ಲದೆ, ಆ ಆದೇಶವನ್ನು ಹೊರಡಿಸುವ ಮುನ್ನ ಪ್ರತಿವಾದಿ ಸಲ್ಲಿಸಿದ್ದ ಆಕ್ಷೇಪಣೆಯನ್ನೂ ಸಹ ಪರಿಗಣಿಸಿಲ್ಲ ಎಂದು ಆದೇಶಿಸಿದೆ.

ವಿದೇಶಿ ನ್ಯಾಯಾಲಯದ ನೋಟಿಸ್‌ಗೆ ಕೆಎಸ್‌ಆರ್‌ಟಿಸಿ ಉತ್ತರ ನೀಡಿದ್ದರೂ ಸಹ ಅದನ್ನು ಆ ನ್ಯಾಯಾಲಯ ಪರಿಗಣಿಸಿಲ್ಲ . ವಿದೇಶಿ ನ್ಯಾಯಾಲಯವು ಯಾವುದೇ ವಿಚಾರಣಾರ್ಹತೆಯನ್ನು ಆಧರಿಸಿ ಹೊರಡಿಸಿಲ್ಲದ ಇಂತಹ ಆದೇಶವನ್ನು ಜಾರಿಗೊಳಿಸಲಾಗದು ಎಂದು ಪೀಠ ತಿಳಿಸಿದೆ.

ವಿದೇಶಿ ನ್ಯಾಯಾಲಯ ಸಹಜ ನ್ಯಾಯ ಪಾಲನೆ ಮಾಡಿಲ್ಲ. ಘಟನೆಗೆ ಕಾರಣಗಳನ್ನು ಉಲ್ಲೇಖಿಸುವಾಗ ಕೋರ್ಟ್ ವ್ಯಾಪ್ತಿ, ಕೆಎಸ್‌ಆರ್‌ಟಿಸಿ ಉತ್ತರ ಸೇರಿದಂತೆ ಯಾವ ವಿಚಾರಣಾರ್ಹ ಅಂಶಗಳನ್ನೂ ಸಹ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಹಾಗಾಗಿ ಆ ಆದೇಶ ಇಲ್ಲಿ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವ ನ್ಯಾಯಲಯ, ಪ್ರತಿವಾದಿ ದಂಪತಿ ವಿಚಾರಣಾ ನ್ಯಾಯಾಲಯದ ಮುಂದೆ ಸಲ್ಲಿಸಿರುವ ಅರ್ಜಿ ಮಾನ್ಯ ಮಾಡಲಾಗದು ಎಂದಿದೆ.

ಪ್ರಕರಣದ ಹಿನ್ನೆಲೆ :

ಬ್ರಿಟಿಷ್‌ ಪ್ರಜೆಗಳಾದ ನಿಗೆಲ್ ರೋಡ್ರಿಕ್‌ ಲಾಯ್ಡ್ ಹರಡೈನ್ ಮತ್ತು ಕರೋಲ್ ಆನ್‌ ಹರಡೈನ್ ದಂಪತಿ 2002ರ ಮಾ.18ರಂದು ಮೈಸೂರಿನಿಂದ ಗುಂಡ್ಲುಪೇಟೆಗೆ ಕಾರಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಕಾರು ಮತ್ತು ಕೆಎಸ್‌ಆರ್‌ಟಿಸಿ ಬಸ್ ನಡುವೆ ಢಿಕ್ಕಿ ಸಂಭವಿಸಿತ್ತು. ಘಟನೆಯಿಂದ ದಂಪತಿ ಗಾಯಗೊಂಡಿದ್ದರು. ಅವರು ಯುನೈಟೆಡ್ ಕಿಂಗ್‌ಡಂಗೆ ತೆರಳಿದ ನಂತರ ಅಲ್ಲಿನ ಎಕ್ಸೆಟೆರ್ ಕೌಂಟಿ ಕೋರ್ಟ್‌ನಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಅವರ ಅರ್ಜಿ ಮಾನ್ಯ ಮಾಡಿ ಪರಿಹಾರ ನೀಡುವಂತೆ ಕೆಎಸ್‌ಆರ್‌ಟಿಸಿಗೆ ನಿರ್ದೇಶನ ನೀಡಿತ್ತು.

ಮುಂದೆ ಈ ಆದೇಶ ಜಾರಿಗೊಳಿಸುವಂತೆ ಬೆಂಗಳೂರಿನ 25ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತ ಸೆಷನ್ಸ್ ನ್ಯಾಯಾಲಯಕ್ಕೆ ದಂಪತಿ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಯುಕೆ ನ್ಯಾಯಲಯದ ತೀರ್ಪು ಪ್ರಶ್ನಿಸಿ ಕೆಎಸ್‌ಆರ್‌ಟಿಸಿ ಸಲ್ಲಿಸಿದ್ದ ಅರ್ಜಿಯನ್ನು ಸಿಟಿ ಸಿವಿಲ್ ಕೋರ್ಟ್ ವಜಾಗೊಳಿಸಿ ಆದೇಶಿಸಿತ್ತು. ಹಾಗಾಗಿ ಕೆಎಸ್‌ಆರ್‌ಟಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.