Gruhalakshmi scheme and Karnataka HC 
ಸುದ್ದಿಗಳು

ಗೃಹಲಕ್ಷ್ಮಿ ಯೋಜನೆಯ ಪಾವತಿಯಾಗದ ₹5,000 ಕೋಟಿ ಹಣ: ಸರ್ಕಾರಕ್ಕೆ ಉತ್ತರಿಸಲು ಹೈಕೋರ್ಟ್‌ ನಿರ್ದೇಶನ

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ 2025ರ ಫೆಬ್ರವರಿ ಹಾಗೂ ಮಾರ್ಚ್‌ ತಿಂಗಳ ಹಿಂಬಾಕಿ ಹಣ ಬಿಡುಗಡೆ ಮಾಡುವಂತೆ ಕೋರಿ ಇಬ್ಬರು ಮಹಿಳೆಯರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Bar & Bench

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ 2025ರ ಫೆಬ್ರವರಿ ಹಾಗೂ ಮಾರ್ಚ್‌ ತಿಂಗಳ ಹಿಂಬಾಕಿ ಹಣ ಬಿಡುಗಡೆ ಮಾಡಲು ಆದೇಶಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ನೋಟಿಸ್ ಜಾರಿ ಮಾಡಿದೆ.

ಗೃಹಲಕ್ಷ್ಮಿ ಯೋಜನೆಯಡಿ ಹಿಂಬಾಕಿ ಹಣ  ಬಿಡುಗಡೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ  ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿ ಆರ್ ‌ಗಂಗಾ ಮತ್ತು‌ ನಂದಿನಿ‌ ಲೇಔಟ್ ನಿವಾಸಿ ಜಿ ಡಿ ‌ಪವಿತ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್ ಮತ್ತು ಡಾ. ಕೆ ಮನ್ಮಥ ರಾವ್‌ ಅವರ ರಜಾಕಾಲೀನ ವಿಭಾಗೀಯ ಪೀಠ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಮ್‌ ಹುಯಿಲಗೋಳ ಅವರ ವಾದ ಆಲಿಸಿದ ಪೀಠವು ಪ್ರತಿವಾದಿಗಳಾದ ರಾಜ್ಯ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಪಂಚಾಯತ್ ರಾಜ್ ಇಲಾಖೆ,‌ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.

ರಾಜ್ಯ ಸರ್ಕಾರವು 2023ರ ಮೇ 5ರಂದು ಗೃಹಲಕ್ಷ್ಮಿ ಯೋಜನೆ ಜಾರಿಗೆ ಅನುಮೋದನೆ ನೀಡಿತು. ಮನೆಯ ಮುಖ್ಯಸ್ಥರಾದ ಮಹಿಳೆಗೆ ಮಾಸಿಕ 2 ಸಾವಿರ ರೂಪಾಯಿ ನೀಡಲು ಗೃಹಲಕ್ಷ್ಮಿ ಯೋಜನೆಯನ್ನು 2023ರ ಜೂನ್ 6ರಂದು ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. 2023ರ ಆಗಸ್ಟ್ ನಲ್ಲಿ ಈ ಯೋಜನೆಯಡಿ ಹಣ ಬಿಡುಗಡೆ ಆರಂಭವಾಗಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಅಲ್ಲದೇ, ಅಕ್ಟೋಬರ್ ವೇಳೆಗೆ ಈ ಯೋಜನೆಯಡಿ 1,28,80,594 ಫಲಾನುಭವಿಗಳು ನೋಂದಣಿಯಾಗಿದ್ದರು.‌ 2023ರ ಆಗಸ್ಟ್‌ನಿಂದ 2024 ಮಾರ್ಚ್‌ವರೆಗೆ ಎಂಟು ತಿಂಗಳ‌ ಕಾಲ ಹಣ ಬಿಡುಗಡೆ ಮಾಡಲಾಗಿತ್ತು. ಸರ್ಕಾರದ 2024-2025ನೇ ಹಣಕಾಸಿನ ಸಾಲಿಗೂ ಈ ಯೋಜನೆ ಮುಂದುವರಿಸಿತು. 2024ರ ಏಪ್ರಿಲ್‌ರಿಂದ 2025ರ ಜನವರಿವರೆಗೆ ಹಣ ಬಿಡುಗಡೆ ಮಾಡಿದ ಸರ್ಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬದಲಿಗೆ ತಾಲೂಕು ಪಂಚಾಯಿತಿ ಮೂಲಕ‌ ಹಣವನ್ನು‌ ಫಲಾನುಭವಿಗಳಿಗೆ ಪಾವತಿ ಮಾಡಲು ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ 2025ರ ಫೆಬ್ರವರಿ ತಿಂಗಳ ಹಣ ಬಿಡುಗಡೆ ಮಾಡಿಲ್ಲ. ಹಾಗೆಯೇ ಮಾರ್ಚ್ ತಿಂಗಳ‌ ಹಣವನ್ನು ಪಾವತಿ ಮಾಡಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಇದರ ಪರಿಣಾಮವಾಗಿ  ಹಣಕಾಸು ಇಲಾಖೆಯು ಪಾವತಿಸದ ಮೊತ್ತವನ್ನು ಹೊಸ ಹಣಕಾಸು ವರ್ಷಕ್ಕೆ ಮುಂದುವರಿಸಲು ವಿಫಲವಾದ‌ ಕಾರಣ 2025ರಲ್ಲಿ ಸುಮಾರು ₹5,000 ಕೋಟಿ ರೂಪಾಯಿ ಹಣ ಫಲಾನುಭವಿಗಳಿಗೆ ಪಾವತಿಯಾಗಿಲ್ಲ. ಯೋಜನೆಯಡಿ ಎರಡು ಕಂತು ಹಣ ಪಾವತಿಸದಿರುವುದರ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ  ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದರು.

2025ರ ಏಪ್ರಿಲ್‌ 4ರಂದು ಸರ್ಕಾರವು 2025-2026ರ ಹಣಕಾಸು ವರ್ಷಕ್ಕೆ ಜಿಲ್ಲಾ ಪಂಚಾಯಿತಿಗಳ ಮೂಲಕ ಯೋಜನೆಯ ಅನುಷ್ಠಾನಕ್ಕಾಗಿ ಹಣ ಮಂಜೂರು ಮಾಡುವ ಆದೇಶ ಮತ್ತು 2023-2024ನೇ ಆರ್ಥಿಕ ವರ್ಷಕ್ಕೆ ಅನ್ವಯವಾಗುವ ಅದೇ ನಿಯಮಗಳು ಮತ್ತು ಷರತ್ತುಗಳ ಮೇಲೆ ಯೋಜನೆಯನ್ನು ಮುಂದುವರೆಸಿತ್ತು. ಗೃಹಲಕ್ಷ್ಮಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಕಂತುಗಳನ್ನು  ವಿತರಿಸದಿರುವುದು ಮತ್ತು ಬಾಕಿ ಹಣವನ್ನು ಬಿಡುಗಡೆ ಮಾಡಿಲ್ಲ. ಇದರಿಂದ ಬಾಕಿ ಹಣವನ್ನು ಬಿಡುಗಡೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.