ಬೆಂಗಳೂರಿನ ಕುಮಾರ ಪಾರ್ಕ್ ಪಶ್ಚಿಮದಲ್ಲಿರುವ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ (ಬಿಡಿಎ) ಪ್ರಧಾನ ಕಚೇರಿ ತೆರವುಗೊಳಿಸಿ ಆ ಜಾಗದಲ್ಲಿ ಸುವರ್ಣ ಮಹೋತ್ಸವದ ಅಂಗವಾಗಿ ಆಧುನಿಕ ಕಟ್ಟಡವನ್ನು ನಿರ್ಮಿಸಲು ಕೈಗೊಂಡಿರುವ ನಿರ್ಣಯ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಬಿಡಿಎಗೆ ಗುರುವಾರ ನೋಟಿಸ್ ಜಾರಿ ಮಾಡಿದೆ.
ಸಾಮಾಜಿಕ ಕಾರ್ಯಕರ್ತರಾದ ಬಿ ಎಂ ಶಿವಕುಮಾರ್ ಮತ್ತು ಎಚ್ ಶಿವರಾಮ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಕೆ ಎಸ್ ಭರತ್ ಕುಮಾರ್ ಅವರ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಬಳಿಕ ನ್ಯಾಯಾಲಯ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.
1978ರಲ್ಲಿ ಬಿಡಿಎ ಕೇಂದ್ರ ಕಚೇರಿಯ ಆರಂಭಿಕ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಪ್ರಾಧಿಕಾರದ ಕೆಲಸದ ಹೊರೆ ಮತ್ತು ಸಿಬ್ಬಂದಿ ಸಂಖ್ಯೆ ಹೆಚ್ಚಿದಂತೆ ಈಗಿನ ಕಟ್ಟಡಗಳು ಸಾಕಾಗದ ಕಾರಣ ಕೇಂದ್ರ ಕಚೇರಿ ಸಂಕೀರ್ಣದ ಪಕ್ಕದಲ್ಲಿಯೇ 2004ರಲ್ಲಿ ನಾಲ್ಕು ಮಹಡಿಗಳ ಹೆಚ್ಚುವರಿ ಅಭಿವೃದ್ಧಿ ಭವನ ನಿರ್ಮಿಸಲಾಗಿದೆ. ಬಿಡಿಎ ಕೇಂದ್ರ ಕಚೇರಿ ಕಟ್ಟಡದ ನಿರ್ವಹಣೆಗೆ ಈಗಾಗಲೇ ಸುಮಾರು 25 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಹೀಗಿದ್ದರೂ, ಪ್ರಾಧಿಕಾರದ 50ನೇ ವರ್ಷಾಚರಣೆ ಸಮೀಪಿಸುತ್ತಿದೆ ಎಂಬ ಕಾರಣಕ್ಕೆ ಸಮರ್ಥನೆ ನೀಡದೆ ಈಗಿನ ಕಟ್ಟಡವನ್ನು ನೆಲಸಮಗೊಳಿಸಿ ಆಧುನಿಕ ಕಟ್ಟಡ ನಿರ್ಮಿಸಲು 2025ರ ಡಿಸೆಂಬರ್ 30ರಂದು ನಡೆದ ಪ್ರಾಧಿಕಾರದ ಮಂಡಳಿ ಸಭೆಯಲ್ಲಿಏಕಪಕ್ಷೀಯ ನಿರ್ಣಯ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೆ, ಈಗಿನ ಕಟ್ಟಡದ ಸದೃಢತೆ ಮತ್ತು ಸುರಕ್ಷತೆಯ ಕುರಿತು ಮಾನ್ಯತೆ ಪಡೆದ ಸಂಸ್ಥೆಯಿಂದ ರಚನಾತ್ಮಕ ಅಥವಾ ತಾಂತ್ರಿಕ ಪರಿಶೀಲನೆ ನಡೆಸಿಲ್ಲ. ಅನ್ವಯವಾಗುವ ಕಾನೂನುಬದ್ಧ ಪ್ರಕ್ರಿಯೆ ಪಾಲಿಸದೆ ಮತ್ತು ಅಗತ್ಯ ಅನುಮೋದನೆಗಳನ್ನು ಪಡೆಯದೆ 2025ರ ಡಿಸೆಂಬರ್ 30ರಂದು ನಿರ್ಣಯ ಅಂಗೀಕರಿಸಲಾಗಿದೆ. ಬಿಡಿಎ ಕಾಯಿದೆಯ ಪ್ರಕಾರ ಯಾವುದೇ ಅಭಿವೃದ್ಧಿ ಕಾರ್ಯಕೈಗೊಳ್ಳಲು ಪ್ರಾಧಿಕಾರವು ರಾಜ್ಯ ಸರ್ಕಾರದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಬಿಡಿಎಗೆ ನಿರ್ಣಯ ಕೈಗೊಳ್ಳುವ ಅಧಿಕಾರವಿದ್ದರೂ, ಅದು ಮನಸೋ ಇಚ್ಛೆ ವರ್ತಿಸಲು ಅಥವಾ ಏಕಪಕ್ಷೀಯವಾಗಿ ಅನುಮೋದನೆ ನೀಡಿ ಕಟ್ಟಡ ನೆಲಸಮಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
“ಕಟ್ಟಡ ನೆಲಸಮಗೊಳಿಸಿ ಹೊಸ ಸಂಕೀರ್ಣ ನಿರ್ಮಿಸುವ ಯೋಜನೆಯಲ್ಲಿ ಭಾರಿ ಪ್ರಮಾಣದ ಸಾರ್ವಜನಿಕ ಹಣ ಒಳಗೊಂಡಿದೆ. ಬಿಡಿಎ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದು, ಐದು ವರ್ಷಕ್ಕೂ ಹೆಚ್ಚು ಅವಧಿಯಿಂದ ತನ್ನ ಲೆಕ್ಕಪತ್ರಗಳ ಲೆಕ್ಕಪರಿಶೋಧನೆ ನಡೆಸಿಲ್ಲ. ಲೆಕ್ಕಪತ್ರಗಳನ್ನು ಸಾರ್ವಜನಿಕರ ಪರಿಶೀಲನೆಗೆ ಲಭ್ಯವಾಗುವಂತೆ ಸಾರ್ವಜನಿಕ ವಲಯದಲ್ಲಿಯೂ ಪ್ರಕಟಿಸಿಲ್ಲ. ಇಂತಹ ಆರ್ಥಿಕ ಪರಿಸ್ಥಿತಿಯಲ್ಲಿರುವ ಪ್ರಾಧಿಕಾರವು ಬಳಕೆಯಲ್ಲಿರುವ ಕಟ್ಟಡವನ್ನು ಕೆಡವಿ, ಮರುನಿರ್ಮಾಣಕ್ಕಾಗಿ ಭಾರಿ ವೆಚ್ಚ ಮಾಡುವುದು ಸಾರ್ವಜನಿಕ ಆಸ್ತಿ ಮತ್ತು ರಾಜ್ಯದ ಬೊಕ್ಕಸದ ಮೇಲೆ ಗಂಭೀರ ಪರಿಣಾಮ ಉಂಟುಮಾಡಲಿದೆ. ಕಟ್ಟಡವನ್ನು ತಾಂತ್ರಿಕ ಪರಿಶೀಲನೆಯಿಲ್ಲದೆ ನೆಲಸಮಗೊಳಿಸಿದರೆ ಆ ವೆಚ್ಚವೂ ವ್ಯರ್ಥವಾಗಲಿದೆ” ಎಂದು ಅರ್ಜಿದಾರರು ಕಳವಳ ವ್ಯಕ್ತಪಡಿಸಿದ್ದಾರೆ.
“ಸುವರ್ಣ ಮಹೋತ್ಸವ ಆಚರಣೆಯೊಂದೇ ಈಗಿನ ಕಟ್ಟಡವನ್ನು ತೆರವುಗೊಳಿಸಿ ನೂತನ ಕಚೇರಿ ನಿರ್ಮಿಸಲು ಸಮರ್ಥನೀಯ ಕಾರಣವಾಗುವುದಿಲ್ಲ. ಯೋಜನೆಯ ಅಗತ್ಯ, ಕಾರ್ಯಸಾಧ್ಯತೆ, ಹಣಕಾಸಿನ ಪರಿಣಾಮ ಮತ್ತು ಈಗಿನ ಕಟ್ಟಡದ ಸ್ಥಿತಿಗತಿ ಕುರಿತು ಯಾವುದೇ ಸಮಗ್ರ ಪರಿಶೀಲನೆ ನಡೆಸಿಲ್ಲ. ಹಾಗಾಗಿ, ಬಿಡಿಎ ಕೇಂದ್ರ ಕಚೇರಿ ಕಟ್ಟಡವನ್ನು ನೆಲಸಮಗೊಳಿಸಿ ಆಧುನಿಕ ಕಟ್ಟಡ ನಿರ್ಮಿಸುವ ಸಂಬಂಧ ಅಂಗೀಕರಿಸಿರುವ ನಿರ್ಣಯವನ್ನು ರದ್ದುಗೊಳಿಸಬೇಕು” ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.