ಐದು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ 2008ರಲ್ಲಿ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗೆ ವಿಧಿಸಿದ್ದ ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಈಚೆಗೆ ಎತ್ತಿ ಹಿಡಿದಿದೆ.
ಭ್ರಷ್ಟಾಚಾರ ನಿಯತ್ರಣ (ಪಿ ಸಿ) ಕಾಯಿದೆಯ ನಿಬಂಧನೆಯಡಿ ವಿಧಿಸಲಾಗಿದ್ದ ಜೈಲು ಶಿಕ್ಷೆಯನ್ನು ಪ್ರಶ್ನಿಸಿದ್ದ ಅಧಿಕಾರಿ ಪದ್ಮನಾಭ ಅವರ ಮೇಲ್ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ನೇತೃತ್ವದ ಏಕಸದಸ್ಯ ಪೀಠವು ವಿಶೇಷ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ.
“ವಾಣಿಜ್ಯ ತೆರಿಗೆ ಕಚೇರಿಯು ಭ್ರಷ್ಟಾಚಾರದ ಕೇಂದ್ರಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲ್ಪಟ್ಟಿದೆ. ದಿನಂಪ್ರತಿ ಬಡ ಚಾಲಕರು ಕಾನೂನುಬಾಹಿರ ಬೇಡಿಕೆಗಳಿಗೆ ಸಿಲುಕಿ ಲಂಚ ನೀಡುತ್ತಾರೆ. ದುರಾಸೆ ಹೆಚ್ಚಾದಾಗ ಮೇಲಿನ ಅಧಿಕಾರಿಗಳಿಗೆ ದೂರು ನೀಡುವ ಅಥವಾ ಲೋಕಾಯುಕ್ತದ ಗಮನಸೆಳೆಯುವ ಕೆಲಸವಾಗುತ್ತದೆ. ಹಲವು ಸಂದರ್ಭದಲ್ಲಿ ಸಂಧಾನದಲ್ಲಿ ಲಂಚಕ್ಕೆ ಸಂಬಂಧಿಸಿದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲಾಗುತ್ತದೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.
“ಈ ರೀತಿ ಆರೋಪ ಮಾಡಲ್ಪಟ್ಟ ಕೆಲವೇ ಕೆಲವು ಪ್ರಕರಣಗಳು ತಾರ್ಕಿತ ಅಂತ್ಯ ಕಾಣುತ್ತವೆ. ಕೆಲವು ಪ್ರಕರಣಗಳಲ್ಲಿ ಆರಂಭದಲ್ಲಿ ಪ್ರಾಸಿಕ್ಯೂಷನ್ ಅತ್ಯುತ್ಸಾಹದಿಂದ ಹೆಜ್ಜೆ ಇಟ್ಟರೂ ಅವರಿಗೆ ದೂರುದಾರರು ಮತ್ತು ಸಾಕ್ಷಿಗಳಿಂದ ಅಗತ್ಯ ಬೆಂಬಲ ದೊರೆಯದೇ ಆರೋಪಿಗಳು ಖುಲಾಸೆಯಾಗುತ್ತಾರೆ. ಪಿ ಸಿ ಕಾಯಿದೆಯ ವಿವಿಧ ನಿಬಂಧನೆಗಳ ಅಡಿ ದಾಖಲಿಸಿರುವ ಪ್ರಕರಣಗಳನ್ನು ರಾಷ್ಟ್ರೀಯ ಅಪರಾಧ ಬ್ಯುರೊ ಪ್ರಕಟಿಸಿರುವ ಪಟ್ಟಿಯಲ್ಲಿ ನೋಡಿದರೆ ನಿರಾಸೆಯಾಗುತ್ತದೆ” ಎಂದು ಪೀಠವು ಹೇಳಿದೆ.
“ಇದಕ್ಕೆ ಹಲವು ಕಾರಣಗಳಿರಬಹುದು. ಮುಗ್ಧರನ್ನು ರಕ್ಷಿಸುವುದು ಮತ್ತು ಅಪರಾಧಿಗಳಿಗೆ ಶಿಕ್ಷೆ ವಿಧಿಸಿವುದೂ ನ್ಯಾಯಾಲಯಗಳ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ನೈಜ ಅಪರಾಧಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು” ಎಂದು ಪೀಠವು ಮೇಲ್ಮನವಿಯನ್ನು ವಜಾ ಮಾಡುವಾಗ ಹೇಳಿದೆ.
2008ರ ಡಿಸೆಂಬರ್‌ನಲ್ಲಿ ವಿಜಯಪುರ ಜಿಲ್ಲೆಯ ಧುಲ್ಖೇಡ್ ಚೆಕ್ ಪೋಸ್ಟ್ ಬಳಿ 40 ಲಕ್ಷ ರೂಪಾಯಿ ಸಾಮಾಗ್ರಿಗಳನ್ನು ತುಂಬಿರುವ ಲಾರಿಯನ್ನು ಬಿಡುಗಡೆ ಮಾಡಲು ವಾಣಿಜ್ಯ ತೆರಿಗೆ ಅಧಿಕಾರಿಗಳು 15 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿರುವುದಾಗಿ ಉಕ್ಕಿನ ಕಂಪೆನಿಯೊಂದರ ಯೋಜನಾ ವ್ಯವಸ್ಥಾಪಕ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಲಂಚದ ಬೇಡಿಕೆಯನ್ನು ಐದು ಲಕ್ಷ ರೂಪಾಯಿಗಳಿಗೆ ಇಳಿಸಲಾಗಿತ್ತು.
ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಅಧಿಕಾರಿ ಪದ್ಮನಾಭ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. 2015ರಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ (ಪಿ ಸಿ) ಅಡಿ ಸ್ಥಾಪಿಸಲಾಗಿರುವ ವಿಜಯಪುರದ ವಿಶೇಷ ನ್ಯಾಯಾಲಯವು ಅವರನ್ನು ಅಪರಾಧಿ ಎಂದು ಘೋಷಿಸಿತ್ತು. ಅಲ್ಲದೇ ಪಿ ಸಿ ಕಾಯಿದೆಯ ಸೆಕ್ಷನ್ 7ರ ಅಡಿ ಎರಡೂವರೆ ವರ್ಷ ಜೈಲು ಶಿಕ್ಷೆ ಮತ್ತು ಸೆಕ್ಷನ್ 13(1) (ಡಿ) ಅಡಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, ಎರಡೂ ಶಿಕ್ಷಗಳು ಒಟ್ಟಾಗಿ ಜಾರಿಯಾಗಲಿವೆ ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಪದ್ಮನಾಭ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.