Senior Citizens 
ಸುದ್ದಿಗಳು

ವಯಸ್ಸಾದ ತಾಯಿಗೆ ಕಿರುಕುಳ: ವೈದ್ಯಾಧಿಕಾರಿಗೆ ಮನೆ ತೊರೆಯುವಂತೆ ಆದೇಶಿಸಿದ್ದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ತಾಯಿ ಮನೆಯಿಂದ ಹೊರಹೊಗಲು ಅರ್ಜಿದಾರರು ಮತ್ತು ಅವರ ಕುಟುಂಬಕ್ಕೆ ನಿರ್ದೇಶಿಸಿ ಹೊರಡಿಸಿರುವ ಆದೇಶವನ್ನು 60 ದಿನಗಳಲ್ಲಿ ಜಾರಿಗೊಳಿಸಬೇಕು ಎಂದು ಮೈಸೂರಿನ ಹಿರಿಯ ನಾಗರಿಕ ಕಲ್ಯಾಣ ಸಮಿತಿಯ ಉಪ ವಿಭಾಗಾಧಿಕಾರಿಗೆ ನಿರ್ದೇಶಿಸಿದೆ.

Bar & Bench

ತಾಯಿ ನೆಲೆಸಿರುವ ಮನೆಯಿಂದ ಹೊರಹೋಗಲು ಹಾಸನದ ವೈದ್ಯಾಧಿಕಾರಿ ಡಾ.ಎಂ ಎಸ್‌ ಮಹೇಶ್‌ ಹಾಗೂ ಅವರ ಕುಟುಂಬಕ್ಕೆ ನಿರ್ದೇಶಿಸಿ ಮೈಸೂರಿನ ಹಿರಿಯ ನಾಗರಿಕ ಕಲ್ಯಾಣ ಸಮಿತಿಯ ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಪುರಸ್ಕರಿಸಿದೆ.

ಉಪ ವಿಭಾಗಾಧಿಕಾರಿಯ ಮತ್ತು ಜಿಲ್ಲಾಧಿಕಾರಿಯ ಆದೇಶ ಪ್ರಶ್ನಿಸಿ ಡಾ.ಎಂ ಎಸ್‌ ಮಹೇಶ್‌ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಪೀಠ ಆದೇಶ ಮಾಡಿದೆ.

Justice Suraj Govindraj

ತಾಯಿ ಮನೆಯಿಂದ ಹೊರಹೊಗಲು ಅರ್ಜಿದಾರರು ಮತ್ತು ಅವರ ಕುಟುಂಬಕ್ಕೆ ನಿರ್ದೇಶಿಸಿ ಹೊರಡಿಸಿರುವ ಆದೇಶವನ್ನು 60 ದಿನಗಳಲ್ಲಿ ಜಾರಿಗೊಳಿಸಬೇಕು ಎಂದು ಮೈಸೂರಿನ ಹಿರಿಯ ನಾಗರಿಕ ಕಲ್ಯಾಣ ಸಮಿತಿಯ ಉಪ ವಿಭಾಗಾಧಿಕಾರಿಗೆ ನಿರ್ದೇಶಿಸಿದೆ. ಅಲ್ಲದೆ, ಈ ಆದೇಶದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಮಹೇಶ್‌ ಮತ್ತು ಅವರ ತಾಯಿ ಸುಭದ್ರಮ್ಮ ಅವರ ನಡುವಿನ ಸದರಿ ಸ್ಥಿರಾಸ್ತಿಗೆ (ಮನೆ) ಸಂಬಂಧಿಸಿದ ಅಸಲುದಾವೆಯ ವಿಚಾರಣೆಗೆ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ: ಮೈಸೂರಿನ ವಿ ವಿ ಮೊಹಲ್ಲಾದ ಕಾಳಿದಾಸ ರಸ್ತೆಯಲ್ಲಿರುವ ಮನೆಯಲ್ಲಿ ನಾನು ನೆಲೆಸಿದ್ದೇನೆ. ಈ ಮನೆಯನ್ನು ವಶಕ್ಕೆ ಪಡೆಯುವ ಉದ್ದೇಶದಿಂದ ನನಗೆ ಡಾ.ಮಹೇಶ್‌, ಅವರ ಪತ್ನಿ ಕಿರುಕುಳ ನೀಡುತ್ತಿದ್ದಾರೆ. ನನ್ನನ್ನು ಮನೆಯಿಂದ ಹೊರಹಾಕಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಮನೆಯಿಂದ ಪುತ್ರ ಮಹೇಶ್‌, ಅವರ ಕುಟುಂಬವನ್ನು ಖಾಲಿ ಮಾಡಲು ಆದೇಶಿಸಬೇಕು ಎಂದು ಕೋರಿ ಸುಭದ್ರಮ್ಮ ಪೋಷಕರ ನಿರ್ವಹಣೆ ಮತ್ತು ಹಿರಿಯ ನಾಗರಿಕ ಕಲ್ಯಾಣ ಕಾಯಿದೆ-2007ರ ಅಡಿ ಮೈಸೂರು ಉಪ ವಿಭಾಗಾಧಿಕಾರಿ ಮುಂದೆ ಅರ್ಜಿ ಸಲ್ಲಿಸಿದ್ದರು.

ಮೈಸೂರು ಉಪ ವಿಭಾಗಾಧಿಕಾರಿ, ಸುಭದ್ರಮ್ಮ ಅವರು ನೆಲೆಸಿರುವ ಮನೆಯಿಂದ ಖಾಲಿ ಮಾಡಬೇಕು ಎಂದು ಮಹೇಶ್‌ ಅವರಿಗೆ ನಿರ್ದೇಶಿಸಿ  2024ರ ಆಗಸ್ಟ್‌ 12ರಂದು ಆದೇಶಿಸಿದ್ದರು. ಆದೇಶವನ್ನು ಜಿಲ್ಲಾಧಿಕಾರಿ ಎತ್ತಿಹಿಡಿದ ಕಾರಣ  ಡಾ.ಮಹೇಶ್‌ ಹೈಕೋರ್ಟ್‌ಗೆ ಹೈಕೋರ್ಟ್‌ ಅರ್ಜಿ ಸಲ್ಲಿಸಿ, ಈ ಮನೆಯು ತಮ್ಮ ತಂದೆಯ ಸ್ವಯಾರ್ಜಿತವಾಗಿದೆ. ಮನೆಯ ಒಂದು ಭಾಗವನ್ನು ತಂದೆಯು ನಮ್ಮ ಹೆಸರಿಗೆ ಉಯಿಲು ಬರೆದಿದ್ದಾರೆ. ತಾಯಿ ನೆಲೆಸಿರುವ ಮನೆಯ ಭಾಗ/ಕೊಠಡಿಗೆ ತಾವು ಯಾವುದೇ ತೊಂದರೆ ಕೊಡುತ್ತಿಲ್ಲ ಎಂದು ಆಕ್ಷೇಪಿಸಿದ್ದರು. ತಾಯಿ ಸುಭದ್ರಮ್ಮ ಅವರು, ಮನೆ ಬಾಡಿಗೆಯಿಂದ ನನ್ನ ಜೀವನ ನಡೆಯುತ್ತಿದೆ. ಪುತ್ರ ವೃದ್ಧ ತಾಯಿಗೆ ಸಂಬಂಧಿಸಿದ ಜವಾಬ್ದಾರಿ ನಿರ್ವಹಿಸದೆ ಕೇವಲ ಉಯಿಲು ಮೇಲೆ ಯಾವುದೇ ಹಕ್ಕು ಕ್ಲೇಮು ಮಾಡುವಂತಿಲ್ಲ ಎಂದು ಪ್ರತಿವಾದ ಮಂಡಿಸಿದ್ದರು.