Justice D K Singh & Justice H Shanti Bhushan 
ಸುದ್ದಿಗಳು

ಶ್ರೀಕೃಷ್ಣ ದೇವರಾಯ ಶಿಕ್ಷಣ ಟ್ರಸ್ಟ್‌ ಸುಪರ್ದಿನ 32 ಎಕರೆ ʼಬಿʼ ಖರಾಬು ಜಮೀನು ವಶಕ್ಕೆ ಪಡೆಯಲು ಹೈಕೋರ್ಟ್‌ ನಿರ್ದೇಶನ

ಸರ್ವೇ ನಂ. 45ಕ್ಕೆ ಸಂಬಂಧಿಸಿದ ಆರ್‌ಟಿಸಿ ಪ್ರಕಾರ ಈ ಸರ್ವೇ ನಂಬರ್‌ನಲ್ಲಿ ಒಟ್ಟು 133 ಎಕರೆ 33 ಗುಂಟೆ ಇದೆ. ಅದರಲ್ಲಿ 31 ಎಕರೆ 36 ಗುಂಟೆಗಳಷ್ಟು ಭೂಮಿ 'ಬಿ' ಖರಾಬು  ಎಂದು ವರ್ಗೀಕರಿಸಿರುವುದು ಸ್ಪಷ್ಟವಾಗಿದೆ ಎಂದಿದ್ದ ಸರ್ಕಾರ.

Bar & Bench

ಬೆಂಗಳೂರಿನ ದೇವನಹಳ್ಳಿಯ ಸಮೀಪದ ನೆಲ್ಲುಕುಂಟೆ ಗ್ರಾಮದಲ್ಲಿ ಶ್ರೀ ಕೃಷ್ಣ ದೇವರಾಯ ಶಿಕ್ಷಣ ಟ್ರಸ್ಟ್ ಸುಪರ್ದಿಯಲ್ಲಿರುವ ಬಹುಕೋಟಿ ಮೌಲ್ಯದ 31 ಎಕರೆ 36 ಎಕರೆ ಬಿ ಖರಾಬು ಜಮೀನನ್ನು ವಶಕ್ಕೆ ಪಡೆಯಬೇಕು ಎಂದು ರಾಜ್ಯ ಸರ್ಕಾರಕ್ಕೆ ಶುಕ್ರವಾರ ನಿರ್ದೇಶಿಸಿರುವ ಹೈಕೋರ್ಟ್‌, ತನ್ನ ಜಮೀನನ್ನು ವಶಪಡಿಸಿಕೊಳ್ಳುತ್ತಿರುವಾಗ ಸರ್ಕಾರವು ಮೂಖ ಪ್ರೇಕ್ಷಕನಾಗಲಾಗದು ಎಂದಿದೆ.

ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್ ಹಾಗೂ ಎಚ್‌ ಶಾಂತಿಭೂಷಣ್‌ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ನೆಲ್ಲುಕುಂಟೆ ಗ್ರಾಮದ ಸರ್ವೇ ನಂ 45ರಲ್ಲಿ 133 ಎಕರೆ ಮತ್ತು 33 ಗುಂಟೆ ಜಾಗವು ತಾನು ಖಾಸಗಿ ವ್ಯಕ್ತಿಗಳಿಂದ ಖರೀದಿಸಿರುವುದಾಗಿ ಶ್ರೀಕೃಷ್ಣ ದೇವರಾಯ ಶಿಕ್ಷಣ ಟ್ರಸ್ಟ್‌ ಕ್ಲೇಮು ಮಾಡುತ್ತಿದೆ. ಆದರೆ, ಸರ್ಕಾರಿ ವಕೀಲರು ಸರ್ವೇ ನಂ. 45ಕ್ಕೆ ಸಂಬಂಧಿಸಿದ ಆರ್‌ಟಿಸಿ ಪ್ರಕಾರ ಈ ಸರ್ವೇ ನಂಬರ್‌ನಲ್ಲಿ ಒಟ್ಟು 133 ಎಕರೆ 33 ಗುಂಟೆ ಇದೆ. ಅದರಲ್ಲಿ 31 ಎಕರೆ 36 ಗುಂಟೆಗಳಷ್ಟು ಭೂಮಿಯನ್ನು ನಿರ್ದಿಷ್ಟವಾಗಿ 'ಬಿ' ಖರಾಬ್  ಎಂದು ವರ್ಗೀಕರಿಸಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಆದ್ದರಿಂದ, ಮಾರಾಟ ಪತ್ರಗಳಲ್ಲಿ ನಮೂದಿಸಲಾದ ಸಂಪೂರ್ಣ ಜಮೀನನ್ನು ಮಾರಾಟಗಾರರು ಹಸ್ತಾಂತರಿಸಲು ಅರ್ಹವಾದ ಖಾಸಗಿ ಭೂಮಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬುದು ಈ ಕಂದಾಯ ದಾಖಲೆಯಿಂದ ಸ್ಪಷ್ಟವಾಗುತ್ತದೆ ಎಂದು ಪೀಠ ಹೇಳಿದೆ.

ಅಲ್ಲದೆ, ಯಾವುದೇ ದೃಷ್ಟಿಕೋನದಿಂದ ನೋಡಿದರೂ ಟ್ರಸ್ಟ್‌ಗೆ ಭೂಮಿ ಮಾರಾಟ ಮಾಡಿರುವ ಖಾಸಗಿ ವ್ಯಕ್ತಿಗಳಿಗೆ  ಕೇವಲ 101 ಎಕರೆ 37 ಗುಂಟೆಗಳಷ್ಟು ಭೂಮಿಯ ಮೇಲೆ ಮಾತ್ರ ಮಾಲೀಕತ್ವ ಮತ್ತು ಹಕ್ಕು ಇತ್ತು. 31 ಎಕರೆ 36 ಗುಂಟೆಗಳ 'ಬಿ' ಖರಾಬ್ ಭೂಮಿಯ ಮೇಲೆ ಅವರಿಗೆ ಯಾವುದೇ ಹಕ್ಕು, ಮಾಲೀಕತ್ವ ಇರಲಿಲ್ಲ. ಭೂಮಿಯ ಮೇಲೆ ತಮಗಿದ್ದ ಹಕ್ಕು ಮತ್ತು ಮಾಲೀಕತ್ವಕ್ಕಿಂತ ಹೆಚ್ಚಿನ ಹಕ್ಕನ್ನು ಮಾರಾಟಗಾರರು ವರ್ಗಾಯಿಸಲು ಸಾಧ್ಯವಿಲ್ಲ. ಆದ್ದರಿಂದ, ಕೇವಲ ಮಾರಾಟ ಪತ್ರದಲ್ಲಿ ಭೂಮಿಯ ವಿಸ್ತೀರ್ಣವನ್ನು 133 ಎಕರೆ 33 ಗುಂಟೆ ಎಂದು ನಮೂದಿಸಿದ ಮಾತ್ರಕ್ಕೆ, ಟ್ರಸ್ಟ್‌ ಈ 31 ಎಕರೆ 36 ಗುಂಟೆಗಳ ಬಿ ಖರಾಬ್ ಭೂಮಿಯ ಮಾಲೀಕರಾಗುವುದಿಲ್ಲ. ಟ್ರಸ್ಟ್‌ ತಮಗೆ ಭೂಮಿ  ಮಾರಾಟ ಮಾಡಿದವರ ಪರವಾಗಿ ನಿಗದಿಯಾಗಿದ್ದಕ್ಕಿಂತ ಹೆಚ್ಚಿನ ವಿಸ್ತೀರ್ಣದ ಭೂಮಿಯನ್ನು ಕೋರುತ್ತಿದ್ದಾರೆ ಎಂಬ ಅಂಶವನ್ನು ಏಕ ಸದಸ್ಯ ಪೀಠ ಕಡೆಗಣಿಸಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಅಲ್ಲದೆ,  ಸರ್ಕಾರವು ಸರ್ವೇ ನಂಬರ್‌ ನಲ್ಲಿ 45ರಲ್ಲಿ ಒಟ್ಟು ಭೂಮಿಯನ್ನು ಸರ್ವೇ ನಡೆಸಬೇಕು.  ಜಮೀನು ಸರ್ವೇ ಕುರಿತಂತೆ ಟ್ರಸ್ಟ್‌ಗೆ ಹೊಸ ನೋಟಿಸ್ ಜಾರಿ ಮಾಡಬೇಕು. ಸಂಬಂಧಪಟ್ಟ ಎಲ್ಲಾ ಪಕ್ಷಗಾರರಿಗೆ ಸಂಬಂಧಿತ ದಾಖಲೆಗಳನ್ನು ಹಾಜರುಪಡಿಸುವಂತೆ ಮತ್ತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಬೇಕು. ಸರ್ವೇ ನಡೆಸಿ 101 ಎಕರೆ ಮತ್ತು 37 ಗುಂಟೆಗಳ ವಿಸ್ತೀರ್ಣವನ್ನು ಗುರುತಿಸಬೇಕು. ಗಡಿ ಗುರುತಿಸಿದ ನಂತರ ಸರಿಯಾದ ರೇಖಾಚಿತ್ರ ಸಿದ್ಧಪಡಿಸಬೇಕು. ಇನ್ನೂ ‘ಬಿ’ ಖರಾಬ್ ಸರ್ಕಾರಿ ಜಮೀನು ಎಂದು ಗುರುತಿಸಿದ ನಂತರ, ಅಧಿಕಾರಿಗಳು ಅದರ ವರ್ಗೀಕರಣವನ್ನು ಕಂದಾಯ ದಾಖಲೆಗಳಲ್ಲಿ ಸೂಕ್ತ ರೀತಿಯಲ್ಲಿ ನಮೂದಿಸಿ ಜಮೀನನ್ನು ರಕ್ಷಿಸಬೇಕು ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಜಾಲ ಹೋಬಳಿಯ ನೆಲ್ಲುಕುಂಟೆ ಗ್ರಾಮದ ಸರ್ವೇ ನಂಬರ್ 45ರ ಸಮೀಕ್ಷೆ ನಡೆಸಲು ಯಲಹಂಕ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ 2023ರ ಏಪ್ರಿಲ್‌ 17ರಂದು ಹೊರಡಿಸಿದ್ದ ನೋಟಿಸ್‌ಗಳನ್ನು ಪ್ರಶ್ನಿಸಿ, ‘ಶ್ರೀ ಕೃಷ್ಣ ದೇವರಾಯ ಶಿಕ್ಷಣ ಟ್ರಸ್ಟ್’ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆ ನೋಟಿಸ್‌ಗಳನ್ನು ಏಕ ಸದಸ್ಯ ಪೀಠ ರದ್ದುಪಡಿಸಿತ್ತು. ಅಲ್ಲದೆ, ಪ್ರಕರಣ ಸಂಬಂಧ ಟ್ರಸ್ಟ್‌, ಸಕ್ಷಮ ಪ್ರಾಧಿಕಾರಕ್ಕೆ ಆಕ್ಷೇಪಣೆ ಸಲ್ಲಿಸಬೇಕು. ಅಂತಹ ಆಕ್ಷೇಪಣೆ ಸಲ್ಲಿಕೆಯಾದರೆ ಸಕ್ಷಮ ಪ್ರಾಧಿಕಾರವು ಆಕ್ಷೇಪಣೆ ಪರಿಗಣಿಸಿ, ಟ್ರಸ್ಟ್‌ ವಾದ ಆಲಿಸಿ ಸೂಕ್ತ ಆದೇಶ ಹೊರಡಿಸಬೇಕು ಎಂದು ಸೂಚಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ಯಲಹಂಕ ವಿಶೇಷ ತಹಶೀಲ್ದಾರ್, ಯಲಹಂಕ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಮತ್ತು ಭೂ ಮಾಪಕ (ಸರ್ವೇಯರ್) ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

Special Tahsildar v. Krishnadevaraya Educational Trust.pdf
Preview