ಸುದ್ದಿಗಳು

ಮುಡಾ ಪ್ರಕರಣ: ತನಿಖೆಗೆ ಅನುಮತಿಸಿದ ರಾಜ್ಯಪಾಲರ ಆದೇಶ ಎತ್ತಿ ಹಿಡಿದ ಹೈಕೋರ್ಟ್‌; ಸಿಎಂ ಸಿದ್ದರಾಮಯ್ಯ ಅರ್ಜಿ ವಜಾ

ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್‌ 12ರಂದು ಪೂರ್ಣಗೊಳಿಸಿ, ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಇಂದು ಪ್ರಕಟಿಸಿತು.

Bar & Bench

ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ತಮ್ಮ ವಿರುದ್ಧದ ತನಿಖೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ವಜಾ ಮಾಡುವ ಮೂಲಕ ಮಹತ್ವದ ಆದೇಶ ಮಾಡಿದೆ. ಇದರೊಂದಿಗೆ ಮೊದಲ ಹಂತದ ಕಾನೂನು ಹೋರಾಟದಲ್ಲಿ ಸಿದ್ದರಾಮಯ್ಯ ಅವರಿಗೆ ತೀವ್ರ ಹಿನ್ನಡೆಯಾದಂತಾಗಿದೆ.

ರಾಜ್ಯಪಾಲರ ಆದೇಶ ರದ್ದತಿಗೆ ಕೋರಿ ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್‌ 12ರಂದು ಪೂರ್ಣಗೊಳಿಸಿ, ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಇಂದು ಪ್ರಕಟಿಸಿತು.

ರಾಜ್ಯಪಾಲರ ಆದೇಶವು ವಿವೇಚನಾ ಶೂನ್ಯವಾಗಿಲ್ಲ. ಎಲ್ಲವೂ ಕಾನೂನಿನ ಅನ್ವಯವಾಗಿದೆ. ತನಿಖಾಧಿಕಾರಿಯಿಂದ ಮುಂಚಿತವಾಗಿ ತನಿಖೆ ನಡೆಸಿ ವರದಿ ಪಡೆಯಬೇಕಾದ ಅಗತ್ಯವಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ. ಭ್ರಷ್ಟಾಚಾರ ನಿಗ್ರಹ ಕಾಯಿದೆ ಸೆಕ್ಷನ್‌ 17ಎ ಅಡಿ ಖಾಸಗಿ ವ್ಯಕ್ತಿಯೂ ಸಹ ತನಿಖೆಗೆ ಕೋರಿ ಅನುಮತಿ ಪಡೆಯಬಹುದು ಎಂದು ನ್ಯಾಯಾಲಯ ಹೇಳಿದೆ. ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ನೀಡಿದ್ದ ಮಧ್ಯಂತರ ಆದೇಶ ಮುಂದುವರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ದೂರುದಾರರು ದೂರನ್ನು ಮುಂದುವರಿಸಲು, ರಾಜ್ಯಪಾಲರಿಂದ ಅನುಮೋದನೆ ಪಡೆಯಲು ಸಮರ್ಥರಾಗಿದ್ದಾರೆ. ಸಾಮಾನ್ಯ ಸಂದರ್ಭಗಳಲ್ಲಿ, ಸಚಿವ ಸಂಪುಟದ ಸಲಹೆಯಂತೆ ಕಾರ್ಯನಿರ್ವಹಿಸುವುದು ರಾಜ್ಯಪಾಲರ ಕರ್ತವ್ಯ. ಆದಾಗ್ಯೂ, ಅವರು ಅಸಾಧಾರಣ ಸಂದರ್ಭಗಳಲ್ಲಿ ಸ್ವತಂತ್ರ ನಿರ್ಧಾರವನ್ನು ತೆಗೆದುಕೊಳ್ಳಬಹುದು ಮತ್ತು ಪ್ರಸ್ತುತ ಪ್ರಕರಣವು ಅಂತಹ ಒಂದು ಅಪವಾದವಾಗಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಖಾಸಗಿ ದೂರುದಾರರು ರಾಜ್ಯಪಾಲರಿಂದ ಮಂಜೂರಾತಿಯನ್ನು ಪಡೆಯಬಹುದು ಎಂದು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿರುವ ನ್ಯಾಯಾಲಯವು, ಪೊಲೀಸ್ ಅಧಿಕಾರಿಯೇ ಅನುಮತಿಯನ್ನು ಕೋರಬೇಕು ಎನ್ನುವ ಅಗತ್ಯವೇನೂ ಇಲ್ಲ, ಖಾಸಗಿ ದೂರುದಾರರೂ ಅನುಮತಿ ಕೋರಬಹುದು ಎಂದಿದೆ.

"ವಾಸ್ತವ ಪರಿಸ್ಥಿತಿಯಲ್ಲಿ 17A ಅಡಿಯಲ್ಲಿ ಅನುಮತಿ ಕಡ್ಡಾಯವಾಗಿದೆ. ಆದರೆ, ಖಾಸಗಿ ದೂರುದಾರರ ವಿಚಾರದಲ್ಲಿ BNSS ನ 200 ಅಥವಾ 223 ರ ಅಡಿಯಲ್ಲಿ ಪೊಲೀಸ್ ಅಧಿಕಾರಿಯು ಅನುಮತಿ ಕೋರಬೇಕೆನ್ನುವ ಅಗತ್ಯ ಎಲ್ಲಿಯೂ ಇಲ್ಲ. ಅಂತಹ ಅನುಮತಿಯನ್ನು ಪಡೆಯುವುದು ದೂರುದಾರರ ಕರ್ತವ್ಯವಾಗಿದೆ" ಎಂದು ನ್ಯಾಯಾಲಯ ಹೇಳಿದೆ.

ಹೈಕೋರ್ಟ್‌ನ ವಿವರವಾದ ಆದೇಶ ಹೀಗಿದೆ:

ಸಾಮಾನ್ಯ ಸಂದರ್ಭಗಳಲ್ಲಿ ರಾಜ್ಯಪಾಲರು ಸಂವಿಧಾನದ 163 ನೇ ವಿಧಿಯಂತೆ ಸಚಿವ ಸಂಪುಟದ ನೆರವು ಮತ್ತು ಸಲಹೆಯ ಮೇರೆಗೆ ಕಾರ್ಯನಿರ್ವಹಿಸಬೇಕು ಆದರೆ ಅಸಾಧಾರಣ ಸಂದರ್ಭಗಳು ಉದ್ಭವಿಸಿದರೆ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಪ್ರಸ್ತುತ ಪ್ರಕರಣವು ಅಂತಹ ಒಂದು ವಿನಾಯಿತಿ ಹೊಂದಿದೆ. ರಾಜ್ಯಪಾಲರು ಸ್ವತಂತ್ರ ವಿವೇಚನೆಯಿಂದ ಆದೇಶ ನೀಡಿರುವುದರಲ್ಲಿ ಯಾವುದೇ ದೋಷ ಕಂಡುಬರುವುದಿಲ್ಲ. ನಿರ್ಧಾರವನ್ನು ಮಾಡುವ ಪ್ರಾಧಿಕಾರಿಯು (ರಾಜ್ಯಪಾಲರು) ತನ್ನ ಉನ್ನತ ಕಚೇರಿಯ ಕಡತಗಳಲ್ಲಿ ನಿರ್ಧಾರದ ಹಿಂದಿನ ಕಾರಣಗಳನ್ನು ದಾಖಲಿಸಿದ್ದರೆ ಸಾಕಾಗುತ್ತದೆ. ಅಂತಹ ಕಾರಣಗಳು ಆಕ್ಷೇಪಿತ ಆದೇಶದ ಭಾಗವಾಗುತ್ತವೆ.

ರಾಜ್ಯಪಾಲರ ಅದೇಶದಲ್ಲಿ ಎಲ್ಲಿಯೂ ವಿವೇಚನಾರಾಹಿತ್ಯತೆ ಕಂಡುಬರುವುದಿಲ್ಲ. ಸ್ವಲ್ಪವೂ ವಿವೇಚನೆಯನ್ನು ಬಳಸದ ಪ್ರಕರಣ ಇದಲ್ಲದೆ, ಬದಲಿಗೆ ಅಗಾಧವಾದ ವಿವೇಚನೆಯನ್ನು ಬಳಸಿರುವುದು ಕಂಡುಬರುತ್ತದೆ.

ಭ್ರಷ್ಟಾಚಾರ ನಿಗ್ರಹ ಕಾಯಿದೆಯ ಸೆಕ್ಷನ್‌ 17 ಎ ಅಡಿ (ತನಿಖೆಗೆ) ಅನುಮತಿ ನೀಡುವುದಕ್ಕೂ ಮೊದಲು ವಿಚಾರಣೆ ಆಲಿಸಬೇಕು ಎಂಬುದು ಕಡ್ಡಾಯವಲ್ಲ. ಹಾಗೆ ಆಲಿಸಲು ಬಯಸುವುದು ಪ್ರಾಧಿಕಾರಕ್ಕೆ (ರಾಜ್ಯಪಾಲರಿಗೆ) ಬಿಟ್ಟ ವಿಚಾರವಾಗಿರುತ್ತದೆ.

ರಾಜ್ಯಪಾಲರು ಆತುರಾತುರವಾಗಿ ನಿರ್ಧಾರ ಕೈಗೊಂಡಿದ್ದಾರೆ ಎನ್ನುವುದು ಅವರ ಆದೇಶವನ್ನು ದೋಷಯುಕ್ತವಾಗಿಸಿಲ್ಲ. ಆದೇಶವು ಸೆಕ್ಷನ್‌ 17ಎ ಗೆ ಮಾತ್ರವೇ ಸೀಮಿತವಾಗಿರುವಂತದ್ದಾಗಿದೆ. ಅರ್ಜಿದಾರರ ಮನವಿಯಲ್ಲಿ (ರಾಜ್ಯಪಾಲರಿಗೆ ನೀಡಲಾಗಿರುವ ದೂರು) ವಿವರಿಸಲ್ಪಟ್ಟಿರುವ ವಿಷಯಗಳ ಬಗ್ಗೆ ಸಂಶಯಾತೀತವಾಗಿ ತನಿಖೆಯ ಅಗತ್ಯವಿದೆ.

ಪ್ರಸ್ತುತ ಪ್ರಕರಣದಲ್ಲಿ ಯಾರೋ ಹೊರಗಿನವರು ಫಲಾನುಭವಿಗಳಾಗಿರದೆ ಅರ್ಜಿದಾರರ (ಸಿದ್ದರಾಮಯ್ಯ) ಕುಟುಂಬಕ್ಕೆ ಸೇರಿದವರೇ ಫಲಾನುಭವಿಗಳಾಗಿರುವ ವಾಸ್ತವದ ಹಿನ್ನೆಲೆಯಲ್ಲಿ ಇದು (ತನಿಖೆ) ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅರ್ಜಿದಾರರ ಮನವಿಯನ್ನು ವಜಾಗೊಳಿಸಲಾಗಿದೆ ಎಂದು ಹೈಕೋರ್ಟ್‌ ತನ್ನ ಆದೇಶದಲ್ಲಿ ಹೇಳಿದೆ.

ಹಿನ್ನೆಲೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಯ ಒಡೆತನದ್ದು ಎನ್ನಲಾದ ಕೃಷಿ ಭೂಮಿಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ವಶಪಡಿಸಿಕೊಂಡು ಭೂಮಿಗೆ ಪರ್ಯಾಯವಾಗಿ 14 ನಿವೇಶನ ಹಂಚಿಕೆ ಮಾಡಿರುವುದು ವಿವಾದದ ಕೇಂದ್ರ ಬಿಂದುವಾಗಿದೆ. ಪರಿಹಾರವಾಗಿ ನಿವೇಶನಗಳನ್ನು ನೀಡಿರುವ ಪ್ರಕ್ರಿಯೆ ಅಕ್ರಮದಿಂದ ಕೂಡಿದೆ. ಇಡೀ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯನವರು ಪ್ರಭಾವ ಬೀರಿರುವುದು ಕಂಡು ಬಂದಿದೆ ಎಂದು ಸಲ್ಲಿಕೆಯಾದ ಖಾಸಗಿ ದೂರುಗಳನ್ನು ಆಧರಿಸಿ ಪ್ರಕರಣದ ತನಿಖೆಗಾಗಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನಾ (ಪ್ರಾಸಿಕ್ಯೂಷನ್) ಮಂಜೂರಾತಿ ನೀಡಿದ್ದರು. ಇದನ್ನು ರದ್ದುಪಡಿಸಲು ಕೋರಿ ಸಿದ್ದರಾಮಯ್ಯನವರು ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಡಾ. ಅಭಿಷೇಕ್‌ ಮನು ಸಿಂಘ್ವಿ ಅವರು “ರಾಜ್ಯ ಸಚಿವ ಸಂಪುಟವು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೀಡಿದ್ದ ಶೋಕಾಸ್‌ ನೋಟಿಸ್‌ ಹಿಂಪಡೆಯುವ ಶಿಫಾರಸ್ಸಿನಲ್ಲಿ ಉಲ್ಲೇಖಿಸಿರುವ ಅಂಶಗಳಲ್ಲಿ ಎದ್ದು ಕಾಣುವ ಅತಾರ್ಕಿಕ ಅಂಶಗಳನ್ನು ರಾಜ್ಯಪಾಲರ ಅಭಿಯೋಜನಾ ಮಂಜೂರಾತಿ ಆದೇಶದಲ್ಲಿ ಪಟ್ಟಿ ಮಾಡಿಲ್ಲ. ಬದಲಾಗಿ, ಸಂಪುಟದ ಶಿಫಾರಸ್ಸು ಪಕ್ಷಪಾತಿ ಎಂಬುದನ್ನಷ್ಟೇ ರಾಜ್ಯಪಾಲರು ಹೇಳಿದ್ದಾರೆ. ಆ ಮೂಲಕ ಸ್ವತಂತ್ರವಾಗಿ ವಿವೇಚನೆ ಬಳಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 17ಎ ಅಡಿ ತನಿಖೆಗೆ ಅನುಮತಿಸುವಾಗ ತನಿಖಾಧಿಕಾರಿ ಅಭಿಪ್ರಾಯ ರೂಪಿಸಿರಬೇಕು. ಇದೂ ಹಾಲಿ ಪ್ರಕರಣದಲ್ಲಿ ಅನುಪಾಲನೆಯಾಗಿಲ್ಲ.ಹೀಗಾಗಿ, ರಾಜ್ಯಪಾಲರ ಆದೇಶವನ್ನು ವಜಾ ಮಾಡಬೇಕು” ಎಂದು ಕೋರಿದ್ದರು.

ಮತ್ತೊಬ್ಬ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್‌ ಅವರು “ಕೆಸರೆ ಗ್ರಾಮದಲ್ಲಿನ ಆಕ್ಷೇಪಾರ್ಹವಾದ ಸರ್ವೆ ನಂ. 464ರಲ್ಲಿನ 3.16 ಗುಂಟೆ ಭೂಮಿಯನ್ನು ಮುಡಾ ಡಿನೋಟಿಫೈ ಮಾಡಿದ್ದು, ದೇವನೂರು ಲೇಔಟ್‌ ರೂಪಿಸುವಾಗ ಅದನ್ನು ವಶಕ್ಕೆ ಪಡೆಯಲಾಗಿಲ್ಲ. ಸಿದ್ದರಾಮಯ್ಯನವರ ಬಾವಮೈದುನನಿಗೆ ಅದನ್ನು ಮಾರಾಟ ಮಾಡುವಾಗ ಅದರ ಒಡೆತನ ಮೂಲ ಭೂಮಾಲೀಕರ ಬಳಿಯೇ ಇತ್ತೇ ಹೊರತು ಮುಡಾ ಬಳಿ ಅಲ್ಲ. ಆ ವೇಳೆ ಅದು ಕೃಷಿ ಭೂಮಿಯೇ ಆಗಿತ್ತು. ಆಕ್ಷೇಪಾರ್ಹವಾದ ಭೂಮಿಯನ್ನು ಮುಡಾ ತನ್ನ ವಶಕ್ಕೆ ಪಡೆದಿರಲಿಲ್ಲ. 1993ರಲ್ಲಿ ಆಕ್ಷೇಪಾರ್ಹವಾದ ಭೂಮಿ ಸೇರಿದಂತೆ ಹಲವು ಜಮೀನುಗಳನ್ನು ವಶಪಡಿಸಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಮುಡಾ ಒಟ್ಟಾರೆಯಾಗಿ ಒಂದು ಕೋಟಿಗೂ ಅಧಿಕ ಪರಿಹಾರ ನೀಡಿತ್ತು. ಇನ್ನು ದೂರುದಾರರು ಕೆಸರೆ ಗ್ರಾಮವೇ ಇಲ್ಲ ಎಂದು ವಾದಿಸಿದ್ದಾರೆ. 2011ರ ಜನಗಣತಿಯ ಪ್ರಕಾರ ಕೆಸರೆ ಗ್ರಾಮ ಇದ್ದು, ಅಲ್ಲಿ ಜನವಸತಿ ಮತ್ತು ಆಸ್ಪತ್ರೆ ಇತ್ಯಾದಿಗಳು ಇದ್ದವು. ಇದಕ್ಕೆ ಸಂಬಂಧಿಸಿದಂತೆ ಜನಗಣತಿಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ” ಎಂದು ವಾದಿಸಿದ್ದರು.

ರಾಜ್ಯಪಾಲರ ವಿಶೇಷ ಕರ್ತವ್ಯಾಧಿಕಾರಿ ಪರವಾಗಿ ವಾದಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು “ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನಾ ಮಂಜೂರಾತಿ ನೀಡಿರುವ ಪ್ರಕರಣದಲ್ಲಿ ರಾಜ್ಯಪಾಲರು ಸಂಪುಟ ಸಭೆಯ ಶಿಫಾರಸ್ಸನ್ನು ಆಧರಿಸಬೇಕಿಲ್ಲ. ಮೇಲ್ನೋಟಕ್ಕೆ ತನಿಖಾ ಸಂಸ್ಥೆಯು ಕಾನೂನಿನ ಅಡಿ ಪ್ರಕರಣದ ತನಿಖೆ ನಡೆಸಬೇಕಿದೆಯೇ ಎಂಬುದರ ಪ್ರಕಾರ ರಾಜ್ಯಪಾಲರು ಮುನ್ನಡೆದಿದ್ದಾರೆ. ರಾಜ್ಯಪಾಲರ ನಿರ್ಧಾರವು ವಾಸ್ತವಿಕ ಅಂಶಗಳನ್ನು ಆಧರಿಸಿ, ವಿವೇಚನಾಯುತವಾಗಿದೆ. ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 17ಎ ಎಲ್ಲಾ ಕಡೆ ಅನ್ವಯವಾಗುತ್ತದೆ. ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ದೂರನ್ನು ಓದಿದ ಬಳಿಕ ರಾಜ್ಯಪಾಲರಿಗೆ ಮೇಲ್ನೋಟಕ್ಕೆ ಅಧಿಕಾರ ದುರ್ಬಳಕೆ ಕಂಡು ಬಂದಿರುವುದರಿಂದ ಮುಖ್ಯಮಂತ್ರಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದಾರೆ” ಎಂದು ವಾದಿಸಿದ್ದರು.

ಮುಂದುವರಿದು, “ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 17ಎ ಅಧಿಕಾರದ ಮೂಲ ಗುಣವೇ ಕಾರ್ಯಕಾರಿ ಮತ್ತು ಆಡಳಿತಾತ್ಮಕವಾಗಿದೆ. ಇದರ ಅಡಿ ಅನುಮತಿ ನೀಡುವಾಗ ಆರೋಪಿಯ ವಾದ ಆಲಿಸಬೇಕಿಲ್ಲ. ಸೆಕ್ಷನ್‌ 17ಎ ಹಂತದಲ್ಲಿ ಸಹಜ ನ್ಯಾಯ ತತ್ವ ಅನ್ವಯಿಸುವುದಿಲ್ಲ. ಸೆಕ್ಷನ್‌ 19ರ ಹಂತದಲ್ಲೂ ಸಹಜ ನ್ಯಾಯತತ್ವ ಅನ್ವಯಿಸದು. ಸಂಪುಟ ಸಭೆಯ ನಿರ್ಣಯವು ಏಕೆ ಪಕ್ಷಪಾತದಿಂದ ಕೂಡಿದೆ ಎಂಬುದಕ್ಕೆ ರಾಜ್ಯಪಾಲರು ತಮ್ಮದೇ ನೋಟ್ಸ್‌ ಮಾಡಿದ್ದಾರೆ. ನಬಮ್‌ ರೇಬಿಯಾ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ರಾಜ್ಯಪಾಲರ ವಿವೇಚನೆಗೆ ಸಂಬಂಧಿಸಿದಂತೆ ಏನು ಹೇಳಿದೆ ಎಂಬುದನ್ನು ಡಾ. ಅಭಿಷೇಕ್‌ ಮನು ಸಿಂಘ್ವಿ ಗೊಂದಲ ಮಾಡಿಕೊಂಡಿದ್ದಾರೆ. ನಬಮ್‌ ರೇಬಿಯಾ ತೀರ್ಪು ನಮ್ಮ ಪರವಾಗಿದ್ದು, ಸಂಪುಟದ ನಿರ್ಣಯದಲ್ಲಿನ ಪಕ್ಷಪಾತ ಸಾಧ್ಯತೆಗೆ ಸಂಬಂಧಿಸಿದಂತೆಯೂ ತೀರ್ಪುಗಳನ್ನು ಉಲ್ಲೇಖಿಸಿದ್ದೇನೆ” ಎಂದಿದ್ದರು.

ರಾಜ್ಯ ಸರ್ಕಾರದ ಪರವಾಗಿ ವಾದಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನಾ ಮಂಜೂರಾತಿ ನೀಡುವುದಕ್ಕೂ ಮುನ್ನ ತನಿಖಾಧಿಕಾರಿಯ ಪ್ರಾಥಮಿಕ ತನಿಖಾ ವರದಿ ಆಧರಿಸಿ ಸಕ್ಷಮ ಪ್ರಾಧಿಕಾರವಾದ ರಾಜ್ಯಪಾಲರು ನಿರ್ಧರಿಸಬೇಕಿತ್ತು. ಆದರೆ, ರಾಜ್ಯಪಾಲರು ತಾವೇ ತನಿಖಾಧಿಕಾರಿಯ ರೀತಿಯಲ್ಲಿ ನಡೆದುಕೊಂಡಿದ್ದಾರೆ” ಎಂದು ಆಕ್ಷೇಪಿಸಿದ್ದರು.

ಕೇವಿಯೇಟರ್ ಸ್ನೇಹಮಯಿ ಕೃಷ್ಣ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮಣೀಂದರ್‌ ಸಿಂಗ್‌ ಅವರು “ತನಿಖೆಗೆ ಇದು ಸೂಕ್ತವಾದ ಪ್ರಕರಣ. ಸರ್ಕಾರದ ಎಲ್ಲಾ ವಿಭಾಗಗಳು ಒಂದೇ ರೀತಿಯ ಪ್ರತಿಕ್ರಿಯೆ ಸಲ್ಲಿಸಿದರೆ ರಾಜ್ಯ ಸರ್ಕಾರದ ಅಂಗ ಸಂಸ್ಥೆ ಹೇಗೆ ತನಿಖೆ ನಡೆಸುತ್ತದೆ? ಭೂಮಿಯ ಡಿನೋಟಿಫಿಕೇಶನ್‌ ಒಪ್ಪಬೇಕೆ ಅಥವಾ ಬೇಡವೇ ಎಂಬ ವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನಿರ್ಧರಿಸಬೇಕಿದೆ. ಇದೇ ತನಿಖೆಯ ವಸ್ತುವಾಗಿರಲಿದೆ. ಸೆಕ್ಷನ್‌ 48ರ ಅಡಿ ಭೂಮಿ ಬಿಡುಗಡೆ ಮಾಡಿರುವುದನ್ನು ನಾನು ಸಮರ್ಥಿಸುತ್ತಿಲ್ಲ. ಅದು ಅಸಾಧ್ಯ ಎಂಬುದನ್ನು ತೋರ್ಪಡಿಸುತ್ತಿದ್ದೇನೆ. ಇಲ್ಲಿ ಕೈಚಳಕ ನಡೆದಿರುವುದು ಸ್ಪಷ್ಟವಾಗಿದೆ” ಎಂದಿದ್ದರು.

ಸ್ನೇಹಮಯಿ ಕೃಷ್ಣ ಪರವಾಗಿ ವಾದಿಸಿದ್ದ ಕೆ ಜಿ ರಾಘವನ್‌ ಅವರು “ಸಾರ್ವಜನಿಕ ಹಿತಾಸಕ್ತಿ ಅಡಗಿರುವುದರಿಂದ ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶ ಹೊಂದಲಾಗಿದೆ. ಮಾಧ್ಯಮಗಳಲ್ಲಿ ಮುಡಾ ಹಗರಣ ವರದಿಯಾದ ಬೆನ್ನಿಗೇ ರಾಜ್ಯ ಸರ್ಕಾರ ಐಎಎಸ್‌ ಅಧಿಕಾರಿ (ವೆಂಕಟಾಚಲಪತಿ) ನೇತೃತ್ವದಲ್ಲಿ ಆನಂತರ ಹೈಕೋರ್ಟ್‌ನ ನಿವೃತ್ತ (ಪಿ ಎನ್‌ ದೇಸಾಯಿ) ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿದೆ. ಇದು ಸಾರ್ವಜನಿಕ ನಂಬಿಕೆ ಹಾಳಾಗಿರುವುದಕ್ಕೆ ಉತ್ತರವಾಗಿದೆ. ಉನ್ನತ ಸಾಂವಿಧಾನಿಕ ಹುದ್ದೆ ಅಲಂಕರಿಸಿರುವ ವ್ಯಕ್ತಿಯ ವಿರುದ್ಧ ತನಿಖೆ ಕೋರಲಾಗಿದೆ. ಕೊನೆಯಲ್ಲಿ ಸಿದ್ದರಾಮಯ್ಯ ಅವರು ಆರೋಪಮುಕ್ತವಾಗಬಹುದು. ಆದರೆ, ನ್ಯಾಯಾಲಯವು ಇಂಥ ವಿಚಾರಗಳಲ್ಲಿ ತನಿಖೆಗೆ ಬೆಂಬಲ ಸೂಚಿಸಬೇಕು” ಎಂದಿದ್ದರು.

ಜೆಡಿಎಸ್‌ ಕಾನೂನು ಘಟಕದ ಅಧ್ಯಕ್ಷ ಪಿ ಎಸ್‌ ಪ್ರದೀಪ್‌ ಕುಮಾರ್‌ ಪ್ರತಿನಿಧಿಸಿರುವ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ತಮಗಿರುವ ಆಸಕ್ತಿಯ ಕಾರಣಕ್ಕೆ ಸಂಪುಟದ ಸಚಿವರು ಪ್ರಕರಣದಲ್ಲಿ ಪಕ್ಷಪಾತಿಗಳಾಗುವ ಸಾಧ್ಯತೆಯಿಂದಾಗಿ ರಾಜ್ಯಪಾಲರಿಗೆ ಸಲಹೆ ನೀಡುವ ಅಧಿಕಾರದಿಂದ ವಂಚಿತರಾಗುತ್ತಾರೆ. ರಾಜ್ಯಪಾಲರು ಸಚಿವ ಸಂಪುಟದ ಸಲಹೆಯನುಸಾರ ಕರ್ತವ್ಯವನ್ನು ನಿರ್ವಹಿಸುವುದು ಮಾತ್ರವೇ ಅಲ್ಲದೆ ಸಂವಿಧಾನದ ರಕ್ಷಕರಾಗಿಯೂ ತಮ್ಮ ಕಚೇರಿಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತಿರುತ್ತಾರೆ” ಎಂದಿದ್ದರು.

ಸ್ನೇಹಮಯಿ ಕೃಷ್ಣ ಪರವಾಗಿ ಹಿರಿಯ ವಕೀಲೆ ಲಕ್ಷ್ಮಿ ಐಯ್ಯಂಗಾರ್‌, ಟಿ ಜೆ ಅಬ್ರಹಾಂ ಪರವಾಗಿ ವಕೀಲ ರಂಗನಾಥ್ ರೆಡ್ಡಿ ವಾದಿಸಿದ್ದರು. ಸಿದ್ದರಾಮಯ್ಯ ಪರವಾಗಿ ವಕೀಲ ಶತಭಿಷ್‌ ಶಿವಣ್ಣ, ರಾಜ್ಯಪಾಲರ ವಿಶೇಷ ಕರ್ತವ್ಯಾಧಿಕಾರಿ ಪರವಾಗಿ ವಕೀಲ ಕೆ ಅಭಿಷೇಕ್‌ ವಕಾಲತ್ತು ಹಾಕಿದ್ದರು.