Karnataka HC
Karnataka HC 
ಸುದ್ದಿಗಳು

ಸಂಸದರು, ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಲೇವಾರಿಗೆ ಪಿಐಎಲ್ ದಾಖಲಿಸಿಕೊಳ್ಳುವಂತೆ ಹೈಕೋರ್ಟ್ ಸೂಚನೆ

Bar & Bench

ಶಾಸನ ಸಭೆಯ ಸದಸ್ಯರ ವಿರುದ್ಧದ ಬಾಕಿ ಇರುವ ಪ್ರಕರಣಗಳನ್ನು ಮುಕ್ತಾಯಗೊಳಿಸಲು ಕಾರ್ಯತಂತ್ರ ಜಾರಿಗೊಳಿಸುವಂತೆ ದೇಶದ ಎಲ್ಲಾ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಳ್ಳುವಂತೆ ರಿಜಿಸ್ಟ್ರಾರ್ ಜನರಲ್ ಅವರಿಗೆ ರಾಜ್ಯ ಹೈಕೋರ್ಟ್‌ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿಸುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿದೆ. ಪ್ರಕರಣವನ್ನು ಸೆಪ್ಟೆಂಬರ್ 23ಕ್ಕೆ ಮುಂದೂಡಲಾಗಿದೆ.

ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಹೈಕೋರ್ಟ್ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ ನಾವದಗಿ (ಅಥವಾ ಅವರು ನಾಮ ನಿರ್ದೇಶಿಸುವ ಹೆಚ್ಚುವರಿ ಅಡ್ವೊಕೇಟ್ ಜನರಲ್) ಅವರಿಗೆ ರಾಜ್ಯ ಸರ್ಕಾರವನ್ನು ಪ್ರತಿನಿಧಿಸುವಂತೆ ಸೂಚಿಸಿದೆ. ಹಿರಿಯ ವಕೀಲ ಆದಿತ್ಯ ಸೋಂಧಿ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಕ ಮಾಡಲಾಗಿದೆ.

ಸಂಸದರು ಮತ್ತು ಶಾಸಕರ ವಿರುದ್ಧದ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸುವ ಸಂಬಂಧ ಕಾರ್ಯತಂತ್ರ ಜಾರಿಗೊಳಿಸುವಂತೆ ಸೆಪ್ಟೆಂಬರ್ 17ರಂದು ಸರ್ವೋಚ್ಚ ನ್ಯಾಯಾಲಯವು ಎಲ್ಲಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಆದೇಶಿಸಿತ್ತು.

ಕಾರ್ಯತಂತ್ರದಲ್ಲಿ ಕೆಳಗಿನ ಅಂಶಗಳು ಇರಬೇಕು ಎಂದು ನ್ಯಾಯಾಲಯ ಹೇಳಿದೆ:

  • ಪ್ರತಿ ಜಿಲ್ಲೆಯಲ್ಲಿರುವ ಬಾಕಿ ಪ್ರಕರಣಗಳು ಮತ್ತು ಅಗತ್ಯವಿರುವ ವಿಶೇಷ ನ್ಯಾಯಾಲಯಗಳು.

  • ಸದ್ಯ ಇರುವ ನ್ಯಾಯಾಲಯಗಳು ಮತ್ತು ನ್ಯಾಯಮೂರ್ತಿಗಳು ಹಾಗೂ ವಿಷಯಾಧಾರಿತ ಪ್ರಕರಣಗಳು.

  • ನೇಮಕ ಮಾಡಬೇಕಾದ ನ್ಯಾಯಾಧೀಶರ ಅಧಿಕಾರ ಅವಧಿ.

  • ಪ್ರತಿ ನ್ಯಾಯಮೂರ್ತಿಗಳಿಗೆ ಹಂಚಬೇಕಾದ ಪ್ರಕರಣಗಳು ಮತ್ತು ಪ್ರಕರಣ ಇತ್ಯರ್ಥಕ್ಕೆ ನಿಗದಿಪಡಿಸಬೇಕಾದ ಕಾಲಾವಧಿ.

  • ನ್ಯಾಯಾಲಯಗಳು ಎಷ್ಟು ವ್ಯಾಪ್ತಿಯಲ್ಲಿರಬೇಕು ಮತ್ತು ಏನೆಲ್ಲಾ ಮೂಲಸೌಕರ್ಯ ಹೊಂದಿರಬೇಕು ಎನ್ನುವ ವಿವರ.

  • ಪ್ರಕರಣಗಳ ವಿಚಾರಣೆಯ ಬಗ್ಗೆ ನಿಗಾ ವಹಿಸಲು ಮುಖ್ಯ ನ್ಯಾಯಮೂರ್ತಿಯವರು ತಮ್ಮನ್ನೂ ಒಳಗೊಂಡಂತೆ ಇನ್ನೊಬ್ಬ ನ್ಯಾಯಮೂರ್ತಿಯವರ ವಿಶೇಷ ಪೀಠ ರಚಿಸಬೇಕು.

  • ಶಾಸನ ಸಭೆಯ ಸದಸ್ಯರ ವಿರುದ್ಧದ ಪ್ರಕರಣಗಳ ತ್ವರಿತ ವಿಲೇವಾರಿಗೆ ಸಂಬಂಧಿಸಿದಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಅಮಿಕಸ್ ಕ್ಯೂರಿ ನೀಡುವ ಸಲಹೆಗಳು ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಸಲಹೆ ನೀಡಬಹುದು. ಯಾವುದೇ ತೆರನಾದ ಹೆಚ್ಚುವರಿ ಸಲಹೆಗಳಿದ್ದರೆ ಸುಪ್ರೀಂ ಕೋರ್ಟ್‌ಗೆ ಕಳುಹಿಸಿಕೊಡಬಹುದು.

  • ಒಂದು ವಾರದ ಒಳಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಸಲಹೆ-ಸೂಚನೆಗಳನ್ನು ಒಳಗೊಂಡ ಕಾರ್ಯತಂತ್ರ ವರದಿಯನ್ನು ಸುಪ್ರೀಂ ಕೋರ್ಟ್‌ನ ಸೆಕ್ರೆಟರಿ ಜನರಲ್ ಅವರಿಗೆ ಕಳುಹಿಸಿಕೊಡಬೇಕು.

  • ಮುಖ್ಯ ನ್ಯಾಯಮೂರ್ತಿ ಅವರನ್ನು ಒಳಗೊಂಡಂತೆ ಅವರು ರಚಿಸಿದ ಪೀಠಗಳು ಹಾಲಿ ಸಂಸದರು/ಶಾಸಕರು ಅಥವಾ ಮಾಜಿ ಸಂಸದರು ಅಥವಾ ಶಾಸಕರು ಭಾಗಿಯಾಗಿರುವ ಪ್ರಕರಣಗಳಿಗೆ ನೀಡಲಾಗಿರುವ ತಡೆಯಾಜ್ಞೆ ಸೇರಿದಂತೆ ಬಾಕಿ ಇರುವ ಶಾಸನ ಸಭೆಯ ಸದಸ್ಯರ ವಿರುದ್ಧದ ಎಲ್ಲಾ ಕ್ರಿಮಿನಲ್ ಪ್ರಕರಣಗಳ ಪಟ್ಟಿಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸಿದ್ಧಪಡಿಸಬೇಕು.

“ದೇಶದ ರಾಜಕೀಯದಲ್ಲಿ ಅಪರಾಧೀಕರಣ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತು ಚುನಾಯಿತ ಜನಪ್ರತಿನಿಧಿಗಳು ವಿಚಾರಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸದರಿ ಪ್ರಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು” ಎಂದು ಆದೇಶ ಹೊರಡಿಸುವಾಗ ನ್ಯಾಯಾಲಯ ಹೇಳಿದೆ.