Karnataka HC and Justice Rajendra Badamikar 
ಸುದ್ದಿಗಳು

ಪೋಕ್ಸೊ ಕಾಯಿದೆ ವೈಯಕ್ತಿಕ ಕಾನೂನಿಗಿಂತ ಪ್ರಮುಖವಾದದ್ದು ಎಂದ ಕರ್ನಾಟಕ ಹೈಕೋರ್ಟ್;‌ ಆರೋಪಿಗೆ ಜಾಮೀನು ಮಂಜೂರು

ಸಂತ್ರಸ್ತೆಗೆ 17 ವರ್ಷವಾಗಿದ್ದು, ಅವರು ವಿಚಾರಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಒಪ್ಪಿಗೆ ಪಡೆಯದೇ ಮದುವೆ ಮಾಡಲಾಗಿದೆ ಎಂದು ಸಂತ್ರಸ್ತೆ ಹೇಳಿದರೂ ಅದನ್ನು ಸಾಕ್ಷೀಕರಿಸುವ ಯಾವುದೇ ದಾಖಲೆಗಳು ಇಲ್ಲ ಎಂದಿರುವ ಪೀಠ.

Bar & Bench

ಮೊಹಮ್ಮದೀಯ ವೈಯಕ್ತಿಕ ಕಾನೂನಿನ ಪ್ರಕಾರ ಹೆಣ್ಣು ಮಕ್ಕಳು ಮೈ ನೆರೆಯುವುದನ್ನು ವಿವಾಹಕ್ಕೆ ಪರಿಗಣಿಸಲಾಗುತ್ತದೆ. ಇಲ್ಲಿ 15ನೇ ವಯಸ್ಸನ್ನು ಮೈನೆರೆಯುವ ವಯಸ್ಸು ಎಂದು ಪರಿಗಣಿಸಲಾಗುತ್ತದೆ.  ಹೀಗಾಗಿ, ಬಾಲ್ಯ ವಿವಾಹ ತಡೆ ಕಾಯಿದೆ ಅಡಿ ಅದು ಅಪರಾಧವಲ್ಲ ಎಂಬ ವಾದವನ್ನು ಕರ್ನಾಟಕ ಹೈಕೋರ್ಟ್‌ ತಿರಸ್ಕರಿಸಿದೆ. ಇದೇ ವೇಳೆ, ವಿಶೇಷ ಕಾಯಿದೆಯಾದ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣಾ ಕಾಯಿದೆಯು (ಪೋಕ್ಸೊ ಕಾಯಿದೆ) ವೈಯಕ್ತಿಕ ಕಾನೂನನ್ನು ಮೀರಿದ್ದಾಗಿದೆ ಎಂದು ಪೀಠವು ಅಭಿಪ್ರಾಯಪಟ್ಟಿದೆ.

17 ವರ್ಷದ ಅಪ್ರಾಪ್ತೆಯನ್ನು ವಿವಾಹವಾಗಿ ಗರ್ಭಿಣಿಯಾಗಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಬೆಂಗಳೂರಿನ ಕೆ ಆರ್ ಪುರದ ಅಲೀಂ ಪಾಷಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

“ಅರ್ಜಿದಾರ ಪಾಷಾ ಅವರನ್ನು ಪ್ರತಿನಿಧಿಸಿದ್ದ ವಕೀಲ ಎಂ ಬಸವಣ್ಣ ಅವರು ಮೊಹಮದೀಯ ಕಾನೂನಿನ ಪ್ರಕಾರ ಹೆಣ್ಣು ಮಕ್ಕಳು ಮೈ ನೆರೆಯುವುದನ್ನು ವಿವಾಹಕ್ಕೆ ಪರಿಗಣಿಸಲಾಗುತ್ತದೆ. ಇಲ್ಲಿ 15ನೇ ವಯಸ್ಸನ್ನು ಮೈನೆರೆಯುವ ವಯಸ್ಸು ಎಂದು ಪರಿಗಣಿಸಲಾಗುತ್ತದೆ.  ಹೀಗಾಗಿ, ಬಾಲ್ಯ ವಿವಾಹ ನಿರ್ಬಂಧ ಕಾಯಿದೆಯ ಸೆಕ್ಷನ್‌ 9 ಮತ್ತು 10ರ ಅಡಿ ಅದು ಅಪರಾಧವಲ್ಲ ಎಂದು ವಾದಿಸಿದ್ದರು. ಅದರೆ, ಇದನ್ನು ಮಾನ್ಯ ಮಾಡದ ನ್ಯಾಯಾಲಯವು ಪೋಕ್ಸೊ ಕಾಯಿದೆ ವಿಶೇಷವಾದದ್ದಾಗಿದ್ದು, ಇದು ವೈಯಕ್ತಿಕ ಕಾನೂನನ್ನು ಮೀರಿದ್ದಾಗಿದೆ. ಪೋಕ್ಸೊ ಕಾಯಿದೆ ಅಡಿ ಲೈಂಗಿಕ ಚಟುವಟಿಕೆ ನಡೆಸುವ ವಯಸ್ಸು 18 ಆಗಿರುತ್ತದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ. ಅದರೆ ಇದೇ ವೇಳೆ ನ್ಯಾಯಾಲಯವು ಅರ್ಜಿದಾರನಿಗೆ ಜಾಮೀನು ನೀಡಲು ಯಾವುದೇ ಅಡ್ಡಿಯಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿತು.

“ಸಂತ್ರಸ್ತೆಗೆ 17 ವರ್ಷವಾಗಿದ್ದು, ಅವರು ವಿಚಾರಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಒಪ್ಪಿಗೆ ಪಡೆಯದೇ ಮದುವೆ ಮಾಡಲಾಗಿದೆ ಎಂದು ಸಂತ್ರಸ್ತೆ ಹೇಳಿದರೂ ಅದನ್ನು ಸಾಕ್ಷೀಕರಿಸುವ ಯಾವುದೇ ದಾಖಲೆಗಳು ಇಲ್ಲ. ಪೋಷಕರ ಪ್ರಭಾವಕ್ಕೆ ಒಳಗಾಗಿದ್ದರೂ ಸಂತ್ರಸ್ತೆಯೂ ಒಪ್ಪಿಗೆ ನೀಡಿದ್ದಾರೆ ಎಂಬುದು ದೃಢವಾಗಿದೆ. ಅರ್ಜಿದಾರ ಸಂತ್ರಸ್ತೆಯ ಪತಿಯಾಗಿದ್ದು, ಮದುವೆಯ ಬಗ್ಗೆ ಯಾವುದೇ ತೆರನಾದ ಗಂಭೀರ ವಿವಾದಗಳು ಇಲ್ಲ. ಏಕೆಂದರೆ ಅರ್ಜಿದಾರನೇ ವಿಚಾರಣಾಧೀನ ನ್ಯಾಯಾಲಯದ ಮುಂದೆ ಮದುವೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪ್ರಸ್ತುತಪಡಿಸಿದ್ದಾನೆ. ಈ ನೆಲೆಯಲ್ಲಿ ಅರ್ಜಿದಾರ ಸಾಕ್ಷ್ಯ ನಾಶಪಡಿಸುತ್ತಾನೆ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ವಿವಾಹ ಸಂಬಂಧವನ್ನು ಪರಿಗಣಿಸಿ, ಅರ್ಜಿದಾರನಿಗೆ ಜಾಮೀನು ನೀಡಲು ಯಾವುದೇ ಸಮಸ್ಯೆಯಿಲ್ಲ. ಸಂತ್ರಸ್ತೆಯು ಗರ್ಭಿಣಿಯಾಗಿದ್ದು, ಸೂಕ್ತವಾದ ಬೆಂಬಲ ಅಗತ್ಯವಿದ್ದು, ಅರ್ಜಿದಾರ ಪತ್ನಿಯ ಆರೈಕೆ ಮಾಡಬೇಕಿದೆ” ಎಂದು ಪೀಠವು ಜಾಮೀನು ನೀಡುವ ವೇಳೆ ವಿವರಿಸಿತು.

ಸರ್ಕಾರದ ವಕೀಲರು ವ್ಯಕ್ತಪಡಿಸಿರುವ ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ ಅರ್ಜಿದಾರ ಒಂದು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್, ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ಸಾಕ್ಷ್ಯ ನಾಶ ಪಡಿಸಬಾರದು. ಕ್ರಿಮಿನಲ್‌ ಚಟುವಟಿಕೆಯಲ್ಲಿ ಭಾಗಿಯಾಗಬಾರದು, ಪ್ರಕರಣ ಇತ್ಯರ್ಥಪಡಿಸಲು ಸಹಕಾರ ನೀಡಬೇಕು. ಪೂರ್ವಾನುಮತಿಯಿಲ್ಲದೆ ವಿಚಾರಣಾಧೀನ ನ್ಯಾಯಾಲಯದ ವ್ಯಾಪ್ತಿ ತೊರೆಯುವಂತಿಲ್ಲ. ಪ್ರಕರಣದ ವಿಚಾರಣೆಯ ದಿನ ನ್ಯಾಯಾಲಯಕ್ಕೆ ತಪ್ಪದೇ ಹಾಜರಾಗಬೇಕು ಎಂಬ ಷರತ್ತು ವಿಧಿಸಿದೆ.

ಪ್ರಕರಣದ ಹಿನ್ನೆಲೆ: 2022ರ ಜೂನ್‌ 16ರಂದು ಅರ್ಜಿದಾರನ ಪತ್ನಿಯಾದ ಸಂತ್ರಸ್ತೆಯು ಬೆಂಗಳೂರಿನ ರಾಮಮೂರ್ತಿ ನಗರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ತಪಾಸಣೆ ನಡೆಸಿದಾಗ ಆಕೆ ಗರ್ಭಿಣಿಯಾಗಿದ್ದಾಳೆ ಎಂದು ಖಾತರಿಯಾಗಿತ್ತು. ಆಕೆಯು 2004ರ ಜುಲೈ 27ರಂದು ಜನಿಸಿದ್ದು, 17 ವರ್ಷ ಮಾತ್ರವಾಗಿದೆ. ಅಪ್ರಾಪ್ತೆಯಾಗಿದ್ದಾಗ ಮದುವೆ ಮಾಡಲಾಗಿದ್ದು, ಅರ್ಜಿದಾರನ ಜೊತೆ ದೈಹಿಕ ಸಂಬಂಧ ಹೊಂದಿದ್ದರಿಂದ ಆಕೆ ಗರ್ಭಿಣಿಯಾಗಿದ್ದಾಳೆ ಎಂದು ವೈದ್ಯಾಧಿಕಾರಿ ನೀಡಿದ ಮಾಹಿತಿ ಆಧರಿಸಿ ಕೆ ಆರ್‌ ಪುರಂ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಅವರು ಬಾಲ್ಯ ವಿವಾಹ ತಡೆ ಕಾಯಿದೆ ಸೆಕ್ಷನ್‌ಗಳಾದ 9 ಮತ್ತು 10 ಹಾಗೂ ಪೋಕ್ಸೊ ಕಾಯಿದೆಯ ಸೆಕ್ಷನ್‌ಗಳಾದ 4 ಮತ್ತು 6ರ ಅಡಿ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಇದರ ಭಾಗವಾಗಿ ಅರ್ಜಿದಾರರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಹೀಗಾಗಿ, ಆರೋಪಿಯು ಸೆಷನ್ಸ್‌ ನ್ಯಾಯಾಲಯದಲ್ಲಿ ಜಾಮೀನು ಕೋರಿದ್ದರು. ಇದನ್ನು ತಿರಸ್ಕರಿಸಿದ್ದರಿಂದ ಹೈಕೋರ್ಟ್‌ ಮೆಟ್ಟಿಲೇರಿದ್ದರು.