High Court of Karnataka 
ಸುದ್ದಿಗಳು

ಕಲಾಪದಿಂದ ದೂರ ಉಳಿದ ಏಳು ವಕೀಲರ ಸಂಘಗಳ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನಾ ಕ್ರಮಕ್ಕೆ ಮುಂದಾದ ಹೈಕೋರ್ಟ್‌

ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಮಳವಳ್ಳಿ, ಕೆ ಆರ್‌ ಪೇಟೆ, ಪಾಂಡವಪುರ ಮತ್ತು ದಾವಣಗೆರೆ ಸೇರಿದಂತೆ ಏಳು ವಕೀಲರ ಸಂಘಗಳ ವಿರುದ್ಧ ಕರ್ನಾಟಕ ಹೈಕೋರ್ಟ್‌ ಕ್ರಮಕ್ಕೆ ಮುಂದಾಗಿದೆ.

Bar & Bench

ನ್ಯಾಯಾಲಯದ ಕಲಾಪದಿಂದ ದೂರು ಉಳಿಯುವ ಸಂಬಂಧ ನಿಲುವಳಿಗೆ ಒಪ್ಪಿಗೆ ನೀಡಿದ್ದ ರಾಜ್ಯದ ಏಳು ವಕೀಲರ ಸಂಘಗಳ ವಿರುದ್ಧ ಸ್ವಯಂ ಪ್ರೇರಿತವಾಗಿ ನ್ಯಾಯಾಂಗ ನಿಂದನಾ ದೂರನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ದಾಖಲಿಸಿಕೊಂಡಿದೆ.

ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಮಳವಳ್ಳಿ, ಕೆ ಆರ್‌ ಪೇಟೆ, ಪಾಂಡವಪುರ ಮತ್ತು ದಾವಣಗೆರೆ ಸೇರಿದಂತೆ ಏಳು ವಕೀಲರ ಸಂಘಗಳ ವಿರುದ್ಧ ಕರ್ನಾಟಕ ಹೈಕೋರ್ಟ್‌ ಕ್ರಮಕ್ಕೆ ಮುಂದಾಗಿದೆ.

“ಕೋವಿಡ್‌ ಹಿನ್ನೆಲೆಯಲ್ಲಿ ಎಲ್ಲಾ ನ್ಯಾಯಾಲಯಗಳಿಗೂ ಸಮಸ್ಯೆಯಾಗಿದ್ದು, ಇದರಿಂದ ಕಕ್ಷಿದಾರರ ಜೊತೆಗೆ ವಕೀಲರ ಸಂಘದ ಸದಸ್ಯರಿಗೂ ತೊಂದರೆಗಳಾಗಿವೆ. ಪರಿಸ್ಥಿತಿಯು ನಿಧಾನಕ್ಕೆ ಸಹಜಸ್ಥಿತಿಗೆ ಮರಳುತ್ತಿದ್ದು, ಧರಣಿ/ಬಹಿಷ್ಕಾರಕ್ಕೆ ವಕೀಲರ ಸಂಘಗಳು ಬೆಂಬಲ ನೀಡಬಾರದು” ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಎಸ್‌ ಎಸ್‌ ಮಗದುಮ್‌ ಅವರಿದ್ದ ವಿಭಾಗೀಯ ಪೀಠವು ಆದೇಶ ಹೊರಡಿಸಿದೆ.

ಈ ಹಿನ್ನೆಲೆಯಲ್ಲಿ ಕಲಾಪದಿಂದ ಹಿಂದೆ ಸರಿದಿದ್ದ ಎಲ್ಲಾ ವಕೀಲರ ಸಂಘಗಳ ಪದಾಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲು ಪೀಠವು ಆದೇಶಿಸಿದೆ.

“ನ್ಯಾಯಾಲಯದ ಕಲಾಪದಿಂದ ಹಿಂದೆ ಸರಿಯುವುದಕ್ಕೆ ಬೆಂಬಲ ನೀಡಿದ ವಕೀಲರ ಸಂಘಗಳ ಪದಾಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ರಿಜಿಸ್ಟ್ರಿಗೆ ನಾವು ನಿರ್ದೇಶಿಸುತ್ತಿದ್ದೇವೆ. ಸ್ವಯಂಪ್ರೇರಿತ ಕ್ರಮ ಜಾರಿಗೆ ಪ್ರತ್ಯೇಕ ನ್ಯಾಯಾಂಗ ನಿಂದನೆ ಮನವಿ ಸಲ್ಲಿಸಬೇಕು, ಇದರಲ್ಲಿ ವಕೀಲರ ಸಂಘಗಳ ಪದಾಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿಸಬೇಕು. ರಿಜಿಸ್ಟ್ರಾರ್‌ ಜನರಲ್‌ ಅವರು ಈ ಆದೇಶವನ್ನು ಪರಿಗಣಿಸಿ, ಅಗತ್ಯ ಕ್ರಮಕೈಗೊಳ್ಳಬೇಕು” ಎಂದು ಪೀಠ ಆದೇಶಿಸಿದೆ.

ವಿವಿಧ ಕಾರಣಗಳಿಗಾಗಿ ಕಲಾಪಕ್ಕೆ ವಿವಿಧ ವಕೀಲರ ಸಂಘಗಳು ಬಹಿಷ್ಕಾರ ಹಾಕಿದ್ದವು ಎಂಬ ನ್ಯಾಯಾಲಯದ ರಿಜಿಸ್ಟ್ರಿ ವರದಿ ಆಧರಿಸಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಲಾಗಿದೆ ಎಂದು ಪೀಠ ಹೇಳಿದೆ. ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ವಿಲೇವಾರಿ ಮಾಡುವ ದೃಷ್ಟಿಯಿಂದ ಕಲಾಪ ಬಹಿಷ್ಕರಿಸಿದಂತೆ ಅಥವಾ ಕರ್ತವ್ಯದಿಂದ ಹಿಂದೆ ಸರಿಯದಂತೆ ಕಳೆದ ತಿಂಗಳು ಮುಖ್ಯ ನ್ಯಾಯಮೂರ್ತಿ ಎ ಎಸ್‌ ಓಕಾ ಅವರು ವಕೀಲರ ಸಂಘಗಳಿಗೆ ಮನವಿ ಮಾಡಿದ್ದರು.