ಕೋಮು ದ್ವೇಷ ಆರೋಪದ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಠಾಣೆಯಲ್ಲಿ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ.
ತೆಕ್ಕಾರುವಿನ ಎಸ್ ಬಿ ಇಬ್ರಾಹಿಂ ಸಲ್ಲಿಸಿರುವ ದೂರಿನ ಆಧಾರದಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದತಿ ಕೋರಿ ಹರೀಶ್ ಪೂಂಜಾ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ರಾಚಯ್ಯ ಅವರ ಏಕಸದಸ್ಯ ರಜಾಕಾಲೀನ ಪೀಠ ವಿಚಾರಣೆ ನಡೆಸಿತು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು “ಹೈಕೋರ್ಟ್‌ನ ಸಮನ್ವಯ ಪೀಠಗಳು ಪೂಂಜಾ ವಿರುದ್ಧ ಬೇರೆ ಪ್ರಕರಣಗಳಿಗೆ ತಡೆ ನೀಡಿರುವುದನ್ನು ಪರಿಗಣಿಸಿ, ಅರ್ಜಿದಾರರ ಕೋರಿಕೆಯಂತೆ ಹಾಲಿ ಪ್ರಕರಣಕ್ಕೆ ತಡೆ ನೀಡುವುದು ಸೂಕ್ತ” ಎಂದು ಆದೇಶಿಸಿ, ವಿಚಾರಣೆಯನ್ನು ಜೂನ್ 18ಕ್ಕೆ ಮುಂದೂಡಿತು.
ಆಗ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಸಕ್ಷಮ ನ್ಯಾಯಾಲಯಕ್ಕೆ ಈಗಾಗಲೇ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಹೀಗಾಗಿ, ಸ್ಪಷ್ಟನೆ ನೀಡಬೇಕು” ಎಂದು ಕೋರಿದರು. ಇದಕ್ಕೆ ಪೀಠವು “ಲಿಖಿತ ಆದೇಶದಲ್ಲಿ ಅದನ್ನು ಸ್ಪಷ್ಟಪಡಿಸಲಾಗುವುದು” ಎಂದು ಮೌಖಿಕವಾಗಿ ಹೇಳಿತು.
ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲರು “ಧರ್ಮ ಧರ್ಮಗಳ ನಡುವೆ ದ್ವೇಷ ಹರಡುವಂಥ ಕೆಲಸವನ್ನು ಪೂಂಜಾ ಅವರು ಮಾಡಿಲ್ಲ. ಇಡೀ ದೂರನ್ನು ಓದಿದರೆ ತಪ್ಪಾಗಿ ಸೆಕ್ಷನ್‌ಗಳು ಅನ್ವಯಿಸಲಾಗಿದೆ. ಹೀಗಾಗಿ, ಪ್ರಕರಣಕ್ಕೆ ತಡೆ ನೀಡಬೇಕು” ಎಂದು ಕೋರಿದರು.
ದೂರುದಾರರನ್ನು ಪ್ರತಿನಿಧಿಸಿದ್ದ ವಕೀಲ ಎಸ್ ಬಾಲನ್ ಅವರು “ತೆಕ್ಕಾರಿನ ಕಂತ್ರಿಗಳು ಎಂದು ಮುಸ್ಲಿಮ್ ಸಮುದಾಯವನ್ನು ಪೂಂಜಾ ನಿಂದಿಸಿದ್ದಾರೆ. ಪೂಂಜಾ ಭಾಷಣದ ವಿಡಿಯೋ ದಾಖಲೆ ಇದೆ. ಪೂಂಜಾ ಅವರ ವಿರುದ್ಧ ಇಂಥದ್ದೇ ಆರೋಪಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಠಾಣೆಯಲ್ಲಿ ಮೂರು ಎಫ್‌ಐಆರ್ ದಾಖಲಾಗಿವೆ. ನೂರು ಎಫ್‌ಐಆರ್ ದಾಖಲಿಸಲಿ. ಇದಕ್ಕೆ ನಾನು ಹೆದರುವುದಿಲ್ಲ ಎಂದೂ ಪೂಂಜಾ ಹೇಳಿದ್ದಾರೆ. ಶಾಸಕರಾಗಿರುವ ಪೂಂಜಾ ಅವರು ಸಂವಿಧಾನಕ್ಕೆ ಬದ್ಧವಾಗಿರಬೇಕು. ದ್ವೇಷ ಹರಡುವ ಕೆಲಸವನ್ನು ಪೂಂಜಾ ಮಾಡಲಾಗದು” ಎಂದರು.
“ಕೋಮು ದ್ವೇಷ, ನಿರ್ದಿಷ್ಟ ಸಮುದಾಯವನ್ನು ವಂಚಕರು ಎಂದು ಪೂಂಜಾ ಹೇಳಿದ್ದಾರೆ. ಅಲ್ಪಸಂಖ್ಯಾತ ಸಮುದಾಯವನ್ನು ಸಮಾರಂಭಕ್ಕೆ ಆಹ್ವಾನಿಸಬಾರದಿತ್ತು ಎಂದು ಹೇಳಿದ್ದಾರೆ. ಪೂಂಜಾ ಅವರ ಹೇಳಿಕೆಗಳು ಸಂವಿಧಾನಕ್ಕೆ ವಿರುದ್ಧವಾಗಿದೆ. ನಮ್ಮದು ಸಂವಿಧಾನಕ್ಕೆ ಬದ್ಧವಾಗಿರುವ ದೇಶವೇ ವಿನಾ, ಧಾರ್ಮಿಕ ವಿಚಾರಗಳಿಗೆ ಬದ್ಧವಾಗಿರುವ ದೇಶವಲ್ಲ. ಹೀಗಾಗಿ, ಪೂಂಜಾ ವಿಚಾರಣೆ ಎದುರಿಸಬೇಕು” ಎಂದು ವಾದಿಸಿದರು.
ಜಗದೀಶ್ ಅವರು “ತೆಕ್ಕಾರಿನಲ್ಲಿ ನಡೆದ ಬ್ರಹ್ಮ ಕಳಸೋತ್ಸವಕ್ಕೆ ಎಲ್ಲಾ ರೀತಿಯ ಸಹಕಾರವನ್ನು ಸ್ಥಳೀಯ ಅಲ್ಪಸಂಖ್ಯಾತ ಸಮುದಾಯ ನೀಡಿದೆ. ಅದಾಗ್ಯೂ, ಪೂಂಜಾ ಅವರು ಆಕ್ಷೇಪಾರ್ಹವಾದ ಭಾಷಣ ಮಾಡಿದ್ದಾರೆ. ಪೂಂಜಾ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸಂಬಂಧ ಆರೋಪ ಪಟ್ಟಿ ಸಲ್ಲಿಸಿ, ವಿಚಾರಣೆಗೆ ಹಾಜರಾಗದಿದ್ದರಿಂದ ವಿಚಾರಣಾಧೀನ ನ್ಯಾಯಾಲಯ ಪೂಂಜಾಗೆ ಜಾಮೀನುರಹಿತ ವಾರೆಂಟ್ ಜಾರಿ ಮಾಡಿದೆ. ಇದನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಅದಕ್ಕೆ ತಡೆಯಾಜ್ಞೆಯಾಗಿದೆ. ಪೂಂಜಾ ವಿಚಾರಣೆ ಎದುರಿಸಬೇಕು. ನ್ಯಾಯಾಲಯ ಮಧ್ಯಪ್ರವೇಶಿಸಬಾರದು” ಎಂದು ಕೋರಿದರು.
ಪ್ರಕರಣದ ಹಿನ್ನೆಲೆ: ಇಬ್ರಾಹಿಂ ಉಪ್ಪಿನಂಗಡಿ ನೀಡಿರುವ ದೂರಿನಲ್ಲಿ, ತೆಕ್ಕಾರುವಿನ ಭಟ್ರಬೈಲು ಎಂಬಲ್ಲಿ ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮ ಕಲಶೋತ್ಸವದಲ್ಲಿ ಮೇ 3ರಂದು ಹರೀಶ್ ಪೂಂಜಾ ಅವರು ರಾತ್ರಿ 9-9.30ರ ವೇಳೆಗೆ ತುಳು ಭಾಷೆಯಲ್ಲಿ “ತೆಕ್ಕಾರಿನ ಕಂತ್ರಿ ಬ್ಯಾರಿಗಳು ಟ್ಯೂಬ್ಲೈಟ್ ಹೊಡೆದಿದ್ದಾರೆ. ಜನರೇಟರ್‌ನ ಡೀಸೆಲ್ ಕದ್ದಿದ್ದಾರೆ ಎಂಬ ಬಗ್ಗೆ ಸ್ಥಳೀಯರಿಂದ ಮಾಹಿತಿ ಬಂದಿದೆ. ಬ್ರಹ್ಮ ಕಲಶೋತ್ಸವ ಮುಗಿಯುವ ವೇಳೆಗೆ ಕದ್ದಿರುವವರು ಯಾರು ಎಂಬ ಮಾಹಿತಿ ಬರುತ್ತದೆ. ನಮ್ಮಲ್ಲಿ ಸೌಹಾರ್ದತೆ ಬೇಕು ಎಂದು ಹೇಳುತ್ತಾರೆ. ನಾವು ಮಸೀದಿಗೆ ಹೋಗಿ ಆಮಂತ್ರಣ ಕೊಟ್ಟಿದ್ದರಿಂದ ಬ್ಯಾರಿಗಳು ಟ್ಯೂಬ್ ಹೊಡೆದಿದ್ದಾರೆ. ಅವರಿಗೆ ಆಮಂತ್ರಣ ನೀಡಬಾರದಿತ್ತು. ಕಾರ್ಯಕ್ರಮಕ್ಕೆ ಕರೆಯಬಾರದಿತ್ತು. ನಾವು ಹಿಂದೂಗಳು, ಹಿಂದೂಗಳೇ ಅವರನ್ನು ಸೇರಿಸಬಾರದು. ಪ್ರಸ್ತುತ ತೆಕ್ಕಾರಿನಲ್ಲಿ 1,200 ಮುಸ್ಲಿಮರಿದ್ದು, ನಾವು 150 ಮನೆಯವರು ಇದ್ದೇವೆ. 10 ವರ್ಷ ಕಳೆದರೆ 5 ಸಾವಿರ ಜನರಾಗುತ್ತಾರೆ. ಮುಸ್ಲಿಮರು ಐದು ಸಾವಿರ ಅಲ್ಲ 10 ಸಾವಿರ ಆದರೂ ಅವರನ್ನು ಹೆದರಿಸಿ, ನೀವು ಸನಾತನ ಹಿಂದೂ ಧರ್ಮವನ್ನು ಪಾಲನೆ ಮಾಡಿ, ದೇವರ ಪೂಜೆ ಮಾಡಿಕೊಂಡ ಬರಬೇಕು" ಎಂದು ಹೇಳಿದ್ದಾರೆ. ಈ ಮೂಲಕ ಸಮುದಾಯಗಳ ನಡುವೆ ದ್ವೇಷ ಹರಿಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲೂ ವೀಕ್ಷಿಸಿರುವುದಾಗಿ ಇಬ್ರಾಹಿಂ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನು ಆಧರಿಸಿ ಪೊಲೀಸರು ಹರೀಶ್ ಪೂಂಜಾ ವಿರುದ್ಧ ಬಿಎನ್‌ಎಸ್ ಸೆಕ್ಷನ್ 196 (ಧರ್ಮದ ಆಧಾರದಲ್ಲಿ ದ್ವೇಷ ಹರಡುವುದು), 353(2) (ದ್ವೇಷ ಹರಡಲು ಸುಳ್ಳು ಸುದ್ದಿ ಹಂಚಿಕೆ) ಅಡಿ ಶಾಸಕ ಪೂಂಜಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.