ಕರ್ನಾಟಕ ಹೈಕೋರ್ಟ್ 
ಸುದ್ದಿಗಳು

ಎಂ ಡಿ ಸೀಟು ಹಂಚಿಕೆ ಪ್ರಕರಣ: ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್

ಸೀಟು ಲಭ್ಯವಿಲ್ಲದೆ ಇದ್ದರೂ ಎರಡನೇ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಪ್ರತಿವಾದಿಯೊಬ್ಬರಿಗೆ ಸೀಟು ಹೇಗೆ ಹಂಚಿಕೆ ಮಾಡಲಾಗಿದೆ ಎಂಬುದನ್ನು ತೋರಿಸಲು ಕೆಇಎ ವಿಫಲವಾಗಿದೆ ಎಂದು ಹೇಳಿದ ನ್ಯಾಯಾಲಯ.

Bar & Bench

ರಾಜೀವ್ ಗಾಂಧಿ ಉಸಿರಾಟ ಮತ್ತು ಎದೆ ರೋಗಗಳ ಸಂಸ್ಥೆಯಲ್ಲಿ ಡಾಕ್ಟರ್‌ ಆಫ್‌ ಮೆಡಿಸಿನ್ (ಎಂ ಡಿ) ರೆಸ್ಪಿರೇಟರಿ ಮೆಡಿಸಿನ್‌ನಲ್ಲಿ ಅಕ್ರಮವಾಗಿ ಸೀಟು ಹಂಚಿಕೆ ಮಾಡಿದ್ದಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಹೈಕೋರ್ಟ್ ಗುರುವಾರ ₹1 ಲಕ್ಷ ದಂಡ ವಿಧಿಸಿದೆ [ಡಾ.ರಾಜೇಶ್ ಕುಮಾರ್ ಡಿ ವಿ ಕರ್ನಾಟಕ ರಾಜ್ಯ ಮತ್ತು ಒರಿಸ್ಸಾ.]

ನಿಕಟಪೂರ್ವ ಮುಖ್ಯ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠವು ಸೀಟು ಲಭ್ಯವಿಲ್ಲದೆ ಇದ್ದರೂ ಹೇಗೆ ಎರಡನೇ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಪ್ರತಿವಾದಿಯೊಬ್ಬರಿಗೆ ಸೀಟು ಹಂಚಿಕೆ ಮಾಡಲಾಗಿದೆ ಎಂಬುದನ್ನು ತೋರಿಸಲು ಕೆಇಎ ವಿಫಲವಾಗಿದೆ ಎಂದು ಹೇಳಿದೆ.

ಕಾಲೇಜಿನ ಎಂಡಿ ರೆಸ್ಪಿರೇಟರಿ ಮೆಡಿಸಿನ್‌ನಲ್ಲಿ ತನ್ನ ಸ್ಥಾನ ಮರುಸ್ಥಾಪಿಸುವಂತೆ ಕೋರಿ ಡಾ.ರಾಜೇಶ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಅರ್ಜಿದಾರರು 2021ರಲ್ಲಿ ನೀಟ್ ಪಿಜಿಗೆ ಹಾಜರಾಗಿದ್ದು, ಸ್ವಾಯತ್ತ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವಾಗಲೇ ಸೇವೆಯಲ್ಲಿರುವ ಅಭ್ಯರ್ಥಿಯಾಗಿ ಅವರು ಪರಿಶಿಷ್ಟ ಜಾತಿ (ಎಸ್ಸಿ) ಕೋಟಾದಡಿ ಸೀಟು ಕೋರಿದ್ದರು.

ಸ್ನಾತಕೋತ್ತರ ಪದವಿ ಅಧ್ಯಯನ ಮುಂದುವರಿಸಲು ಅವರು ನಿರಪೇಕ್ಷಣಾ ಪತ್ರ (ಎನ್ಒಸಿ) ಪಡೆದಿದ್ದು, ಫೆಬ್ರವರಿ 2, 2022ರಂದು ಮೊದಲ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಸೀಟು ಪಡೆದಿದ್ದರು.

ಒಂದು ತಿಂಗಳ ನಂತರ, ಅರ್ಜಿದಾರರ ಸೀಟು ರದ್ದುಗೊಳಿಸುವಂತೆ ಕೆಇಎಗೆ ಸೂಚನೆ ನೀಡಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ (ಡಿಎಂಇ) ಬರೆದ ಪತ್ರದ ಪ್ರತಿಯನ್ನು ಕೆಇಎ ಅರ್ಜಿದಾರರಿಗೆ ಕಳುಹಿಸಿತ್ತು. ಆದರೆ ಈ ಸೀಟನ್ನು ಎರಡನೇ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ತೋರಿಸುವ ಬದಲಿಗೆ ರಹಸ್ಯವಾಗಿ ಇನ್ನೊಬ್ಬ ಅಭ್ಯರ್ಥಿಗೆ ಹಂಚಿಕೆ ಮಾಡಲಾಗಿತ್ತು.

ನೋಟಿಸ್ ನೀಡದೆ ಮತ್ತು ತನ್ನ ವಾದ ಆಲಿಸದೇ ಸೀಟು ರದ್ದುಗೊಳಿಸುವಂತೆ ಡಿಎಂಇ ನೀಡಿದ ಸೂಚನೆಗಳು ನೈಸರ್ಗಿಕ ನ್ಯಾಯತತ್ವ ಉಲ್ಲಂಘಿಸಿವೆ ಎಂದು ವಾದಿಸಿ, ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ದಾಖಲೆ ಪರಿಶೀಲನೆಯ ಸಮಯದಲ್ಲಿ, ಅರ್ಜಿದಾರರು ಎನ್ಒಸಿ ಸಲ್ಲಿಸುವುದಾಗಿ ಹೇಳಿದ್ದರು. ಆದರೆ, ಸಾಕಷ್ಟು ಅವಕಾಶ ನೀಡಿದ್ದರೂ ಅದನ್ನು ಮಾಡಲು ವಿಫಲರಾಗಿದ್ದಾರೆ, ಇದು ಅವರ ಸೀಟು ರದ್ದುಗೊಳಿಸಲು ಕಾರಣವಾಯಿತು ಎಂದು ಕೆಇಎ ಪರ ವಕೀಲರು ವಾದಿಸಿದ್ದರು.

ಆದರೆ, ಸೀಟು ಹಂಚಿಕೆಯಲ್ಲಿ ಕೆಇಎ ಸರಿಯಾದ ಕಾರ್ಯವಿಧಾನ ಅನುಸರಿಸಿಲ್ಲ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಹೇಳಿದ್ದು, ಸಮಗ್ರ ತನಿಖೆ ನಡೆಸಲು ಕೋರಿದೆ ಎನ್ನುವ ಅಂಶವನ್ನು ಹೈಕೋರ್ಟ್‌ ಗಮನಿಸಿತು.

ಅರ್ಜಿದಾರರಿಗೆ ಕೆಇಎ ನೀಡಿದ ದಾಖಲೆ ಪರಿಶೀಲಿಸಿದ ಮೇಲೆ ನ್ಯಾಯಾಲಯವು ಎನ್ಒಸಿ ಸಲ್ಲಿಸಲಾಗಿರುವ ಅಂಶವನ್ನು ಮನಗಂಡಿತು.

ಎನ್ಒಸಿ ಬೇರೆ ಕೋರ್ಸ್‌ಗಾಗಿ ಪಡೆಯಲಾಗಿದೆ ಎಂದು ಕೆಇಎ ವಾದಿಸಿತು. ಆದರೆ, ಕೆಇಎ ತನ್ನ ವಾದ ದಾಖಲಿಸುವ ಬದಲು ಎನ್ಒಸಿ ತಿರಸ್ಕರಿಸಬೇಕಾಗಿತ್ತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೇ, ಅರ್ಜಿದಾರರು ಎಂಬಿಬಿಎಸ್ ಪೂರ್ಣಗೊಳಿಸಿದ ಜಯದೇವ ಸಂಸ್ಥೆಯಿಂದ ಕೆಇಎ ಸ್ಪಷ್ಟನೆ ಪಡೆಯಬಹುದಿತ್ತು ಎಂದು ನ್ಯಾಯಾಲಯ ಹೇಳಿದೆ.

ಯಾವ ಅಭ್ಯರ್ಥಿಗೆ ಆನಂತರ ಸೀಟು ಹಂಚಿಕೆ ಮಾಡಲಾಗಿತ್ತೋ ಆ ಅಭ್ಯರ್ಥಿಯು ಡಿಎಂಇಗೆ ಪತ್ರ ಬರೆದ ನಂತರ ಆ ಸೀಟನ್ನು ರದ್ದುಪಡಿಸಲಾಗಿತ್ತು ಎನ್ನುವ ಅಂಶವನ್ನು ನ್ಯಾಯಾಲಯ ಗಮನಿಸಿತು. ಅಲ್ಲದೆ, ಆತ ಪತ್ರ ಬರೆದ ಏಳು ದಿನಗಳ ಅದರ ಪ್ರತಿಯನ್ನು ಅರ್ಜಿದಾರರಿಗೆ ಕಳುಹಿಸಲಾಗಿತ್ತು ಎನ್ನುವುದನ್ನು ಕಂಡುಕೊಂಡಿತು.

ಇದಲ್ಲದೆ, ಪಿಜಿ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ರೂಪಿಸಲಾಗಿರುವ ನಿಯಮಾವಳಿಗಳ ಅನ್ವಯ ಅರ್ಜಿದಾರರ ವಾದವನ್ನು ಆಲಿಸಲು ಅವಕಾಶ ನೀಡಲಾಗಿಲ್ಲ ಎನ್ನುವ ಅಂಶ ನ್ಯಾಯಾಲಯದ ಗಮನಕ್ಕೆ ಬಂದಿತು.

"ಎರಡನೇ ಸುತ್ತಿನ ಕೌನ್ಸೆಲಿಂಗ್ ನಲ್ಲಿ ಯಾವುದೇ ಸೀಟು ಲಭ್ಯವಿಲ್ಲದೆ ಇರುವಾಗ ಹೇಗೆ ಆರನೇ ಪ್ರತಿವಾದಿಗೆ ಸೀಟು ಹಂಚಿಕೆ ಮಾಡಲಾಗಿದೆ ಎಂಬುದನ್ನು ವಿವರಿಸಲು ಕೆಇಎ ವಿಫಲವಾಗಿದೆ" ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ.

ಈ ನಡುವೆ ಕೆಇಎ ಮತ್ತು ಸೀಟು ಪಡೆದ ಅಭ್ಯರ್ಥಿ ಇಬ್ಬರೂ ಒಂದೊಮ್ಮೆ ಸೀಟು ಹಂಚಿಕೆ ಕಾನೂನುಬಾಹಿರ ಎಂದು ಪರಿಗಣಿತವಾದರೂ ಅದರ ಪರಿಣಾಮವು ಇದಾಗಲೇ ಸೀಟು ಪಡೆದಿರುವ ಅಭ್ಯರ್ಥಿಯು ಕೋರ್ಸ್‌ನ ಒಂದು ವರ್ಷವನ್ನು ಪೂರ್ಣಗೊಳಿಸಿರುವುದರಿಂದ ಅವರ ಮೇಲೆ ಬೀರುವಂತಾಗಬಾರದು ಎಂದು ವಾದಿಸಿದ್ದರು. ಆದರೆ, ನ್ಯಾಯಾಲಯ ಈ ಮನವಿಯನ್ನು ತಿರಸ್ಕರಿಸಿತು.

ಅಲ್ಲದೆ, ಅರ್ಜಿದಾರ ಅಭ್ಯರ್ಥಿಗೆ ಈ ಹಿಂದೆ ಯಾವ ಕೋರ್ಸ್‌ಗೆ, ಯಾವ ಸಂಸ್ಥೆಯಲ್ಲಿ ಸೀಟು ನೀಡಲಾಗಿತ್ತೋ ಅದೇ ಸಂಸ್ಥೆಯಲ್ಲಿ, ಅದೇ ಕೋರ್ಸ್‌ಗೆ ಸೀಟು ಹಂಚಿಕೆ ಮಾಡುವ ಪ್ರಸ್ತಾಪವನ್ನು ಕೆಇಎ ಮಾಡಿತು. ಅದರೆ, ನ್ಯಾಯಾಲಯವು ಈ ಆಯ್ಕೆಯನ್ನು ತಿರಸ್ಕರಿಸಿತು. ಇದು ಅರ್ಜಿದಾರರ ಆರೋಪವನ್ನು ಹತ್ತಿಕ್ಕುವ ಮತ್ತು ಅಕ್ರಮ ಹಂಚಿಕೆಯನ್ನು ಮರೆಮಾಚುವ ಪ್ರಯತ್ನವಾಗಿದೆ ಎಂದು ಹೇಳಿತು.

ಅರ್ಜಿದಾರರಿಗೆ ನಿಗದಿಪಡಿಸಿದ ಸ್ಥಾನವನ್ನು ಏಕಪಕ್ಷೀಯವಾಗಿ ರದ್ದುಪಡಿಸುವುದು ಮತ್ತು ಆನಂತರ ಇತರ ಅಭ್ಯರ್ಥಿಗೆ ಹಂಚಿಕೆ ಮಾಡುವುದು ಕಾನೂನುಬಾಹಿರ ಎಂದು ನ್ಯಾಯಾಲಯ ಹೇಳಿತು. ಇದರ ಪರಿಣಾಮವಾಗಿ, ಅಕ್ರಮವಾಗಿ ಮಾಡಲಾಗಿದ್ದ ಸೀಟು ಹಂಚಿಕೆಯನ್ನು ರದ್ದುಗೊಳಿಸಿತು. ಅಲ್ಲದೆ, ಅರ್ಜಿದಾರರಿಗೆ ಸೀಟು ಹಂಚಿಕೆ ಮಾಡಲು ಮತ್ತು ಎರಡು ವಾರಗಳಲ್ಲಿ ಅಗತ್ಯ ಆದೇಶಗಳನ್ನು ಹೊರಡಿಸಲು ಕೆಇಎಗೆ ನಿರ್ದೇಶನ ನೀಡಿದೆ. ಅಲ್ಲದೇ, ಕೆಇಎಗೆ ₹ 1 ಲಕ್ಷ ದಂಡ ವಿಧಿಸಿತು.

ಅರ್ಜಿದಾರರ ಪರ ವಕೀಲೆ ಅಕ್ಕಮಹಾದೇವಿ ಹಿರೇಮಠ ವಾದ ಮಂಡಿಸಿದ್ದರು.ರಾಜ್ಯ ಮತ್ತು ಡಿಎಂಇ ಪರವಾಗಿ ವಕೀಲ ಸುದೇವ್ ಹೆಗ್ಡೆ ವಾದ ಮಂಡಿಸಿದ್ದರು. ಎನ್‌ಎಂಸಿಯನ್ನು ವಕೀಲ ಎನ್ ಖೆಟ್ಟಿ ಪ್ರತಿನಿಧಿಸಿದ್ದರು. ಜಯದೇವ ಸಂಸ್ಥೆಯನ್ನು ವಕೀಲೆ ಡಿ ಜೆ ರಕ್ಷಿತಾ ಪ್ರತಿನಿಧಿಸಿದ್ದರು. ಮತ್ತೊಬ್ಬ ಅಭ್ಯರ್ಥಿಯನ್ನು ವಕೀಲ ಎಸ್ ಬಿ ಮುಕ್ಕಣ್ಣಪ್ಪ ಪ್ರತಿನಿಧಿಸಿದ್ದರು.

[ಆದೇಶ ಓದಿ]

Dr Rajesh Kumar D v State of Karnataka and Ors..pdf
Preview