ರಿಪಬ್ಲಿಕ್ ಟಿವಿಯ ಕನ್ನಡ ಸುದ್ದಿ ವಾಹಿನಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದ್ವೇಷ ಹರಡುವ ಸಂಬಂಧ ಸುಳ್ಳು ಸುದ್ದಿ ಪ್ರಸಾರ ಮಾಡಿರುವ ಆರೋಪದ ಕುರಿತು ವಾಹಿನಿ ಕಾರ್ಯಕಾರಿ ನಿರ್ದೇಶಕ ಅರ್ನಾಬ್ ಗೋಸ್ವಾಮಿ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಬೆಂಗಳೂರಿನ ಎಸ್ ಜೆ ಪಾರ್ಕ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಮತ್ತು ಆನಂತರ ನ್ಯಾಯಾಂಗ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಅರ್ನಾಬ್ ಗೋಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
“ಇಂಥ ದುಸ್ಸಾಹಸದ ಪ್ರಕರಣ ದಾಖಲಿಸಲು ಅನುಮತಿಸುವುದು ಕಾನೂನಿನ ದುರ್ಬಳಕೆಯಾಗಲಿದೆ. ಹೀಗಾಗಿ, ದೂರುದಾರರು ಹಾಜರಾಗುವವರೆಗೆ ತನಿಖೆಗೆ ತಡೆ ನೀಡಲಾಗಿದೆ. ದೂರುದಾರರಿಗೆ ತುರ್ತು ನೋಟಿಸ್ ಜಾರಿ ಮಾಡಲಾಗಿದೆ” ಎಂದು ಆದೇಶಿಸಿರುವ ನ್ಯಾಯಾಲಯವು ವಿಚಾರಣೆಯನ್ನು ಜನವರಿ 16ಕ್ಕೆ ಮುಂದೂಡಿದೆ.
ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು “ಕಣ್ತಪ್ಪನಿಂದ ಸುದ್ದಿಯನ್ನು ಪ್ರಸಾರ ಮಾಡಲಾಗಿತ್ತು. ತಕ್ಷಣ ಅದನ್ನು ಹಿಂಪಡೆಯಲಾಗಿದೆ. ಅರ್ನಾಬ್ ಗೋಸ್ವಾಮಿ ಅವರು ರಿಪಬ್ಲಿಕ್ ಕನ್ನಡ ವಾಹಿನಿಯ ಕಾರ್ಯಕಾರಿ ನಿರ್ದೇಶಕರಾಗಿದ್ದು, ಅವರ ವಿರುದ್ಧ ಐಪಿಸಿ ಸೆಕ್ಷನ್ 505 (2) ಪ್ರಕರಣ ದಾಖಲಿಸಲಾಗಿದೆ. ರಿಪಬ್ಲಿಕ್ ಟಿ ವಿ ಕನ್ನಡದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿರೋ ಟ್ರಾಫಿಕ್ ಕಲ್ಪಿಸಿರುವುದರಿಂದ ಆಂಬುಲೆನ್ಸ್ ಕೆಲಸಕ್ಕೆ ಅಡ್ಡಿಯಾಗಿದ್ದು, ಸಾರ್ಜಜನಿಕರಿಗೆ ಸಮಸ್ಯೆಯಾಗಿದೆ ಎಂಬ ಸುದ್ದಿ ಪ್ರಸಾರ ಮಾಡಲಾಗಿದೆ. ಸುದ್ದಿಯು ಸುಳ್ಳಾಗಿದ್ದು, ಅದನ್ನು ತಕ್ಷಣ ಡಿಲೀಟ್ ಮಾಡಲಾಗಿದೆ. ಒಂದು ದಿನದಲ್ಲಿ ಇದೆಲ್ಲಾ ನಡೆದಿದೆ. ಈ ಪ್ರಕರಣಕ್ಕೆ ಐಪಿಸಿ ಸೆಕ್ಷನ್ 505(2) ಹೇಗೆ ಅನ್ವಯಿಸುತ್ತದೆ ಎಂಬುದೇ ಅರ್ಥವಾಗಿಲ್ಲ” ಎಂದರು. ದೂರುದಾರರು ಅತಿ ಉತ್ಸಾಹಿಯಾಗಿದ್ದು, ತಮ್ಮ ದೂರಿನಲ್ಲಿ ಐಪಿಸಿಯ ಯಾವ ನಿಬಂಧನೆಯನ್ನು ಅನ್ವಯಿಸಬೇಕು ಎನ್ನುವುದನ್ನೂ ಸಹ ಸ್ವತಃ ತಾವೇ ಸೂಚಿಸಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ವಿಶೇಷ ಸರ್ಕಾರಿ ಅಭಿಯೋಜಕ-1 ಬಿ ಎ ಬೆಳ್ಳಿಯಪ್ಪ ಅವರು “ಪ್ರಕರಣದ ಬಗ್ಗೆ ಮಾಹಿತಿ ಇಲ್ಲ. ಈ ಪ್ರಕರಣವನ್ನು ಮುಕ್ತಾಯಗೊಳಿಸುತ್ತೇವೆ” ಎಂದರು.
ಆಗ ನ್ಯಾ. ನಾಗಪ್ರಸನ್ನ ಅವರು “ಅರ್ನಾಬ್ ಅರ್ಜಿಯನ್ನು ಪುರಸ್ಕರಿಸುತ್ತೇವೆ. ಅರ್ನಾಬ್ ಗೋಸ್ವಾಮಿ ಏನು ಮಾಡಿದ್ದಾರೆ? ಏನು ತೋರಿಸಬೇಕು ಅದನ್ನು ತೋರಿಸುತ್ತಾರೆ” ಎಂದರು. ಆಗ ಬೆಳ್ಳಿಯಪ್ಪ ಅವರು “ಅರ್ನಾಬ್ ಸಹ ಅತಿ ಉತ್ಸಾಹಿ ಇದ್ದಾರೆ” ಎಂದರು.
ಆದೇಶದ ಸಂದರ್ಭದಲ್ಲಿ ನ್ಯಾಯಮೂರ್ತಿಗಳು “ಅರ್ನಾಬ್ ಗೋಸ್ವಾಮಿ ಏನು ಮಾಡಿದ್ದಾರೆ? ಅವರಿಂದ ಬಹಳಷ್ಟು ವಿಚಾರಗಳು ಬೆಳಕಿಗೆ ಬಂದಿವೆ. ಕೆಲವೊಂದು ಕೆಲವರಿಗೆ ಒಳ್ಳೆಯದು ಮಾಡಿರಬಹುದು ಮತ್ತೆ ಕೆಲವೊಂದರಿಂದ ಕೆಲವರಿಗೆ ಹಾನಿಯಾಗಿರಬಹುದು. ಆದರೆ, ಈ ಪ್ರಕರಣದಲ್ಲಿ ಪ್ರಚೋದನೆಯ ಅಂಶ ಎಲ್ಲಿದೆ? ಐಪಿಸಿ ಸೆಕ್ಷನ್ 505(2) ಇದೆ ಎಂದು ಹಾಕುವುದೇ? ಇಬ್ಬರೂ ಪಕ್ಷಕಾರರನ್ನು ನಾವು ಆಲಿಸಲಿದ್ದೇವೆ, ಸದ್ಯಕ್ಕೆ ತನಿಖೆಗೆ ತಡೆ ನೀಡಲಾಗಿದೆ," ಎಂದು ಹೇಳಿದರು.
ಪ್ರಕರಣದ ಹಿನ್ನೆಲೆ: 2024ರ ಮಾರ್ಚ್ 27ರಂದು ರಿಪಬ್ಲಿಕ್ ಕನ್ನಡ ಸುದ್ದಿ ವಾಹಿನಿಯು ಸಂಜೆ 7.15ರ ಸುಮಾರಿಗೆ ಎಂ ಜಿ ರಸ್ತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಚರಿಸುವಾಗ ವಾಹನ ಸಂಚಾರ ತಡೆದು ಆಂಬುಲೆನ್ಸ್ ಸಂಚಾರಕ್ಕೆ ಅಡ್ಡಿಪಡಿಸಲಾಗಿದೆ ಎಂದು ವ್ಯಕ್ತಿಯೊಬ್ಬರು ಮಾಡಿದ್ದ ವಿಡಿಯೊ ತುಣುಕನ್ನು ಪ್ರಸಾರ ಮಾಡಿತ್ತು. ಅಂದು ಸಿಎಂ ಸಿದ್ದರಾಯ್ಯ ಅವರು ಮೈಸೂರಿನಲ್ಲಿದ್ದು, ಬೆಂಗಳೂರಿನಲ್ಲಿ ಪ್ರಯಾಣ ಮಾಡದಿರುವ ಸಂದರ್ಭದಲ್ಲಿ ಪರಿಶೀಲನೆ ನಡೆಸದೇ ಚುನಾವಣೆಯ ಸಂದರ್ಭದಲ್ಲಿ ಸಾರ್ವಜನಿಕರನ್ನು ಪ್ರಚೋದಿಸುವ ಸಲುವಾಗಿ ತಪ್ಪು ಮಾಹಿತಿ ಪ್ರಸಾರ ಮಾಡಿರುವ ರಿಪಬ್ಲಿಕ್ ಕನ್ನಡ ವಾಹಿನಿಯ ಮಾಲೀಕ ಅರ್ನಾಬ್ ಗೋಸ್ವಾಮಿ ಮತ್ತು ಸಂಪಾದಾಕ ನಿರಂಜನ್ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕೆಪಿಸಿಸಿ ಕಾನೂನು ವಿಭಾಗದ ಕಾರ್ಯದರ್ಶಿ ಎಂ ವಿ ರವೀಂದ್ರ ದೂರು ನೀಡಿದ್ದರು. ಇದನ್ನು ಆಧರಿಸಿ ಎಸ್ ಜೆ ಪಾರ್ಕ್ ಪೊಲೀಸರು ಐಪಿಸಿ ಸೆಕ್ಷನ್ 505(2) ಅಡಿ ಪ್ರಕರಣ ದಾಖಲಿಸಿದ್ದರು.