ಸುದ್ದಿಗಳು

ಕರ್ನಾಟಕ ಭೂಸುಧಾರಣೆ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ವಜಾ ಮನವಿಗೆ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಬಯಸಿದ ಹೈಕೋರ್ಟ್

ಭೂಸುಧಾರಣೆ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯಿಂದ ಕಡಿಮೆ ದರಕ್ಕೆ ರೈತರಿಂದ ಭೂಮಿ ಖರೀದಿ ನಡೆಯಲಿದೆ. ಇದು 1960ಕ್ಕೂ ಮುನ್ನ ಜಾರಿಯಲ್ಲಿದ್ದ ಜಮೀನ್ದಾರಿ ಪದ್ದತಿಗೆ ಮತ್ತೊಮ್ಮೆ ನಾಂದಿ ಹಾಡಲಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

Bar & Bench

ಕರ್ನಾಟಕ ಭೂಸುಧಾರಣಾ (ತಿದ್ದುಪಡಿ) ಸುಗ್ರೀವಾಜ್ಞೆ -2020ರ (ನಾಗರಾಜ ಶೇಷಪ್ಪ ಹೊಂಗಲ್ v. ಕರ್ನಾಟಕ ಸರ್ಕಾರ) ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಿದ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ವಿಭಾಗೀಯ ಪೀಠವು ರಾಜ್ಯ ಸರ್ಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದ್ದು, ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 18ಕ್ಕೆ ಮುಂದೂಡಿದೆ.

ಜುಲೈ 13,2020ರಂದು ಹೊರಡಿಸಲಾದ ಸುಗ್ರೀವಾಜ್ಞೆಯಲ್ಲಿ ಕರ್ನಾಟಕ ಭೂಸುಧಾರಣಾ ಕಾಯ್ದೆ-1961ಯ ಸೆಕ್ಷನ್ 79ಎ, 79ಬಿ ಮತ್ತು 79ಸಿ ಅನ್ನು ತೆಗೆದು ಹಾಕುವ ಮೂಲಕ ಕೃಷಿಯೇತರರಿಗೆ ಕೃಷಿ ಭೂಮಿ ಖರೀದಿಸಿಲು ಇದ್ದ ಆದಾಯ ಮಿತಿಯನ್ನು ರದ್ದುಗೊಳಿಸಲಾಗಿದೆ ಎಂದು ಪಿಐಎಲ್ ನಲ್ಲಿ ತಿಳಿಸಲಾಗಿದೆ.

ಹಿಂದೆ ಭೂಮಿಯ ವಾರಸುದಾರಿಕೆ ಹೊಂದುವುದರಲ್ಲಿ ಸಾಕಷ್ಟು ಅಸಮಾನತೆ ಇದ್ದುದರಿಂದ ಕೃಷಿ ಉತ್ಪಾದನೆಗೆ ಹೊಡೆತ ಬೀಳುತ್ತಿತ್ತು. ಈ ಅಸಮಾನತೆಯನ್ನು ಸರಿದೂಗಿಸಲು ಭೂಮಿ ಖರೀದಿಸುವ ಮಿತಿಯಲ್ಲಿ ಬದಲಾವಣೆ ತರಲಾಗಿದೆ. ಸದ್ಯ ತರಲಾಗಿರುವ ತಿದ್ದುಪಡಿಯಲ್ಲಿ ಸೆಕ್ಷನ್ 63ರ ಪ್ರಕಾರ ಭೂಮಿ ಖರೀದಿಸುವ ಮಿತಿಯನ್ನು ದ್ವಿಗುಣಗೊಳಿಸಲಾಗಿದೆ. ಇದು ಭೂಸುಧಾರಣಾ ಕಾಯ್ದೆಯನ್ನೇ ವಿಫಲಗೊಳಿಸುವ ಯತ್ನವಾಗಿದೆ ಎಂದು ಪಿಐಎಲ್ ನಲ್ಲಿ ಆಕ್ಷೇಪಿಸಲಾಗಿದೆ.

ಕಾಯ್ದೆಯಲ್ಲಿ ತರಲಾಗಿರುವ ಬದಲಾವಣೆಯಿಂದ ರೈತರು ಭೂಮಿ ಮಾರಾಟ ಮಾಡುವಂತೆ ಒತ್ತಡ ಹೆಚ್ಚಾಗಲಿದ್ದು, ಕೃಷಿ ಉತ್ಪಾದನೆಗೆ ಸಾಕಷ್ಟು ಬಂಡವಾಳ ಹೂಡಿಕೆ ಮಾಡಬೇಕಾಗಿರುವುದರಿಂದ ಭವಿಷ್ಯದಲ್ಲಿ ಯಾವುದೇ ರೈತರು ಜಮೀನು ಖರೀದಿಸುವ ಸ್ಥಿತಿ ಸೃಷ್ಟಿಯಾಗುವುದಿಲ್ಲ ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಮುಂದುವರೆದು ಅರ್ಜಿಯಲ್ಲಿ ಹೀಗೆ ವಿವರಿಸಲಾಗಿದೆ:

“ಕರ್ನಾಟಕ ಭೂಸುಧಾರಣೆ ಕಾಯ್ದೆಯು ಉಳುವವನೇ ಭೂಮಿಯ ಒಡೆಯ ಎಂಬ ಹಕ್ಕು ನೀಡಿದೆ. ಭೂಮಿಯ ಹಿಡುವಳಿಯು ಅನುವಂಶಿಕವಾಗಿದೆ. ಕಾಯ್ದೆಯ ಇತರೆ ಅಂಶಗಳೆಂದರೆ ಭೂ ಹಿಡುವಳಿಯ ಮೇಲಿನ ಮಿತಿ ಮತ್ತು ಕೃಷಿ ಭೂಮಿ ಖರೀದಿಸಲು ನಿರ್ದಿಷ್ಟ ಅರ್ಹತೆಗಳಿರಬೇಕು ಎನ್ನುವುದು. ಈ ಮೂರು ಅಂಶಗಳು ಒಗ್ಗೂಡಿ ಕರ್ನಾಟಕ ಭೂಸುಧಾರಣಾ ಕಾಯ್ದೆಯ ಆತ್ಮವಾಗಿವೆ. ಈ ಅಂಶಗಳನ್ನು ಸಡಿಲಗೊಳಿಸಿದರೆ/ತೆರವುಗೊಳಿಸಿದರೆ ಭೂಸುಧಾರಣಾ ಕಾಯ್ದೆ ಎಂದು ಕರೆಯಲು ಅಗತ್ಯವಾದ ಗುಣವನ್ನೇ ಶಾಸನ ಹೊಂದಿರುವುದಿಲ್ಲ...

...ತಿದ್ದುಪಡಿ ಕಾಯ್ದೆಯಿಂದ ಕಡಿಮೆ ದರಕ್ಕೆ ಭೂಮಿ ಖರೀದಿಸುವ ನೀತಿ ಜಾರಿಗೆ ಬರಲಿದ್ದು,ಇದು 1960ಕ್ಕೂ ಮುನ್ನ ಜಾರಿಯಲ್ಲಿದ್ದ ಜಮೀನ್ದಾರಿ ವ್ಯವಸ್ಥೆಯನ್ನು ಮರು ಸ್ಥಾಪಿಸಲಿದೆ. ಇದು ನವ ಭೂಮಾಲೀಕತ್ವಕ್ಕೆ ನಾಂದಿಯಾಗಲಿದ್ದು, 1961ರ ಭೂಸುಧಾರಣಾ ಕಾಯ್ದೆಯ ಉದ್ದೇಶಗಳನ್ನೇ ವಿಫಲಗೊಳಿಸಲಿದೆ”.

ಯಾವುದೇ ಸಂಶೋಧನೆ ನಡೆಸದೆ ಸದರಿ ಆಜ್ಞೆಯನ್ನು ಸಿದ್ಧಪಡಿಸಲಾಗಿದ್ದು, ಇದು ನಿರಂಕುಶತೆಯಿಂದ ಕೂಡಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಸದರಿ ಆಜ್ಞೆಯು ಸಂವಿಧಾನದತ್ತವಾಗಿ ಬಂದಿರುವ ಪರಿಚ್ಛೇದ 14, 19 ಮತ್ತು 21ಕ್ಕೆ ವಿರುದ್ಧವಾಗಿವೆ. ಉದ್ದೇಶಿತ ಸುಗ್ರೀವಾಜ್ಞೆಯಿಂದ ವ್ಯಾಪಕವಾದ ಬಂಡವಾಳ ಕೃಷಿಗೆ ಹರಿದು ಬರಲಿದ್ದು, ಸಾಮಾನ್ಯ ರೈತರ ಬದುಕನ್ನು ಮೂರಾಬಟ್ಟೆಯಾಗಿಸಲಿದೆ. ರೈತರ ಹಿತಾಸಕ್ತಿಗೆ ಕುತ್ತುಂಟು ಮಾಡಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಭೂಸುಧಾರಣೆ (ತಿದ್ದುಪಡಿ)-2020 ಸುಗ್ರೀವಾಜ್ಞೆಯನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.