Justice B Padmaraj 
ಸುದ್ದಿಗಳು

ಕರ್ನಾಟಕ ಹೈಕೋರ್ಟ್‌ನ ನಿವೃತ್ತ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಬಿ ಪದ್ಮರಾಜ ನಿಧನ

ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಯಾಗಿ 30.11.1994ರಲ್ಲಿ ನೇಮಕಗೊಂಡಿದ್ದ ಪದ್ಮರಾಜ ಅವರು 29.11.2005 ರಿಂದ 06.01.2006ರವರೆಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

Bar & Bench

ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ ಪದ್ಮರಾಜ ಶುಕ್ರವಾರ (ನ. 8) ಬೆಳಗಿನ ಜಾವ ನಗರದ ಮಹಾವೀರ ಜೈನ್ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ ಪತ್ನಿ, ಒಬ್ಬ ಪುತ್ರ ಮತ್ತು ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ಶುಕ್ರವಾರ ಸಂಜೆ ಹೆಬ್ಬಾಳ ಚಿತಾಗಾರದಲ್ಲಿ ನೆರವೇರಿತು.

ವರ್ತಕ ಕುಟುಂಬದ ಹಿನ್ನೆಲೆಯ ಪದ್ಮರಾಜ ಅವರು 1944ರ ಅಕ್ಟೋಬರ್ 6ರಂದು ಚಿತ್ರದುರ್ಗದಲ್ಲಿ ಜನಿಸಿದರು. ಪ್ರಾಥಮಿಕ ಹಂತದಿಂದ ಕಾಲೇಜು ವರೆಗಿನ ಶಿಕ್ಷಣವನ್ನು ಚಿತ್ರದುರ್ಗದಲ್ಲಿಯೇ ಪೂರೈಸಿದರು. ಚಿತ್ರದುರ್ಗದ ಸರಸ್ವತಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. 

1969ರ ಜುಲೈ 26ರಂದು ವಕೀಲರಾಗಿ ಸನ್ನದು ಪಡೆದಿದ್ದ ಅವರು, ಬಾಲಸುಬ್ರಹ್ಮಣ್ಯಂ ಅವರ ಬಳಿ ಕಿರಿಯ ವಕೀಲರಾಗಿ ವೃತ್ತಿ ಆರಂಭಿಸಿ 1983ರವರೆಗೆ ವಕೀಲಿಕೆ ನಡೆಸಿದ್ದರು.

1983ರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿದ್ದ ಅವರು ಕಲಬುರಗಿ, ಬೆಂಗಳೂರು, ಕೋಲಾರ, ಧಾರವಾಡ, ಮಂಗಳೂರಿನಲ್ಲಿ ಜಿಲ್ಲಾ ಪ್ರಧಾನ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದರು. 30.11.1994ರಲ್ಲಿ ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ಅವರು 29.11.2005 ರಿಂದ 06.01.2006ರವರೆಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಈ ಮಧ್ಯೆ, ನ್ಯಾಯಾಂಗ ಅಕಾಡೆಮಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.

ನಿವೃತ್ತಿಯ ನಂತರ 2007ರಿಂದ 2009ರವರೆಗೆ ರೈಲ್ವೆ ಕ್ಲೇಮು ನ್ಯಾಯಮಂಡಳಿ ಅಧ್ಯಕ್ಷರಾಗಿ ದೆಹಲಿಯಲ್ಲಿದ್ದರು. ನಂತರ ಶಿಕ್ಷಣ ಇಲಾಖೆಯ ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷರಾಗಿದ್ದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಬಿಡಿಎ) ವಿವೇಚನಾ (ಜಿ) ಕೋಟಾದಡಿ 1985ರಿಂದ `ಜಿ' ಕೋಟಾದಡಿ ಹಂಚಿಕೆ ಮಾಡಲಾಗಿದ್ದ 1,620 ನಿವೇಶನಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಕುರಿತಂತೆ ವಿಚಾರಣೆ ನಡೆಸಲು ನೇಮಕ ಮಾಡಲಾಗಿದ್ದ ಮೂವರು ಸದಸ್ಯರ ನೇತೃತ್ವದ ಸಮಿತಿಗೂ ಅಧ್ಯಕ್ಷರಾಗಿದ್ದರು.