IPS D Roopa and IAS Rohini Sindhuri and Karnataka HC
IPS D Roopa and IAS Rohini Sindhuri and Karnataka HC 
ಸುದ್ದಿಗಳು

ಐಪಿಎಸ್‌ ಅಧಿಕಾರಿ ರೂಪಾ ವಿರುದ್ಧದ ಪ್ರತಿಬಂಧಕಾದೇಶ ರದ್ದು; ರೋಹಿಣಿ-ರೂಪಾ ವಾದ ಆಲಿಸಿ ಆದೇಶಿಸಲು ಹೈಕೋರ್ಟ್‌ ನಿರ್ದೇಶನ

Bar & Bench

ಐಪಿಎಸ್‌ ಅಧಿಕಾರಿ ಡಿ ರೂಪಾ ಮೌದ್ಗಿಲ್ ಅವರಿಗೆ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಯಾವುದೇ ತೆರನಾದ ಮಾನಹಾನಿ ಹೇಳಿಕೆ ನೀಡದಂತೆ ವಿಚಾರಣಾಧೀನ ನ್ಯಾಯಾಲಯ ಮಾಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ರದ್ದುಪಡಿಸಿದೆ.

2023ರ ಮಾರ್ಚ್‌ 7ರಂದು ರೂಪಾ ಸೇರಿದಂತೆ 60 ಪ್ರತಿವಾದಿಗಳ ವಿರುದ್ಧದ ಪ್ರತಿಬಂಧಕಾದೇಶ ವಿಸ್ತರಣೆ ಮಾಡಿ ವಿಚಾರಣಾಧೀನ ನ್ಯಾಯಾಲಯ ಮಾಡಿದ್ದ ಆದೇಶವನ್ನು ಪ್ರಶ್ನಿಸಿ ರೂಪಾ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ. ವಿಸ್ತೃತವಾದ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

“ಮಾರ್ಚ್‌ 7ರಂದು ಮಾಡಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಲಾಗಿದೆ. ಅರ್ಜಿದಾರರ ವಿರುದ್ಧ ಯಾವುದೇ ತೆರನಾದ ಪ್ರತಿಬಂಧಕಾದೇಶ ಚಾಲ್ತಿಯಲ್ಲಿ ಇಲ್ಲ. ಉಭಯ ಪಕ್ಷಕಾರರ ವಾದವನ್ನು ವಿಸ್ತೃತವಾಗಿ ಆಲಿಸಿ, ದಾಖಲೆಗಳನ್ನು ಪರಾಮರ್ಶೆ ಮಾಡಿದ ನಂತರ ಮೆರಿಟ್‌ ಮೇಲೆ ಆದೇಶ ಮಾಡಬೇಕು” ಎಂದು ವಿಚಾರಣಾಧೀನ ನ್ಯಾಯಾಲಯಕ್ಕೆ ಆದೇಶ ಮಾಡಲಾಗಿದೆ.

2023ರ ಫೆಬ್ರವರಿ 23ರಂದು ಬೆಂಗಳೂರಿನ ಮೆಯೊಹಾಲ್‌ನಲ್ಲಿರುವ ಹೆಚ್ಚುವರಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮುದ್ರಣ, ದೃಶ್ಯ ಮತ್ತು ಸಾಮಾಜಿಕ ಮಾಧ್ಯಮಗಳು ಮಾನಹಾನಿ ಸುದ್ದಿ ಪ್ರಕಟಿಸದಂತೆ ಮತ್ತು ಅಂತಹ ಹೇಳಿಕೆಗಳನ್ನು ನೀಡದಂತೆ ಡಿ ರೂಪಾ ಮೌದ್ಗಿಲ್‌ ಒಳಗೊಂಡು 60 ಮಾಧ್ಯಮಗಳ ವಿರುದ್ಧ ತಾತ್ಕಾಲಿಕ ಏಕಪಕ್ಷೀಯ ಮಧ್ಯಂತರ ಪ್ರತಿಬಂಧಕಾದೇಶ ಮಾಡಿತ್ತು. ಇದೇ ವೇಳೆ, ಹಾಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಫಿರ್ಯಾದಿ ರೋಹಿಣಿ ಯಾವುದೇ ತೆರನಾದ ಅಭಿಪ್ರಾಯ ಅಥವಾ ಹೇಳಿಕೆಯನ್ನು ನೀಡುವಂತಿಲ್ಲ ಎಂದೂ ತಾಕೀತು ಮಾಡಿತ್ತು.

Madhukar Deshpande, Counsel

ಈ ಆದೇಶವನ್ನು ಅಂಚೆಯ ಮೂಲಕ ರೋಹಿಣಿ ಅವರು 48 ಗಂಟೆಯ ಒಳಗೆ ರೂಪಾ ಅವರಿಗೆ ತಿಳಿಸಬೇಕಿತ್ತು. ಮಾಹಿತಿಯನ್ನು ರೂಪಾ ಅವರಿಗೆ ತಿಳಿಸಲಾಗಿದೆ ಎಂದು ರೋಹಿಣಿ ಪರ ವಕೀಲರು ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸಿದ್ದರು. ಇದನ್ನು ಆಕ್ಷೇಪಿಸಿ ರೂಪಾ ಪರ ವಕೀಲರಾದ ಮಧುಕರ್‌ ದೇಶಪಾಂಡೆ ಅವರು 48 ಗಂಟೆಯ ಒಳಗೆ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ನಮ್ಮ ಗಮನಕ್ಕೆ ತಂದಿಲ್ಲ. ಆದ್ದರಿಂದ ಆದೇಶ ಜಾರಿಯಾಗದು. ಇಂಥ ಸಂದರ್ಭದಲ್ಲಿ ಆದೇಶಕ್ಕೆ ಮಹತ್ವ ಬರುವುದಿಲ್ಲ. ಈ ನೆಲೆಯಲ್ಲಿ ಆಕ್ಷೇಪಾರ್ಹ ಆದೇಶವನ್ನು ಮುಂದುವರಿಸುವಂತಿಲ್ಲ ಎಂದು ಆಕ್ಷೇಪಿಸಿ ವಿಚಾರಣಾಧೀನ ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿದ್ದರು.

ಈ ವಾದ ಒಪ್ಪದ ವಿಚಾರಣಾಧೀನ ನ್ಯಾಯಾಲಯವು 48 ಗಂಟೆಯ ನಂತರ ವಿಚಾರವನ್ನು ರೂಪಾ ಅವರಿಗೆ ಫಿರ್ಯಾದಿ ರೋಹಿಣಿ ತಿಳಿಸಿದ್ದಾರೆ ಎಂದು ಹೇಳಿತ್ತು. ಇದಕ್ಕೆ ಆಕ್ಷೇಪಿಸಿದ್ದ ದೇಶಪಾಂಡೆ ಅವರು 48 ಗಂಟೆಯ ನಂತರ ಆದೇಶವನ್ನು ರೂಪಾ ಅವರಿಗೆ ತಿಳಿಸಲಾಗಿದೆ ಎಂದು ಅಫಿಡವಿಟ್‌ ಹಾಕಿಲ್ಲ. ಅಲ್ಲದೇ, ಹಿಂದೆ ನ್ಯಾಯಾಲಯಕ್ಕೆ ಹಾಕಿರುವ ಅಫಿಡವಿಟ್‌ ಅನ್ನು ವಾಪಸ್‌ ಪಡೆದಿಲ್ಲ. ಈ ಮೂಲಕ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಲಾಗಿದೆ ಎಂದು ವಾದಿಸಿದ್ದರು. ಇದನ್ನು ಒಪ್ಪದ ವಿಚಾರಣಾಧೀನ ನ್ಯಾಯಾಲಯವು ವಿಚಾರಣೆ ಮುಂದುವರಿಸಿತ್ತು. ಇದನ್ನು ಪ್ರಶ್ನಿಸಿ ರೂಪಾ ಅವರು ಹೈಕೋರ್ಟ್‌ ಕದ ತಟ್ಟಿದ್ದರು. ಹೈಕೋರ್ಟ್‌ ರೂಪಾ ಅವರ ವಾದವನ್ನು ಮಾನ್ಯ ಮಾಡಿದೆ.