ಕೈಗಾರಿಕೆಗಳು ತಮ್ಮ ಕಾರ್ಮಿಕರಿಗೆ ವ್ಯತ್ಯಸ್ಥ ತುಟ್ಟಿಭತ್ಯೆ ಪಾವತಿ (ವಿಡಿಎ) ಮಾಡುವುದನ್ನು ಮುಂದೂಡಬಹುದು ಎಂದು ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಮಧ್ಯಂತರ ಆದೇಶದ ಮೂಲಕ ತಡೆಯಾಜ್ಞೆ ನೀಡಿದೆ. 2020ರ ಏಪ್ರಿಲ್ 1ರಿಂದ 2021ರ ಮಾರ್ಚ್ 31ರ ನಡುವೆ ಎಲ್ಲಾ ವರ್ಗದ ಕಾರ್ಮಿಕರಿಗೆ ನೀಡಬೇಕಿದ್ದ ತುಟ್ಟಿಭತ್ಯೆಯನ್ನು ತಡೆಹಿಡಿಯಬಹುದು ಎಂದು ಈ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.
ಈ ವರ್ಷ ಜುಲೈ 20 ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠ ನೀಡಿದ ಆದೇಶದ ಪ್ರಮುಖ ಅಂಶಗಳು ಹೀಗಿವೆ:
· ಅಧಿಸೂಚನೆಯ ಆದೇಶ ಕಾನೂನುಬಾಹಿರವಾಗಿದೆ.
· ರಾಜ್ಯ ಸರ್ಕಾರ ತನ್ನ ಯಾವುದೇ ದಾಖಲೆಗಳಲ್ಲಿ ಕನಿಷ್ಠ ವೇತನ ಕಾಯ್ದೆಯ ಸೆಕ್ಷನ್ 26 (2) ರ ಪ್ರಕಾರ ಅಧಿಸೂಚನೆ ಹೊರಡಿಸಿರುವುದಾಗಿ ಉಲ್ಲೇಖಿಸಿಲ್ಲ.
· ಸಾಂಕ್ರಾಮಿಕ ರೋಗದಿಂದ ಉಂಟಾದ ಪರಿಸ್ಥಿತಿ ನಿಭಾಯಿಸಲು ಉದ್ಯೋಗದಾತರು ಮತ್ತು ಉದ್ಯೋಗಿಗಳು ಯಾವಾಗ ಬೇಕಾದರೂ ಪರಿಹಾರ ಕಂಡುಕೊಳ್ಳಬಹುದು.
· ಆ ಮೂಲಕ ಮೇಲ್ನೋಟಕ್ಕೆ ಸಮ್ಮತವಾದ ವಾದವನ್ನು ಬಲವಾದ ರೀತಿಯಲ್ಲಿ ಮಂಡಿಸಬಹುದು.
· ಆಕ್ಷೇಪಾರ್ಹವಾದ ಅಧಿಸೂಚನೆ ಜಾರಿಯಾದರೆ ಕಾರ್ಮಿಕರು ವಿಡಿಎಗೆ ಅರ್ಹರಾಗುವುದಿಲ್ಲ
· ವಿಡಿಎ ಎಂಬುದು ಕನಿಷ್ಠ ವೇತನ ಕಾಯ್ದೆಯ ನಿಬಂಧನೆಯಡಿ ನೀಡಬೇಕಾದ ಮೊತ್ತವಾಗಿದ್ದು ಅಧಿಸೂಚನೆಯಲ್ಲಿ ಉಲ್ಲೇಖವಾಗಿರುವ ಅವಧಿಯಲ್ಲಿ ಕಾರ್ಮಿಕರಿಗೆ ನೀಡಬೇಕು.
ಕಾಯ್ದೆಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಧಿಸೂಚನೆಗೆ ಅನುಮತಿ ನೀಡಲು ಸಾಧ್ಯವಿಲ್ಲ.
ಇದಕ್ಕೂ ಮುನ್ನ ಸರ್ಕಾರದ ಪರ ವಕೀಲರು ಕನಿಷ್ಠ ವೇತನ ಕಾಯ್ದೆಯ 26 (2) ವಿಧಿಯಂತೆ ಅಧಿಸೂಚನೆ ಹೊರಡಿಸಲಾಗಿದೆ. ಉದ್ಯಮ ಪ್ರತಿನಿಧಿಗಳು ಮತ್ತು ಒಕ್ಕೂಟಗಳೊಂದಿಗೆ ನಡೆದ ಸಭೆಯ ಅನುಸಾರ ಅಧಿಸೂಚನೆ ಹೊರಡಿಸಲಾಗಿದೆ. ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ವಿಡಿಎ ಪಾವತಿ ಮಾಡಲು ಸಾಧ್ಯವಾಗಿಲ್ಲ ಎಂದು ವಾದಿಸಿದರು.
ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು ಪ್ರಸ್ತುತ ಪ್ರಕರಣದಲ್ಲಿ ಸೆಕ್ಷನ್ 26 (2)ನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಒಮ್ಮೆ ಕನಿಷ್ಠ ವೇತನ ನಿಗದಿಪಡಿಸಿದರೆ ಉದ್ಯೋಗದಾತರು ನೌಕರರಿಗೆ ಕನಿಷ್ಠ ವೇತನಕ್ಕಿಂತಲೂ ಕಡಿಮೆ ವೇತನ ಪಾವತಿಸುವಂತಿಲ್ಲ. ಈ ಕಾಯ್ದೆಯಿಂದ ಯಾವುದೇ ವಿನಾಯ್ತಿ ಪಡೆಯಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು. ಅಲ್ಲದೆ ‘ಖಾಸಗಿ ಆಸ್ಪತ್ರೆ, ನರ್ಸಿಂಗ್ ಸಂಘಟನೆಗಳು ಮತ್ತಿತರರು ವರ್ಸಸ್ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ’ ಪ್ರಕರಣದಲ್ಲಿ ನೀಡಲಾಗಿದ್ದ ಆದೇಶವನ್ನು ನ್ಯಾಯಾಲಯದ ಗಮನಕ್ಕೆ ತಂದರು. ಶಾಸಕಾಂಗದ ಕಾಯ್ದೆ ವೇತನ ನಿಗದಿಪಡಿಸಬೇಕಿದೆ ಎಂದ ವಕೀಲರು, ಸುಪ್ರೀಂಕೋರ್ಟಿನ ವಿವಿಧ ಉಲ್ಲೇಖಗಳನ್ನು ಪ್ರಸ್ತುತಪಡಿಸಿ ಕನಿಷ್ಠ ವೇತನ ನೀಡದಿರುವುದರಿಂದ ನೌಕರರನ್ನು ‘ಜೀತದಾಳು’ ಎಂದು ಪರಿಗಣಿಸಬೇಕಾಗುತ್ತದೆ. ಅದನ್ನು ಸಂವಿಧಾನದ 23ನೇ ವಿಧಿ ನಿಷೇಧಿಸಿದೆ ಎಂದರು.
ವಾದಗಳನ್ನು ಆಲಿಸಿದ ನ್ಯಾಯಾಲಯ,"ಆದೇಶವನ್ನು ಸರಿಯಾಗಿ ಗಮನಿಸಿದರೆ ಅದು ಸೆಕ್ಷನ್ 26 (2) ರ ಅಡಿಯಲ್ಲಿ ಅಧಿಕಾರ ಚಲಾಯಿಸಲು ಯತ್ನಿಸುವುದಿಲ್ಲ. ಎಎಜಿ ಸೂಚಿಸಿದಂತೆ, ಸೆಕ್ಷನ್ 26 (2) ರ ಅಡಿಯಲ್ಲಿ ಅಧಿಕಾರವನ್ನು ಚಲಾಯಿಸಿರುವ ಕುರಿತಂತೆ ಕಡತದಲ್ಲಿ ಟಿಪ್ಪಣಿ ಕೂಡ ಇಲ್ಲ. 2020ರ ಏಪ್ರಿಲ್ ತಿಂಗಳಲ್ಲಿ ನಡೆದ ಸಂವಹನ, ಮೇ 26ರ ಸಭೆ ಹಾಗೂ ಮೇ 29ರಲ್ಲಿ ಹೊರಡಿಸಲಾದ ಪತ್ರದನ್ವಯ ಗೌರವಾನ್ವಿತ ಸಚಿವರು ಅಧಿಕಾರ ಚಲಾಯಿಸಿದ್ದಾರೆ” ಎಂದು ತಿಳಿಸಿ ಅಧಿಸೂಚನೆಯನ್ನು ತಡೆ ಹಿಡಿಯಿತು.