ಕೋವಿಡ್ ಸೋಂಕಿತರ ಆರೈಕೆಗಾಗಿ ಜೈಲಿನಲ್ಲಿ ಕಲ್ಪಿಸಲಾಗಿರುವ ಸೌಲಭ್ಯಗಳ ಕುರಿತು ರಾಜ್ಯ ಸರ್ಕಾರವನ್ನು ಹೈಕೋರ್ಟ್ ಪ್ರಶ್ನಿಸಿದೆ.
ಇದರ ಜೊತೆಗೆ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ವಿಭಾಗೀಯ ಪೀಠವು ಕೆಳಗಿನ ವಿಚಾರಗಳನ್ನು ದಾಖಲೆಗಳಲ್ಲಿ ಸಲ್ಲಿಸುವಂತೆ ಕೆಲ ದಿನದ ಹಿಂದೆ ನಿರ್ದೇಶಿಸಿದ್ದು, ಸೆಪ್ಟೆಂಬರ್ 31ಕ್ಕೆ ವಿಚಾರಣೆ ಮುಂದೂಡಿದೆ.
ರಾಜ್ಯದ ಎಲ್ಲಾ ಜೈಲುಗಳಲ್ಲಿ ಪತ್ತೆಯಾಗಿರುವ ಕೋವಿಡ್ ಸೋಂಕಿತರ ಸಂಖ್ಯೆ.
ಜೈಲಿನಲ್ಲಿ ಪ್ರತ್ಯೇಕ ಕೊಠಡಿಗಳು ಇವೆಯೇ ಎಂಬುದರ ಮಾಹಿತಿ.
ಕೋವಿಡ್ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಎಲ್ಲಾ ಜೈಲುಗಳಲ್ಲಿಯೂ ಕೈದಿಗಳಿಗೆ ಪ್ರತಿದಿನ ಆರೋಗ್ಯ ತಪಾಸಣೆ ನಡೆಸಲಾಗುತ್ತಿರುವುದರ ವಿವರ.
ಜೈಲಿನಲ್ಲಿ ಕೆಲ ಕೋವಿಡ್ ಸೋಂಕಿತರಿರುವ ಹಿನ್ನೆಲೆಯಲ್ಲಿ ಜೈಲಿಗೆ ಕರೆತರಲಾಗುವ ವಿಚಾರಣಾಧೀನ ಕೈದಿಗಳು ಅಥವಾ ಅಪರಾಧಿಗಳನ್ನು ತಪಾಸಣೆಗೆ ಒಳಪಡಿಸಲು ಯಾವುದಾದರೂ ನೀತಿ ಜಾರಿಗೊಳಿಸಲಾಗಿದಯೇ.
ಜೈಲಿಗೆ ಪ್ರವೇಶಿಸುವ ಕೈದಿಗಳು ಕ್ವಾರಂಟೈನ್ ಗೆ ಒಳಗಾಗಿದ್ದಾರೆಯೇ ಎಂಬುದನ್ನು ರಾಜ್ಯ ಸರ್ಕಾರ ಖಾತ್ರಿಪಡಿಸಬೇಕು.
ಅರ್ಜಿದಾರರೂ ಆಗಿರುವ ಅಮೋಲ್ ಕಾಳೆ ಎಂಬುವರು ಮೈಸೂರು ಜೈಲಿನಲ್ಲಿದ್ದು, ತನಗೆ ಹಲವು ರೋಗ ಲಕ್ಷಣಗಳಿದ್ದರೂ ಅಧಿಕಾರಿಗಳು ಕೋವಿಡ್ ತಪಾಸಣಾ ಸೌಕರ್ಯ ಕಲ್ಪಿಸಿಲ್ಲ. ರೋಗ ಲಕ್ಷಣ ಇರುವ ಕೈದಿಗಳಿಗೆ ತಪಾಸಣೆ ವ್ಯವಸ್ಥೆ ಮಾಡಿಲ್ಲ. ಇದರಿಂದಾಗಿ ಮೈಸೂರು ಜೈಲಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ವ್ಯಾಪಕವಾಗಿ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಜೈಲಿನಲ್ಲಿ ಕೈದಿಗಳ ದಟ್ಟಣೆ ಕಡಿತಗೊಳಿಸುವ ಮೂಲಕ ಕೋವಿಡ್ ವ್ಯಾಪಿಸುವುದನ್ನು ತಡೆಯಲು ಸುಪ್ರೀಂ ಕೋರ್ಟ್ ಮಾರ್ಚ್ 23ರಂದು ನೀಡಿರುವ ಹಲವು ನಿರ್ದೇಶನಗಳನ್ನೂ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.
ಅರ್ಜಿಯಲ್ಲಿ ಹೀಗೆ ಉಲ್ಲೇಖಿಸಲಾಗಿದೆ,
“ಕೋವಿಡ್ ಹಿನ್ನೆಲೆಯಲ್ಲಿ ತುಂಬಿ ತುಳುಕುತ್ತಿರುವ ಜೈಲುಗಳು, ಪರಿವರ್ತನಾ ಕೇಂದ್ರಗಳು, ನಿಗಾ ಕೇಂದ್ರಗಳು ಮತ್ತು ಭದ್ರತಾ ಕೇಂದ್ರಗಳಲ್ಲಿ ದಟ್ಟಣೆ ಕಡಿಮೆ ಮಾಡುವುದು ಅತ್ಯಗತ್ಯ. ಕೆಲವು ಷರತ್ತುಗಳನ್ನು ವಿಧಿಸಿ ಕೈದಿಗಳನ್ನು ಬಿಡುಗಡೆ ಮಾಡುವಂತೆ ಸರ್ವೋಚ್ಚ ನ್ಯಾಯಾಲಯವು ಸೂಚಿಸಿದೆ. ಜೈಲಿನಲ್ಲಿರುವ ಕೈದಿಗಳ ಸುರಕ್ಷತೆಯನ್ನು ಕಾಪಾಡುವುದು ಸಹ ಅಷ್ಟೇ ಮುಖ್ಯವಾಗಿದೆ .”
ಕೋವಿಡ್ ಸೋಂಕಿತರಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ಮತ್ತು ಆರೋಗ್ಯ ತಪಾಸಣೆ ಕೈಗೊಳ್ಳುವಂತೆ ಜೈಲಿನ ಅಧಿಕಾರಿಗಳಿಗೆ ಹಲವು ಬಾರಿ ಪತ್ರ ಬರೆಯಲಾಗಿದೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅರ್ಜಿದಾರರ ವಕೀಲ ಎನ್ ಪಿ ಅಮೃತೇಶ್ ವಿವರಿಸಿದ್ದಾರೆ.
ಜೈಲಿನಲ್ಲಿ ಕೋವಿಡ್ ಸೋಂಕಿತರಿಗೆ ಪ್ರತ್ಯೇಕ ಕೊಠಡಿ ನೀಡಲಾಗಿಲ್ಲ. ಬದಲಾಗಿ ಹಾಲಿ ಇರುವ ಕೋಣೆಯಲ್ಲಿಯೇ ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಇದು ಜೈಲಿನ ಇತರೆ ಕೈದಿಗಳಲ್ಲಿ ಅಭದ್ರತೆ ಮತ್ತು ಭಯಕ್ಕೆ ಕಾರಣವಾಗಿದೆಯಲ್ಲದೇ ಸೋಂಕು ಹಬ್ಬುವ ಆತಂಕ ಸೃಷ್ಟಿಸಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಅರ್ಜಿಯ ಮೂಲಕ ನ್ಯಾಯಾಲಯಕ್ಕೆ ಕೆಳಗಿನಂತೆ ಮನವಿ ಮಾಡಲಾಗಿದೆ:
ಸುಪ್ರೀಂ ಕೋರ್ಟ್ ಮಾರ್ಚ್ 23ರಂದು ನೀಡಿರುವ ಆದೇಶಗಳನ್ನು ಜೈಲಿನ ಅಧಿಕಾರಿಗಳು ಪಾಲಿಸುವಂತೆ ಸೂಚಿಸಬೇಕು.
ಸಾಮಾಜಿಕ ಅಂತರ ಮತ್ತು ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸುವ ಮೂಲಕ ಅರ್ಜಿದಾರರಿಗೆ ಆಸರೆ ನೀಡುವಂತೆ ಜೈಲಿನ ಅಧಿಕಾರಿಗಳಿಗೆ ಸೂಚಿಸಬೇಕು.
ಕೋವಿಡ್ ಸೋಂಕಿತ ಕೈದಿಗಳನ್ನು ಮುಖ್ಯ ಜೈಲಿನಿಂದ ಹೊರಗೆ ಪ್ರತ್ಯೇಕ ಕೊಠಡಿಗಳಲ್ಲಿ ಇಡುವಂತೆ ಸೂಚಿಸಬೇಕು. ಸೋಂಕಿತರಿಗೆ ವಿಟವಿನ್ ಸಿ ಮಾತ್ರೆಗಳು ಮತ್ತು ಇತರೆ ಆಯುರ್ವೇದ ಔಷಧಿಗಳನ್ನು ನೀಡಲು ನಿರ್ದೇಶಿಸಬೇಕು.