Anajali Devi and Karnataka HC 
ಸುದ್ದಿಗಳು

ಅಭಿಯೋಗ, ಸರ್ಕಾರಿ ವಾಜ್ಯಗಳ ಇಲಾಖೆ ನಿರ್ದೇಶಕಿಯಾಗಿ ಅಂಜಲಿ ದೇವಿ ಮುಂದುವರಿಕೆಗೆ ಹೈಕೋರ್ಟ್‌ ಅನುಮತಿ

ರಜೆಯಿಂದ ಹಿಂತಿರುಗಿದ ಅಂಜಲಿ ದೇವಿ ಅವರು ಜವಾಬ್ದಾರಿ ಹಸ್ತಾಂತರಿಸುವಂತೆ ಅಂಜನಾ ಚವಾಣ್‌ ಅವರಿಗೆ ಕೋರಿದಾಗ ಅವರು ಹಸ್ತಾಂತರ ಮಾಡಿರಲಿಲ್ಲ.

Bar & Bench

ಕರ್ನಾಟಕ ಅಭಿಯೋಗ ಮತ್ತು ಸರ್ಕಾರಿ ವಾಜ್ಯಗಳ ಇಲಾಖೆ ನಿರ್ದೇಶಕಿಯಾಗಿ ಅಂಜಲಿ ದೇವಿ ಮುಂದುವರಿಕೆಗೆ ತಡೆ ನೀಡಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯ (ಕೆಎಟಿ) ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ ಈಚೆಗೆ ತಡೆ ನೀಡಿದೆ.

ಕೆಎಟಿಯ ಮಧ್ಯಂತರ ಆದೇಶ ಪ್ರಶ್ನಿಸಿ ಅಂಜಲಿ ದೇವಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಆರ್ ದೇವದಾಸ್‌ ಮತ್ತು ಕೆ ಮನ್ಮಥ ರಾವ್‌ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿ, ಆಗಸ್ಟ್‌ ೨೮ರಂದು ಆದೇಶ ಮಾಡಿದೆ.

ಕೆಎಟಿ ಹೊರಡಿಸಿದ್ದ ನಿರ್ದೇಶನದ ಪ್ರಕಾರ ಅಭಿಯೋಗ ಮತ್ತು ಸರ್ಕಾರಿ ವಾಜ್ಯಗಳ ಇಲಾಖೆ ನಿರ್ದೇಶಕರ ಹುದ್ದೆಯನ್ನು ಭರ್ತಿ ಮಾಡುವವರೆಗೆ ಮತ್ತು ಇಲಾಖೆಯ ದೈನಂದಿನ ಕಾರ್ಯಚಟುವಟಿಕೆ ನಿಭಾಯಿಸಲು ಅಂಜಲಿ ದೇವಿ ಅವರನ್ನು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ–1958ರ (ಕೆಸಿಎಸ್ಆರ್) ನಿಯಮ 32ರ ಅಡಿಯಲ್ಲಿ ನಿರ್ದೇಶಕರ ಹುದ್ದೆಯ ಉಸ್ತುವಾರಿಯಲ್ಲಿ ಮುಂದುವರಿಸಬೇಕು ಎಂದು ನಿರ್ದೇಶಿಸಲಾಗಿತ್ತು. ಇದರನ್ವಯ ಅಂಜಲಿ ದೇವಿ ನಿರ್ದೇಶಕರಾಗಿ ನೇಮಕಗೊಂಡು ಮುಂದುವರಿದ್ದರು.

ಮಗುವಿನ ಆರೈಕೆಯ ಕಾರಣದಿಂದ ಅಂಜಲಿ ದೇವಿ ರಜೆಯ ಮೇಲೆ ತೆರಳಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ 2026ರ ಫೆಬ್ರುವರಿ 4ರಂದು ಆದೇಶ ಹೊರಡಿಸಿ ಕೆಸಿಎಸ್‌ಆರ್‌ ನಿಯಮ 68ರ ಪ್ರಕಾರ ಮತ್ತು ಮುಂದಿನ ಆದೇಶದವರೆಗೆ ಅಂಜನಾ ಚವಾಣ್‌ ಅವರಿಗೆ ಅಭಿಯೋಜನಾ ಇಲಾಖೆಯ ನಿರ್ದೇಶಕರ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನು ಹಸ್ತಾಂತರಿಸಿದ್ದರು.

ರಜೆಯಿಂದ ಹಿಂತಿರುಗಿದ ಅಂಜಲಿ ದೇವಿ ಅವರು ಜವಾಬ್ದಾರಿ ಹಸ್ತಾಂತರಿಸುವಂತೆ ಅಂಜನಾ ಚವಾಣ್‌ ಅವರಿಗೆ ಕೋರಿದಾಗ ಅವರು ಹಸ್ತಾಂತರ ಮಾಡಿರಲಿಲ್ಲ. ಈ ಬೆಳವಣಿಗೆಯಲ್ಲಿ ಕೆಎಟಿ ಆದೇಶ ಪ್ರಕಾರ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ 2026 ಜೂನ್‌ 16ರಂದು ಅಧಿಸೂಚನೆ ಹೊರಡಿಸಿ ಅಂಜಲಿ ದೇವಿ ಅವರೇ ಪ್ರಾಸಿಕ್ಯೂಷನ್ ನಿರ್ದೇಶಕರಾಗಿ ಮುಂದುವರಿಯಬೇಕೆಂದು ನಿರ್ದೇಶಿಸಿತು.

ಈ ಆದೇಶವನ್ನು ಪ್ರಶ್ನಿಸಿ ಅಂಜನಾ ಚವಾಣ್‌ ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಕೆಎಟಿಯ ಪ್ರಧಾನ ಪೀಠವು 2026ರ ಆಗಸ್ಟ್‌ 13ರಂದು ಅಂಜಲಿ ದೇವಿ ಅವರ ಮುಂದುವರಿಕೆ ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ಅಂಜಲಿ ದೇವಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. 

ಹೈಕೋರ್ಟ್‌ನ ಪ್ರಸಕ್ತ ಆದೇಶದಲ್ಲಿ ನ್ಯಾಯಮಂಡಳಿಯ ನಿರ್ದೇಶನದಂತೆ ಡಿಪಿಸಿ (ಡಿಪಾರ್ಟ್‌ಮೆಂಟಲ್‌ ಪ್ರಮೋಷನ್‌ ಕಮಿಟಿ) ಮತ್ತು ಅಂಜಲಿ ದೇವಿ ಮುಂದುವರಿಕೆಗೆ ಅವಕಾಶ ಕಲ್ಪಿಸಲಾಗಿದೆ.

ಅಂಜಲಿ ದೇವಿ ಪರವಾಗಿ ಹೈಕೋರ್ಟ್‌ ವಕೀಲೆ ಶಿಲ್ಪಾ ಎಸ್‌.ಗೋಗಿ ಹಾಗೂ ಅಂಜನಾ ಚವಾಣ್‌ ಪರವಾಗಿ ಹಿರಿಯ ವಕೀಲ ವಿಘ್ನೇಶ್ವರ ಶಾಸ್ತ್ರಿ ವಾದ ಮಂಡಿಸಿದ್ದರು. ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 11ಕ್ಕೆ ಮುಂದೂಡಲಾಗಿದೆ.