ex CM B S Yediyurappa and Karnataka HC 
ಸುದ್ದಿಗಳು

ಬಿಎಸ್‌ವೈ ವಿರುದ್ಧದ ಪೋಕ್ಸೊ ಪ್ರಕರಣ: ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ವಿಚಾರಣಾಧೀನ ನ್ಯಾಯಾಲಯವು ಎರಡನೇ ಬಾರಿಗೆ ಸಂಜ್ಞೇ ಪರಿಗಣಿಸಿರುವುದನ್ನು ಪ್ರಶ್ನಿಸಿರುವ ಅರ್ಜಿಯ ಆದೇಶವನ್ನು ಹೈಕೋರ್ಟ್‌ ಇಂದು ಕಾಯ್ದಿರಿಸಿದೆ.

Bar & Bench

ಪೋಕ್ಸೊ ಪ್ರಕರಣದಲ್ಲಿ ಸಂಜ್ಞೇ ಪರಿಗಣಿಸಿರುವುದನ್ನು ರದ್ದುಪಡಿಸುವಂತೆ ಕೋರಿ ಬಿಜೆಪಿ ನಾಯಕ ಬಿ ಎಸ್‌ ಯಡಿಯೂರಪ್ಪ ಮತ್ತು ಇತರರು ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್‌ ಗುರುವಾರ ಆದೇಶ ಕಾಯ್ದಿರಿಸಿದೆ.

ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ಏಕಸದಸ್ಯ ಪೀಠವು ಆದೇಶ ಕಾಯ್ದಿರಿಸಿತು.

ಯಡಿಯೂರಪ್ಪ ಪರವಾಗಿ ವಾದಿಸಿದ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ಸಂತ್ರಸ್ತೆಯ ಹೇಳಿಕೆಯನ್ನು ಮಾತ್ರ ಪರಿಗಣಿಸಿ, ಸಂಜ್ಞೇ ಪರಿಗಣಿಸಲಾಗಿದೆ ಎಂದು ವಿಚಾರಣಾಧೀನ ನ್ಯಾಯಾಲಯ ಹೇಳಬೇಕಿತ್ತು. ಅದನ್ನೂ ಮಾಡಿಲ್ಲ. ಹೊಸದಾಗಿ ಪ್ರಕರಣವನ್ನು ಪರಿಗಣಿಸುವಂತೆ ಸಮನ್ವಯ ಪೀಠವು ವಿಚಾರಣಾಧೀನ ನ್ಯಾಯಾಲಯಕ್ಕೆ ಆದೇಶಿಸಿತ್ತು. ಇದನ್ನೂ ಮಾಡಲಾಗಿಲ್ಲ. ಸಂಜ್ಞೇ ಪರಿಗಣಿಸುವಾಗ ವಿಚಾರಣಾಧೀನ ನ್ಯಾಯಾಲಯದ ನ್ಯಾಯಾಧೀಶರು ವಿವೇಚನೆ ಬಳಸಿಲ್ಲ” ಎಂದರು.

ಪ್ರಾಸಿಕ್ಯೂಷನ್‌ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಸಂತ್ರಸ್ತೆಯ ತಾಯಿ ಮತ್ತು ಯಡಿಯೂರಪ್ಪ ನಡುವಿನ ಆಡಿಯೊ ರೆಕಾರ್ಡಿಂಗ್‌ ನಾಶಪಡಿಸಲಾಗಿದೆ. ಅದು ಇಲ್ಲ ಎಂದಾದರೆ ಯಡಿಯೂರಪ್ಪ ಅವರು ಎರಡು ಲಕ್ಷ ರೂಪಾಯಿಯನ್ನು ಸಂತ್ರಸ್ತೆಗೆ ಏಕೆ ನೀಡಿದ್ದರು? ಸಂತ್ರಸ್ತೆಯ ತಾಯಿಯ ಮೊಬೈಲ್‌ ಕಸಿದು ಸಹ ಆರೋಪಿ ಅರುಣ್‌ ಎಂಬವರು ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಲಾಗಿದ್ದ ಆಡಿಯೊ ರೆಕಾರ್ಡಿಂಗ್‌ ಡಿಲೀಟ್‌ ಮಾಡಿಸಿದ್ದಾರೆ. ಆದರೆ, ಸಂತ್ರಸ್ತೆ ಮೊಬೈಲ್‌ನಲ್ಲಿ ಅಸಲಿ ಆಡಿಯೊ ಇದೆ” ಎಂದರು.

ಮುಂದುವರಿದು, “ಈ ಆಡಿಯೊದಲ್ಲಿರುವ ಧ್ವನಿಯು ಯಡಿಯೂರಪ್ಪ ಅವರದ್ದೇ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಖಾತರಿಪಡಿಸಿದೆ. ಸಂತ್ರಸ್ತೆಯನ್ನು ಖಾಸಗಿ ಕೊಠಡಿಗೆ ಕರೆದೊಯ್ದು ಬಿಎಸ್‌ವೈ ಆಕೆಯ ಎದೆಯನ್ನು ಅದುಮಿದ್ದಾರೆ. ಸಂಜ್ಞೇ ಪರಿಗಣಿಸುವಾಗ ವಿಚಾರಣಾಧೀನ ನ್ಯಾಯಾಲಯವು ಇದನ್ನು ಪರಿಣಿಸಿದೆ. ಆನಂತರ ಸಂತ್ರಸ್ತೆಯು ಅಳುತ್ತಾ ಹೊರಬಂದಿದ್ದಾರೆ. ಇದನ್ನೂ ನ್ಯಾಯಾಲಯ ಪರಿಗಣಿಸಿದೆ” ಎಂದರು.

ವಾದ ಆಲಿಸಿದ ನ್ಯಾಯಾಲಯವು ಆದೇಶ ಕಾಯ್ದಿರಿಸಲಾಗಿದೆ. ವಾಸ್ತವಿಕ ಅಂಶಗಳಿಗೆ ಸಂಬಂಧಿಸಿದ ವಿವರಣೆಯನ್ನು (ಶನಿವಾರ) ನೀಡಲಾಗುವುದು ಎಂದು ಮೌಖಿಕವಾಗಿ ಹೇಳಿತು.

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಸಂಬಂಧ ಸಂತ್ರಸ್ತೆಯ ತಾಯಿ 2024ರ ಮಾರ್ಚ್‌ 14ರಂದು ಸದಾಶಿವನಗರ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರು. ಆ ದೂರು ಆಧರಿಸಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ನಂತರ ಪ್ರಕರಣ ಸಿಐಡಿಗೆ ತನಿಖೆ ವರ್ಗಾವಣೆಯಾಗಿತ್ತು. ಸಿಐಡಿ ಪೊಲೀಸರು ಯಡಿಯೂರಪ್ಪ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು.

ಪೋಕ್ಸೊ ಪ್ರಕರಣದಲ್ಲಿ ಮೊದಲ ಬಾರಿಗೆ ಸಂಜ್ಞೇ ಪರಿಗಣಿಸಿದ್ದನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಹೊಸದಾಗಿ ಸಂಜ್ಞೇ ಪರಿಗಣಿಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ನಿರ್ದೇಶಿಸಿತ್ತು. ಈಗ ಎರಡನೇ ಬಾರಿಗೆ ಯಡಿಯೂರಪ್ಪ ಮತ್ತಿತರರು ಮತ್ತೇ ಸಂಜ್ಞೇ ಪರಿಗಣಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿದ್ದಾರೆ. ಎರಡನೇ ಸುತ್ತಿನ ಆದೇಶವನ್ನು ನ್ಯಾಯಾಲಯವು ಈಗ ಕಾಯ್ದಿರಿಸಿದೆ.