ಏಪ್ರಿಲ್ 23 ಮತ್ತು 24ರಂದು ನಡೆದ ಸಿಇಟಿ ಪರೀಕ್ಷೆಯ ವೇಳೆ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದ ಸಂಬಂಧ ವರದಿಯಾಗಿರುವ ಪ್ರಕರಣದ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತನಿಖೆಗೆ ಆದೇಶಿಸಿದ್ದು, ಜಿಲ್ಲಾಧಿಕಾರಿಗಳಿಂದ ವರದಿ ನಿರೀಕ್ಷಿಸಲಾಗಿದೆ ಎಂದು ಹೈಕೋರ್ಟ್‌ಗೆ ಬುಧವಾರ ರಾಜ್ಯ ಸರ್ಕಾರ ತಿಳಿಸಿತು.
ಮೇ 3ರಂದು ನೀಟ್ ಪರೀಕ್ಷೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಕೆಲವು ನಿರ್ದೇಶನಗಳನ್ನು ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠಕ್ಕೆ ಅಖಿಲ ಕರ್ನಾಟಕ ಮಹಾಸಭಾದ ಪರ ಹಿರಿಯ ವಕೀಲ ಎಸ್ ಶ್ರೀರಂಗ ಕೋರಿದರು.
“ಕಳೆದ ವರ್ಷವೂ ಇದೇ ರೀತಿ ಸಿಇಟಿ ಪರೀಕ್ಷೆ ಸೇರಿದಂತೆ ಬೇರೆ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಲಾಗಿತ್ತು. ಆಗ ರಾಜ್ಯ ಸರ್ಕಾರವು ಈ ಘಟನೆ ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂಧು ಭರವಸೆ ನೀಡಿತ್ತು. ಅದಾಗ್ಯೂ, ಅದೇ ಕೃತ್ಯ ಮರುಳಿಸಿರುವುದನ್ನು ಉಲ್ಲೇಖಿಸಿದ್ದು, ವಿಚಾರಣೆ ನಡೆಸಬೇಕು” ಎಂದು ಕೋರಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರತಿನಿಧಿಸಿದ್ದ ಹಿರಿಯ ವಕೀಲ ಎನ್ ಕೆ ರಮೇಶ್ ಅವರು “700ಕ್ಕೂ ಹೆಚ್ಚು ಸಿಇಟಿ ಕೇಂದ್ರಗಳ ಪೈಕಿ ಎರಡರಲ್ಲಿ ಘಟನೆ ನಡೆದಿದೆ. ಈ ಸಂಬಂಧ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಅದಾಗ್ಯೂ ಇದು ನಡೆದಿದೆ. ಈ ಕುರಿತು ಸಂಬಂಧಿತ ಜಿಲ್ಲಾಧಿಕಾರಿಗಳಿಂದ ತನಿಖಾ ವರದಿ ನಿರೀಕ್ಷಿಸಲಾಗಿದೆ” ಎಂದರು.
ಈ ಹಂತದಲ್ಲಿ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಬೇಕಿತ್ತು ಎಂದಿತು.
ಆಗ ಶ್ರೀರಂಗ ಅವರು ಮೇ 3ಕ್ಕೆ ನೀಟ್ ಪರೀಕ್ಷೆ ನಿಗದಿಯಾಗಿದೆ. ಈ ಹಿಂದೆ ರಾಜ್ಯ ಸರ್ಕಾರ ನೀಡಿರುವ ಭರವಸೆಯು ಚಾಲ್ತಿಗೆ ಬಾರದೇ ಇರುವುದರಿಂದ ನ್ಯಾಯಾಲಯ ನಿರ್ದೇಶನ ನೀಡಬೇಕು ಎಂದರು.
ಇದಕ್ಕೆ ಸರ್ಕಾರದ ವಕೀಲೆ ನಿಲೋಫರ್ ಅಕ್ಬರ್ ಅವರು “ಯಾವುದೇ ಬಾದಿತ ವಿದ್ಯಾರ್ಥಿಯು ಬ್ರಾಹ್ಮಣ ಮಹಾಸಭಾವನ್ನು ಸಂಪರ್ಕಿಸಿಲ್ಲ” ಎಂದರು.
ಎಲ್ಲರ ವಾದ ಆಲಿಸಿದ ನ್ಯಾಯಾಲಯವು ಯಾವುದೇ ಆದೇಶ ಮಾಡಲಿಲ್ಲ.