Menstrual Leave Policy  
ಸುದ್ದಿಗಳು

ಮಹಿಳಾ ನೌಕರರಿಗೆ ಮಾಸಿಕ ಒಂದು ದಿನ ಋತುಚಕ್ರದ ರಜೆ: ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಮಹಿಳೆಯರ ಆರೋಗ್ಯ ಮತ್ತು ಘನತೆಯ ದೃಷ್ಟಿಯಿಂದ ಋತುಚಕ್ರ ರಜೆ ನೀತಿ ಜಾರಿಗೆ ತರಲಾಗಿದೆ. ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದ ಎಜಿ.

Bar & Bench

ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯಿದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಮಾಸಿಕ ಒಂದು ದಿನದ ವೇತನಸಹಿತ ಋತುಚಕ್ರದ ರಜೆ ನೀಡುವ ಸಂಬಂಧ ಸರ್ಕಾರ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿದ ಕರ್ನಾಟಕ ಹೈಕೋರ್ಟ್ ಗುರುವಾರ ತೀರ್ಪನ್ನು ಕಾಯ್ದಿರಿಸಿದೆ.

ಮಾಸಿಕ ಒಂದು ದಿನ ವೇತನಸಹಿತ ಋತುಚಕ್ರ ರಜೆ ಸಂಬಂಧ ಕಾರ್ಮಿಕ ಇಲಾಖೆ 2025ರ ನವೆಂಬರ್ 20ರಂದು ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಕರ್ನಾಟಕ ಎಂಪ್ಲಾಯರ್ಸ್ ಅಸೋಸಿಯೇಷನ್, ಬೆಂಗಳೂರು ಹೋಟೆಲ್‌ಗಳ ಸಂಘ, ಅವಿರತ ಡಿಫೆನ್ಸ್ ಸಿಸ್ಟಮ್, ಬೆಂಗಳೂರು ಎಂಪ್ಲಾಯರ್ಸ್ ಅಸೋಸಿಯೇಷನ್ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು  ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice Anant Ramanath Hegde

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೋಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಆರೋಗ್ಯದ ವಿಷಯವು ಸಂವಿಧಾನದ ಸಮವರ್ತಿ ಪಟ್ಟಿ (ಕನ್ಕರೆಂಟ್ ಲಿಸ್ಟ್) ಅಡಿ ಬರುತ್ತದೆ. ಅದರಂತೆ ಸಂವಿಧಾನದ 162ನೇ ವಿಧಿ ಪ್ರಕಾರ ರಾಜ್ಯ ಸರ್ಕಾರಕ್ಕೆ ತೀರ್ಮಾನ ಕೈಗೊಳ್ಳುವ ಅಧಿಕಾರವಿರಲಿದೆ. ಈ ವಿಚಾರದಲ್ಲಿ ಒಕ್ಕೂಟ ವ್ಯವಸ್ಥೆಯ ಪ್ರಶ್ನೆ ಉದ್ಭವಿಸುವುದಿಲ್ಲ. ತಜ್ಞರ ಸಮಿತಿಯ ವರದಿ ಆಧಾರದಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ತಜ್ಞರ ಸಮಿತಿ ಅರ್ಜಿದಾರರ ಅಹವಾಲು, ಆಕ್ಷೇಪ, ಸಲಹೆಗಳನ್ನು ಆಲಿಸಿದೆ. ಕಾನೂನು ಆಯೋಗ ಸಹ ಇದರ ಶಿಫಾರಸ್ಸು ಮಾಡಿತ್ತು. ಇದೆಲ್ಲದರ ಮಿಗಿಲಾಗಿ ಮಹಿಳೆಯರ ಆರೋಗ್ಯ ಮತ್ತು ಘನತೆಯ ದೃಷ್ಟಿಯಿಂದ ಋತುಚಕ್ರ ರಜೆ ನೀತಿ ಜಾರಿಗೆ ತರಲಾಗಿದೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿರುವ ವಿಷಯಗಳಲ್ಲಿ ರಾಜ್ಯ ಸರ್ಕಾರ ಸೀಮಿತ ಸಂದರ್ಭಗಳಲ್ಲಿ ತೀರ್ಮಾನ ಕೈಗೊಳ್ಳಬಹುದು. ಆದರೆ, ಅದಕ್ಕೆ ಸ್ವತಂತ್ರ ಮತ್ತು ವ್ಯಾಪಕ ಅಧಿಕಾರ ಇರುವುದಿಲ್ಲ. ರಾಜ್ಯಪಾಲರು ಅನುಮೋದನೆ ಅಗತ್ಯವಾಗಿದೆ. ರಾಜ್ಯ ಸರ್ಕಾರದ ಈ ಆದೇಶವು ಸಂವಿಧಾನದ 14ನೇ ವಿಧಿ ಅಡಿಯ ಸಮಾನತೆ ಹಕ್ಕಿಗೆ ವಿರುದ್ಧವಾಗಿದೆ. ಲಿಂಗ ತಾರತಮ್ಯಗೆ ಎಡೆ ಮಾಡಿಕೊಡುತ್ತದೆ. ಮಹಿಳೆಯರು ಪುರುಷರಿಗಿಂತ ದುರ್ಬಲರು ಎಂಬ ಭಾವನೆಯನ್ನು ಉದ್ಯೋಗದಾತರಲ್ಲಿ ಮೂಡಿಸುತ್ತದೆ. ಇದರಿಂದ ಮಹಿಳಾ ಉದ್ಯೋಗಿಗಳನ್ನು ನೇಮಕ ಮಾಡಲು ಹಾಗೂ ಬಡ್ತಿಗೆ ಕಂಪೆನಿಗಳು ಹಿಂದೇಟು ಹಾಕುತ್ತವೆ.  ಋತುಚಕ್ರ ಸಮಯದಲ್ಲಿ ಮಾಸಿಕ‌ ಒಂದು ದಿನ ಕಡ್ಡಾಯ ರಜೆ ನೀಡುವುದರಿಂದ ಸ್ಪರ್ಧಾತ್ಮಕ ವೃತ್ತಿ ಜೀವನದಲ್ಲಿ ಮಹಿಳೆಯರಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಉದ್ಯೋಗದಾತರಿಗೆ ಹೊರೆ ಹೆಚ್ಚುತ್ತದೆ. ಮಹಿಳಾ ಉದ್ಯೋಗಿಗಳ ದಕ್ಷತೆ ಕಡಿಮೆ ಮಾಡುತ್ತದೆ. ಮಹಿಳಾ ನೌಕರರ ಸಬಲೀಕರಣಕ್ಕೂ ಅಡ್ಡಿಯಾಗುತ್ತದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ಸುದೀರ್ಘವಾದ ವಾದ-ಪ್ರತಿವಾದ ಆಲಿಸಿದ ಪೀಠವು ಆದೇಶ ಕಾಯ್ದಿರಿಸಿತು.